More

  2020 ಮುನ್ನೋಟ; ಹಳೇ ರೀಲು ಹೊಸ ರೋಲು

  2020ರಲ್ಲಿ ಬಾಲಿವುಡ್​ನಲ್ಲಿ ತರಹೇವಾರಿ ಸಿನಿಮಾಗಳು ಭರ್ಜರಿ ಆಗಿ ತೆರೆಗೆ ಅಪ್ಪಳಿಸಲಿವೆ. ಆ ಪೈಕಿ ಸೀಕ್ವೆಲ್, ಬಯೋಪಿಕ್ ಹಾಗೂ ವಿಭಿನ್ನ ಕಥಾನಕಗಳ ಸಿನಿಮಾಗಳೇ ಅಗ್ರಪಂಕ್ತಿಯಲ್ಲಿ ಇರುವುದು ಈ ಸಲದ ವಿಶೇಷ. ಹಳೇ ಚಿತ್ರ, ಹಳೇ ಘಟನೆಗಳ ಜಾಡಿನ ಜತೆಗೆ ಪ್ರಯೋಗಗಳು ಒಂದೆಡೆಯಾದರೆ, ಮತ್ತೊಂದೆಡೆ ಕಮರ್ಷಿಯಲ್ ಸಿನಿಮಾಗಳು ಸರತಿಯಲ್ಲಿವೆ. ಇವೆಲ್ಲವುಗಳ ಜತೆಯಲ್ಲಿಯೇ ಟ್ವೆಂಟಿ-ಟ್ವೆಂಟಿಯ ಬಾಲಿವುಡ್ ಪಯಣ ಸಾಗಲಿದೆ.

  ಬಯೋಪಿಕ್ಸ್

  ಸತ್ಯಘಟನೆ ಅಥವಾ ಜೀವನಾಧಾರಿತ ಸಿನಿಮಾಗಳಿಗೆ ಈ ಸಲ ಬಾಲಿವುಡ್​ನಲ್ಲೇನೂ ಕೊರತೆ ಇಲ್ಲ. ಆಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್​ವಾಲ್ ಜೀವನಾಧಾರಿತ ‘ಚಪಕ್’ ಸಿನಿಮಾದಲ್ಲಿ ನಾಯಕಿ ಆಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದು, ವರ್ಷದ ಮೊದಲ ತಿಂಗಳಲ್ಲೇ ಇದು ಬಿಡುಗಡೆ ಆಗಲಿದೆ. ಛತ್ರಪತಿ ಶಿವಾಜಿ ಜೀವನಾಧಾರಿತ ‘ತಾನಾಜಿ: ಆನ್ ಅನ್​ಸಂಗ್ ವಾರಿಯರ್’, ಭಾರತದ ಮೊದಲ ಏರ್​ಫೋರ್ಸ್ ವುಮನ್ ಗುಂಜನ್ ಸಕ್ಸೆನಾ ಜೀವನಾಧಾರಿತ ‘ದ ಟ್ರೂ ಸ್ಟೋರಿ ಆಫ್ ಗುಂಜನ್ ಸಕ್ಸೆನಾ: ದ ಕಾರ್ಗಿಲ್ ಗರ್ಲ್’, ಕಂಗನಾ ರಣಾವತ್ ನಾಯಕಿ ಆಗಿ ನಟಿಸಿರುವ ಕಬಡ್ಡಿ ಆಟಗಾತಿ ಜಯಾ ನಿಗಮ್ ಜೀವನಗಾಥೆ ಒಳಗೊಂಡ ‘ಪಂಗ’, 1983ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದದ್ದನ್ನೇ ಆಧರಿಸಿ ನಿರ್ವಿುಸಿರುವ ‘83’, 1800ನೇ ಇಸವಿಯ ಡಕಾಯಿತರ ಕಥೆ ಇರುವ ‘ಷಂಷೇರಾ’ ಚಿತ್ರಗಳು 2020ರ ಹೈಲೈಟ್ಸ್. ಜಯಲಲಿತಾ, ಗಣಿತಜ್ಞೆ ಶಕುಂತಲಾದೇವಿ ಕುರಿತ ಸಿನಿಮಾಗಳು ಸಾಲಿನಲ್ಲಿವೆ.

  ಸರಣಿ ಸೀಕ್ವೆಲ್

  ‘ಶುಭ ಮಂಗಲ್ ಜ್ಯಾದಾ ಸಾವ್​ಧಾನ್’, ‘ಸ್ಟ್ರೀಟ್ ಡಾನ್ಸರ್ 3ಡಿ’ ಮತ್ತು ‘ಭೂಲ್ ಭುಲಯ್ಯ 2’ ಚಿತ್ರಗಳು ಕ್ರಮವಾಗಿ ಹಿಟ್ ಎನಿಸಿಕೊಂಡಿರುವ ‘ಶುಭ ಮಂಗಲ್ ಸಾವ್​ಧಾನ್’, ‘ಎಬಿಸಿಡಿ2’ ಮತ್ತು ‘ಭೂಲ್ ಭುಲಯ್ಯ’ ಚಿತ್ರಗಳ ಸೀಕ್ವೆಲ್ ಆಗಿರುವುದರಿಂದ ಕುತೂಹಲ ಹೆಚ್ಚಿಸಿವೆ. ಅಲ್ಲದೆ ಸೀಕ್ವೆಲ್​ಗಳಾಗಿ ‘ಭಾಗಿ 3’, ‘ಸಡಕ್ 2’, ‘ಸತ್ಯಮೇವ ಜಯತೇ 2’, ‘ಹಂಗಾಮಾ 2’, ‘ದೋಸ್ತಾನಾ 2’, ಹೃತಿಕ್ ರೋಷನ್ ಕ್ರಿಶ್ 4 ಮೂಲಕ ಆಗಮಿಸುವ ಹುರುಪಿನಲ್ಲಿದ್ದಾರೆ.

