20ನೇ ಶತಮಾನದಲ್ಲಿ ಹಗರಣಗಳ ಮೇಲೆ ಹಗರಣ ಮಾಡಿದವರಿಗೆ 21ನೇ ಶತಮಾನದ ಮತದಾರರು ಶಿಕ್ಷಿಸಲಿದ್ದಾರೆ…

>

ಚಿತ್ರದುರ್ಗ: ಕಾಂಗ್ರೆಸ್​ನ ನಾಲ್ಕು ತಲೆಮಾರಿನ ಮುಖಂಡರು ಭ್ರಷ್ಟಾಚಾರದಲ್ಲಿ ಮುಳುಗಿ ದೇಶದ ಹಿತಾಸಕ್ತಿಯನ್ನು ಬಲಿಗೊಟ್ಟರು. 20ನೇ ಶತಮಾನದಲ್ಲಿ ಬೋಪೋರ್ಸ್​ ಹಗರಣದಿಂದ ಆರಂಭಗೊಂಡು ನ್ಯಾಷನಲ್​ ಹೆರಾಲ್ಡ್​ ಹಗರಣ, ಕಾಮನ್ವೆಲ್ತ್​ ಹಗರಣ, 2 ಜಿ ಹಗರಣ, ಕಲ್ಲಿದ್ದಲು ಹಗರಣ ಸೇರಿ ಹಲವು ಹಗರಣಗಳನ್ನು ಮಾಡಿದರು. ಅವರು ಮಾಡಿದ ಈ ಎಲ್ಲ ತಪ್ಪಿಗೆ 21ನೇ ಶತಮಾನದ ಯುವ ಮತದಾರರು ಕಾಂಗ್ರೆಸ್​ಗೆ ಸರಿಯಾದ ರೀತಿಯಲ್ಲಿ ಶಿಕ್ಷಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜನೆಗೊಂಡಿದ್ದ ಬಿಜೆಪಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಉಗ್ರರ ಮೇಲೆ ದಾಳಿ ಮಾಡಿದಾಗ ಪಾಕಿಸ್ತಾನದವರಿಗೆ ನೋವಾಯಿತು. ಇಡೀ ವಿಶ್ವ ಭಾರತದೊಂದಿಗೆ ನಿಂತರೂ, ಭಾರತದಲ್ಲಿರುವ ಮಹಾಮಿಲಾವಟಿ ದಳ ಸಂಸತ್​ನಲ್ಲಿ ಖಂಡನಾ ನಿರ್ಣಯ ಮಂಡಿಸಲು ಯತ್ನಿಸಿತು. ವಿಶೇಷವಾಗಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಮುಖಂಡರ ಕಣ್ಣಲ್ಲಿ ಕಣ್ಣೀರು ಜಿನುಗಿತು. ಆದ್ದರಿಂದ, ನಿಮ್ಮ ವೋಟ್​ ಬ್ಯಾಂಕ್​ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲೋ ಎಂದು ಇವರಿಗೆ ಪ್ರಶ್ನಿಸಲು ಬಯಸುತ್ತೇನೆ ಎಂದರು.

ಮಹಾಮಿಲಾವಟಿ ದಳದವರಿಗೆ ಭಾರತದ ಬಗ್ಗೆ ಪ್ರೀತ್ಯಾದರಗಳು ಇಲ್ಲ. ಭಾರತೀಯ ಯೋಧರ ಮೇಲೆ ನಂಬಿಕೆಯಿಲ್ಲ. ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶ ಮಾಡಿರುವ ಸಾಧನೆಯ ಬಗ್ಗೆ ಹೆಮ್ಮೆ ಇಲ್ಲ. ಇಂಥ ದಳದವರಿಗೆ ಸರಿಯಾದ ಪಾಠ ಕಲಿಸುವ ಸಮಯ ಇದೀಗ ಒದಗಿ ಬಂದಿದೆ ಎಂದರು ಹೇಳಿದರು.

