2020ರ ವೇಳೆಗೆ ನಿರಂತರ ನೀರು

ರಾಣೆಬೆನ್ನೂರ: ನಗರದ ನಿವಾಸಿಗಳಿಗೆ ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಅಮೃತ ಸಿಟಿ ಯೋಜನೆಯಡಿ ಆರಂಭಿಸಿರುವ 24*7 ನೀರು ಪೂರೈಕೆ ಕಾಮಗಾರಿ ಭರದಿಂದ ಸಾಗಿದ್ದು, 2020ರ ವೇಳೆಗೆ ಮುಕ್ತಾಯವಾಗಲಿದೆ.

ಅಮೃತಸಿಟಿ ಯೋಜನೆಯಡಿ ಸುಮಾರು 116 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೊತ್ತಿಕೊಂಡಿದ್ದು, ಕಳೆದ ವರ್ಷದಿಂದ ನಗರದಲ್ಲಿ ಕಾಮಗಾರಿ ನಡೆದಿದೆ. ಈಗಾಗಲೇ ಪೈಪ್​ಲೈನ್ ಅಳವಡಿಕೆ ಹಾಗೂ ಜಲಾಗಾರ ನಿರ್ವಣದಲ್ಲಿ ನಿಗದಿತ ಗುರಿ ತಲುಪಿದ್ದು, ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವುದು ಬಾಕಿ ಇದೆ.

ನಲ್ಲಿ ಸಂಪರ್ಕಕ್ಕೆ ಹಿನ್ನಡೆ: ನಗರದಲ್ಲಿ ಗೃಹ, ಗೃಹೇತರ ಹಾಗೂ ವಾಣಿಜ್ಯ ಸೇರಿ 23,598 ನಲ್ಲಿಗಳಿವೆ. ಗುತ್ತಿಗೆದಾರರು ಈಗಾಗಲೇ 7100 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಬೇಕಾಗಿತ್ತು. ಆದರೆ, ಕೇವಲ 4200 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿದ್ದಾರೆ. ಸದ್ಯ ಎರಡು ಬಡಾವಣೆಯಲ್ಲಿ ನಲ್ಲಿ ಸಂಪರ್ಕ ಪೂರ್ಣಗೊಳಿಸಿ ಪ್ರಾಯೋಗಿಕವಾಗಿ ಆರಂಭಿಸಿ ಪರಿಶೀಲಿಸಿದ್ದೇವೆ. ಪೈಪ್​ಲೈನ್ ಅಳವಡಿಕೆ ಪೂರ್ಣಗೊಂಡ ಬಳಿಕ ನಲ್ಲಿ ಸಂಪರ್ಕ ಕಾಮಗಾರಿ ಕೂಡ ವೇಗವಾಗಲಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಶೇ. 60ರಷ್ಟು ಕಾಮಗಾರಿ: ನಗರದಲ್ಲಿ 295 ಕಿ.ಮೀ. ಉದ್ದದ ಪೈಪ್​ಲೈನ್ ಅಳವಡಿಕೆ ಗುರಿ ಹೊಂದಿದ್ದು, ಈಗಾಗಲೇ 170 ಕಿ.ಮೀ. ಅಳವಡಿಕೆ ಮುಗಿದಿದೆ. 125 ಕಿ.ಮೀ. ಬಾಕಿಯಿದೆ. 5 ಕಡೆಗಳಲ್ಲಿ 52 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯವಿರುವ ಮೇಲ್ಮಟ್ಟದ ನೀರಿನ ಟ್ಯಾಂಕ್ ಹಾಗೂ ಇಲ್ಲಿಯ ಮಾರುತಿ ನಗರದಲ್ಲಿ 17.6 ಎಂಎಲ್​ಡಿ ನೀರು ಶುದ್ಧೀಕರಣ ಘಟಕದ ಕಾಮಗಾರಿ ಶೇ. 70ರಷ್ಟು ಮುಗಿದಿದೆ.

ತಾಲೂಕಿನ ಮುದೇನೂರ ಗ್ರಾಮದ ತುಂಗಭದ್ರಾ ನದಿಪಾತ್ರದಲ್ಲಿರುವ ಜಾಕ್​ವೇಲ್​ನಿಂದ 12 ಕಿ.ಮೀ. ದೂರದಲ್ಲಿರುವ ತಾಲೂಕಿನ ಮಾಗೋಡ ಬಳಿ ನೀರು ಸಂಗ್ರಹಿಸಿ, ಶುದ್ಧೀಕರಿಸಲಾಗುವುದು. ಅದಕ್ಕಾಗಿ ಈಗಾಗಲೇ 2 ಕಿ.ಮೀ. ವರೆಗೆ ಬೃಹತ್ ಪೈಪ್​ಲೈನ್ ಹಾಕಲಾಗಿದೆ. ಈಗಾಗಲೇ ನಗರಕ್ಕೆ ತುಂಗಾಭದ್ರಾ ನದಿಯಿಂದ ನೀರು ಪೂರೈಕೆ ಮಾಡುತ್ತಿರುವ 45 ಲಕ್ಷ ಲೀಟರ್ ಸಾಮರ್ಥ್ಯದ 4 ಮೇಲ್ಮಟ್ಟದ ಜಾಲಾಗಾರಗಳನ್ನು ಈ ಯೋಜನೆಗೆ ಬಳಸಿಕೊಳ್ಳಲಾಗುತ್ತಿದೆ.

ದೆಹಲಿ ಮೂಲದ ಮೆ. ವಿಯೊಲೀಯಾ ಇಂಡಿಯಾ ಕಂಪನಿ ಕಾಮಗಾರಿ ಗುತ್ತಿಗೆ ಪಡೆದಿದ್ದು, ಮುಂದಿನ 2020ಕ್ಕೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲಿದೆ. 2028ರವರೆಗೆ ನಿರ್ವಹಣೆ ಕೂಡ ಗುತ್ತಿಗೆದಾರರೇ ಮಾಡಲಿದ್ದಾರೆ. ಕಾಮಗಾರಿ ನಿಗದಿತ ಸಮಯದಲ್ಲಿ ಮುಗಿದರೆ 2020ಕ್ಕೆ 24*7 ನೀರು ಪೂರೈಕೆ ಆರಂಭವಾಗಲಿದೆ.

ರಸ್ತೆ ದುರಸ್ತಿಗೆ ಒತ್ತಾಯ: ಪೈಪ್​ಲೈನ್ ಅಳವಡಿಕೆ ಹಿನ್ನೆಲೆಯಲ್ಲಿ ಅಲ್ಲಲ್ಲಿ ರಸ್ತೆ ಅಗೆಯಲಾಗಿದೆ. ಆದರೆ, ಮರು ಡಾಂಬರೀಕರಣ ಹಾಗೂ ಕಾಂಕ್ರಿಟ್ ರಸ್ತೆ ದುರಸ್ತಿ ಕಾರ್ಯ ಮಾಡದ ಕಾರಣ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತಿದೆ. ಮಳೆಗಾಲ ಆರಂಭವಾದರೆ ರಸ್ತೆಗಳು ಕೆಸರಿನ ಗುಂಡಿಗಳಾಗುತ್ತವೆ. ಆದ್ದರಿಂದ ಮಳೆ ಆರಂಭವಾಗುವ ಮುನ್ನವೇ ರಸ್ತೆ ದುರಸ್ತಿ ಪಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

24*7 ಕುಡಿಯುವ ನೀರಿನ ಕಾಮಗಾರಿ ನಡೆದಿರುವುದು ಸ್ವಾಗತಾರ್ಹ. ಆದರೆ, ಗುತ್ತಿಗೆದಾರರು ರಸ್ತೆಗಳನ್ನು ಅಗೆದು ಹಾಗೇ ಬಿಟ್ಟಿದ್ದಾರೆ. ಮಳೆ ಆರಂಭವಾಗುವ ಮುನ್ನವೇ ಅವುಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಇಲ್ಲವಾದರೆ ಸಾರ್ವಜನಿಕರು ತೀವ್ರ ತೊಂದರೆ ಎದುರಿಸಬೇಕಾಗುತ್ತದೆ.
| ವಿನೋದ ಕೆ., ಸ್ಥಳೀಯ ನಿವಾಸಿ

24*7 ನೀರು ಪೂರೈಕೆ ಕಾಮಗಾರಿ ಚುರುಕಿನಿಂದ ನಡೆದಿದೆ. 2020ರ ವೇಳೆಗೆ ಎಲ್ಲ ಕಾಮಗಾರಿ ಮುಗಿದು ಸಾರ್ವಜನಿಕರಿಗೆ ನೀರು ಒದಗಿಸಲಾಗುವುದು. ಮಳೆ ಆರಂಭವಾಗುವ ಮುನ್ನವೇ ರಸ್ತೆ ದುರಸ್ತಿ ಪಡಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗುವುದು.
| ಡಾ. ಎನ್. ಮಹಾಂತೇಶ, ರಾಣೆಬೆನ್ನೂರ ನಗರಸಭೆ ಆಯುಕ್ತ

Leave a Reply

Your email address will not be published. Required fields are marked *