  ವಿಭಿನ್ನ ವಿಶಿಷ್ಟ

  ವಿದೇಶಿ ಶಿಕ್ಷಣ ವ್ಯವಸ್ಥೆ ಕುರಿತ ‘ಅಂಗ್ರೇಜಿ ಮೀಡಿಯಂ’ ಸದ್ಯ ಬಾಲಿವುಡ್​ನಲ್ಲಿ ಕುತೂಹಲ ಮೂಡಿಸಿದೆ. 2017ರಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆಯ ಲೋಪ-ದೋಷಗಳನ್ನು ಆಧರಿಸಿ ಮಾಡಲಾಗಿದ್ದ ‘ಹಿಂದಿ ಮೀಡಿಯಂ’ ಸ್ಪೂರ್ತಿಯಿಂದ ಈ ಸಿನಿಮಾ ಸಿದ್ಧವಾಗುತ್ತಿದೆ. ಪೊಲೀಸ್ ಸೀರೀಸ್​ನಲ್ಲಿ ರೋಹಿತ್ ಶೆಟ್ಟಿ ಮಾಡುತ್ತಿರುವ ನಾಲ್ಕನೇ ಸಿನಿಮಾ ‘ಸೂರ್ಯವಂಶಿ’. ಈ ಚಿತ್ರದಲ್ಲಿ ಉಗ್ರರ ಕುರಿತ ಕಥೆ ಇರುವುದರಿಂದ ಕುತೂಹಲ ಸೃಷ್ಟಿಸಿದೆ. ಇತ್ತ ‘ಬಚ್ಚನ್ ಪಾಂಡೆ’, ‘ಬೆಲ್ ಬಾಟಂ’, ’ಲಕ್ಷ್ಮೀ ಬಾಂಬ್’ ಸಿನಿಮಾಗಳೂ ಕೈಯಲ್ಲಿವೆ. ‘ಗುಲಾಬೊ ಸಿತಾಬೊ’ ಚಿತ್ರ ಅಮಿತಾಭ್ ಬಚ್ಚನ್ ಅವರ ವಿಭಿನ್ನ ಲುಕ್​ನಿಂದಲೇ ಗಮನ ಸೆಳೆಯುತ್ತಿದೆ. ವಯೋವೃದ್ಧ ಗುಲಾಬೊ ಆಗಿ ಕಾಣಿಸಿಕೊಂಡಿರುವ ಬಚ್ಚನ್​ಗೆ ಆಯುಷ್ಮಾನ್ ಖುರಾನಾ ಜತೆಯಾಗಿದ್ದಾರೆ. ತೆಲುಗಲ್ಲಿ ತೆರೆ ಕಂಡಿದ್ದ ‘ಜೆರ್ಸಿ’ ಸಿನಿಮಾ ಹಿಂದಿಯಲ್ಲಿ ಅದೇ ಶೀರ್ಷಿಕೆಯಲ್ಲಿ ರಿಮೇಕ್ ಆಗುತ್ತಿದೆ. ಗೌತಮ್ ತಿನ್ನನೂರಿ ನಿರ್ದೇಶನದ ಈ ಸಿನಿಮಾದಲ್ಲಿ ಶಾಹೀದ್ ಕಪೂರ್ ನಾಯಕನಾಗಿ ನಟಿಸುತ್ತಿದ್ದಾರೆ.

  ಅಚ್ಚರಿ ಮೂಡಿಸ್ತಾರಾ ಖಾನ್​ತ್ರಯರು?

  ಖಾನ್ ತ್ರಯರ ಪೈಕಿ ಸಲ್ಮಾನ್ ಖಾನ್ ‘ರಾಧೆ’ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಇತ್ತ 2019ರಲ್ಲಿ ತೆರೆಯಿಂದ ಕಾಣೆಯಾಗಿದ್ದ ಆಮಿರ್ ಖಾನ್ ಲಾಲ್​ಸಿಂಗ್ ಛಡ್ಡಾ ಅವತಾರವೆತ್ತಿದ್ದು, ಲುಕ್ ಮೂಲಕವೇ ಗಮನ ಸೆಳೆಯುತ್ತಿದ್ದಾರೆ. ಶಾರುಖ್ ಖಾನ್ ಯಾವ ನಿರ್ದೇಶಕನ ಜತೆ ಕೈ ಜೋಡಿಸಿದ್ದಾರೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ರಾಜ್​ಕುಮಾರ್ ಹಿರಾನಿ, ತಮಿಳು ನಿರ್ದೇಶಕ ಅಟ್ಲಿ ಜತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಮೂವರ ಪೈಕಿ ಆಮಿರ್ ಮತ್ತು ಸಲ್ಮಾನ್ ಬರುವುದು ನಿಕ್ಕಿಯಾಗಿದ್ದು, ಶಾರುಖ್ ಇನ್ನೂ ಡೌಟ್​ನಲ್ಲೇ ಇದ್ದಾರೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts