ಮೈಸೂರು: ನಗರದ ಹುಣಸೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ 21 ದಿನಗಳ ಅಖಂಡ ಮೌನ, ರಾಜಯೋಗ ಧ್ಯಾನ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ವಿಶ್ವ ವಿದ್ಯಾಲಯದ ಪ್ರಾಂಶುಪಾಲ ಬಿ.ಕೆ. ರಂಗನಾಥ ಶಾಸ್ತ್ರೀ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಹಾಗೆ ಮೌನವು ಮಾನವನ ಅಂತರಂಗದ ಸಂಶೋಧನೆಗೆ ಒಳಪಡುತ್ತದೆ. ಆಂತರಿಕ ಶಕ್ತಿಗಳು ವೃದ್ಧಿಯಾಗುತ್ತದೆ. ಅವಗುಣಗಳು ದೂರವಾಗುತ್ತದೆ. ಚಾರಿತ್ರೃವಂತರಾಗುತ್ತಾರೆ ಎಂದು ತಿಳಿಸಿದರು.
ನಡವಳಿಕೆಗಳು ಸುಧಾರಣೆಯಾಗುತ್ತದೆ. ವ್ಯಕ್ತಿತ್ವ ವಿಕಸನವಾಗುತ್ತದೆ. ಮೂಲ ನಿಶ್ಯಕ್ತತೆಗಳು ದೂರವಾಗುತ್ತವೆ. ಮುಖದಲ್ಲಿ ದಿವ್ಯ ತೇಜಸ್ಸು ಮೂಡುತ್ತದೆ. ಸರ್ವತೋಮುಖ ಬೆಳವಣಿಗೆ ಹೊಂದುತ್ತಾರೆ. ಸಂಪೂರ್ಣ ಆರೋಗ್ಯವಂತರಾಗುತ್ತಾರೆ ಎಂದು ಹೇಳಿದರು.
ಮೈಸೂರು ಉಪವಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜಿ ಮಾತನಾಡಿ, ಇಪ್ಪತ್ತೊಂದು ದಿನಗಳ ಒಂದೊಂದು ಕ್ಷಣವೂ ಅಮೂಲ್ಯವಾಗಿದ್ದು, ರಾಜಯೋಗ ಧ್ಯಾನ ಜ್ಞಾನ ಧ್ಯಾನ ತಪಸ್ಸಿಗೆ ವಿಶೇಷವಾಗಿ ಒತ್ತನ್ನು ನೀಡಿ ಇದರ ಪೂರ್ಣ ಲಾಭ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಿಟ್ರೀಟ್ ಸೆಂಟರ್‌ನ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಶಾರದಾಜಿ ಮಾತನಾಡಿ, 21 ದಿನಗಳ ದಿನಚರಿಯ ಪೂರ್ಣ ಮಾಹಿತಿ ನೀಡಿದರು. ಚಾಮರಾಜನಗರ ಜಿಲ್ಲಾ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಪ್ರಭಾಮಣಿಜೀ, ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಪುರಸ್ಕತೆ ರಾಜ ಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ, ಮಣಿಅಣ್ಣ, ಸಂತೋಷ, ಕುಮಾರ ಇತರರಿದ್ದರು.
