ಮಹಾಘಟಬಂಧನಕ್ಕೆ ಪ್ರತಿಪಕ್ಷಗಳ ಜೈಕಾರ

ನವದೆಹಲಿ: ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ರಕ್ಷಿಸಲು ಮಹಾಘಟಬಂಧನ ರಚಿಸದೆ ಬೇರೆ ದಾರಿಯಿಲ್ಲ ಎಂಬ ನಿರ್ಧಾರ ಸೋಮವಾರ ನಡೆದ ವಿಪಕ್ಷಗಳ ಸಭೆಯಲ್ಲಿ ವ್ಯಕ್ತವಾಗಿದೆ.

ಮಂಗಳವಾರ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ರೂಪಿಸಬೇಕಾದ ಕಾರ್ಯತಂತ್ರದ ಬಗ್ಗೆಯೂ ಮುಖಂಡರು ರ್ಚಚಿಸಿದರು.

ಟಿಡಿಪಿ ಅಧ್ಯಕ್ಷ ಹಾಗೂ ಆಂಧ್ರಪ್ರದೇಶ ಸಿಎಂ ಎನ್.ಚಂದ್ರಬಾಬು ನಾಯ್ಡು ಸಂಘಟಿಸಿದ್ದ ಈ ಸಭೆಯಲ್ಲಿ 21 ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಎಚ್.ಡಿ.ದೇವೇಗೌಡ, ಸಿಎಂ ಅರವಿಂದ ಕೇಜ್ರಿವಾಲ್ ಹಾಗೂ ಸಿಎಂ ಮಮತಾ ಬ್ಯಾನರ್ಜಿ, ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್, ನ್ಯಾಷನಲ್ ಕಾನ್ಪರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್, ಎಲ್​ಜೆಪಿ ಮುಖಂಡ ಶರದ್ ಯಾದವ್ ಸಭೆಯಲ್ಲಿ ಭಾಗಿಯಾಗಿದ್ದರು.

ಮಾಯಾವತಿ-ಅಖಿಲೇಶ್ ಗೈರು

ಉತ್ತರ ಪ್ರದೇಶದಲ್ಲಿ ಮಹಾಮೈತ್ರಿಯ ಕಹಳೆ ಊದಿದ್ದ ಬಹುಜನ ಸಮಾಜ ಪಕ್ಷದ (ಬಿಎಸ್​ಪಿ) ಮುಖ್ಯಸ್ಥೆ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ (ಎಸ್​ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಪೆಟ್ಟು ನೀಡಬೇಕು ಎಂದು ಬಯಸಿರುವ ಮಹಾಘಟಬಂಧನದಲ್ಲಿನ ಒಡಕನ್ನು ಇದು ಸೂಚಿಸುತ್ತದೆಯೇ ಎಂಬ ಸಂದೇಹ ಮೂಡಿದೆ.

ವಿಪಕ್ಷಗಳ ಸಭೆ ಅವಕಾಶವಾದಿಗಳ ಕೂಟ. ಭ್ರಷ್ಟರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಏನು ಮಾಡಬೇಕು ಎಂದು ರ್ಚಚಿಸಲು ಸಭೆ ನಡೆಸಿದ್ದಾರೆ.

| ಸಂಬಿತ್ ಪಾತ್ರಾ, ಬಿಜೆಪಿ ವಕ್ತಾರ

 

ಮಹಾಘಟ ಬಂಧನ ರಚನೆ ಮಾಡುವುದು ದೊಡ್ಡ ವಿಷಯವಲ್ಲ. ತಾಕತ್ತಿದ್ದರೆ ಮೈತ್ರಿಯಿಂದ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಲಿ.

| ಕೈಲಾಶ್ ವಿಜಯವರ್ಗಿಯಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Leave a Reply

Your email address will not be published. Required fields are marked *