ಸೋತವರ ಸರ್ಕಾರ
ಕರ್ನಾಟಕದಲ್ಲಿ ಯಾರು ಸರ್ಕಾರ ನಡೆಸುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಚುನಾವಣೆಯಲ್ಲಿ ಸೋತಿದ್ದ ಎರಡು ಪಕ್ಷಗಳು ಸ್ವಾರ್ಥ ಮತ್ತು ಅಧಿಕಾರದಾಹದಿಂದ ಒಂದಾಗಿ ಸರ್ಕಾರ ರಚಿಸಿವೆ. ಈ ಸರ್ಕಾರಕ್ಕೆ ಕರ್ನಾಟಕ ರಾಜ್ಯದ ಹಿತಾಸಕ್ತಿಯ ಬಗ್ಗೆ ಎಳ್ಳಷ್ಟೂ ಗಮನವಿಲ್ಲ. ಕೇಂದ್ರದಲ್ಲೂ ಇಂಥದ್ದೇ ಮಹಾಮಿಲಾವಟಿ ಸರ್ಕಾರ ಅಧಿಕಾರಕ್ಕೆ ಬಂದರೆ, ರಿಮೋಟ್​ ಹಿಡಿದು ಅದನ್ನು ನಿಯಂತ್ರಿಸಿಕೊಂಡು, ಮನಬಂದಂತೆ ಆಡಳಿತ ನಡೆಸಬಹುದು ಎಂಬುದು ಇವುಗಳ ಲೆಕ್ಕಾಚಾರವಾಗಿದೆ ಎಂದು ಕರ್ನಾಟಕದಲ್ಲಿನ ಕಾಂಗ್ರೆಸ್​ ಮತ್ತು ಜನತಾದಳ ಸಮ್ಮಿಶ್ರ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ದಶಕಗಳಿಂದಲೂ ಭದ್ರಾ ಮೇಲ್ಡಂಡೆ ಯೋಜನೆ ನನೆಗುದಿಗೆ ಬಿದ್ದಿದೆ. ಕಾಂಗ್ರೆಸ್​ ಮತ್ತು ಜೆಡಿಎಸ್​ನವರಿಗೆ ಜನರ ಹಿತಾಸಕ್ತಿ ಕಾಯುವ ಬಗ್ಗೆ ಆಸಕ್ತಿ ಇದ್ದಿದ್ದರೆ, ಈ ಭಾಗದ ರೈತರ ಜೀವನವನ್ನು ಉಜ್ವಲಗೊಳಿಸುವ ಆಸಕ್ತಿ ಇದ್ದಿದ್ದರೆ, ಈ ಯೋಜನೆಯನ್ನು ಅನುಷ್ಠಾನಗೊಳಿಸಿ, ಭೂಮಿ ಹಸಿರಾಗುವಂತೆ ಮಾಡುತ್ತಿದ್ದರು ಎಂದು ಹೇಳಿದರು.

ವಿಶೇಷ ಕಂಬಳಿ, ಶ್ರೀ ತಿಪ್ಪೇರುದ್ರಸ್ವಾಮಿ ರಥದ ಪ್ರತಿಕೃತಿ ಉಡುಗೊರೆ
ಚಳ್ಳಕೆರೆ ಭಾಗದಲ್ಲಿ ವಿಶೇಷವಾಗಿ ಹೆಣೆಯುವ ಬಿಜೆಪಿಯ ಕಮಲ ಚಿಹ್ನೆಯನ್ನು ಒಳಗೊಂಡಿದ್ದ ಬಿಳಿ ಬಣ್ಣದ ಕಂಬಳಿ ಹಾಗೂ ಶ್ರಮಕ್ಕೆ ತಕ್ಕಂತೆ ಪ್ರತಿಫಲ ಎಂಬ ತತ್ವಾದರ್ಶವನ್ನು ಸಾರಿದ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ರಥದ ಪ್ರತಿಕೃತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿ ಸನ್ಮಾನಿಸಲಾಯಿತು.

ದಾವಣಗೆರೆ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್​, ತುಮಕೂರು ಕ್ಷೇತ್ರದ ಅಭ್ಯರ್ಥಿ ಜಿ.ಎಸ್​. ಬಸವರಾಜ್​, ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ನಾರಾಯಣಸ್ವಾಮಿ, ಶಾಸಕರಾದ ಶ್ರೀರಾಮಲು, ಅಶೋಕ್​ ಮತ್ತಿತರ ನಾಯಕರು ಉಪಸ್ಥಿತರಿದ್ದರು.