2020ಕ್ಕೆ ಜಲ ಜಂಜಾಟಕ್ಕೆ ವಿರಾಮ

ಆನಂದ ಅಂಗಡಿ ಹುಬ್ಬಳ್ಳಿ

ಹುಬ್ಬಳ್ಳಿ-ಧಾರವಾಡದ ಜನತೆ ಇನ್ನೂ ಏಳೆಂಟು ತಿಂಗಳು ಕುಡಿಯುವ ನೀರಿನ ಸಮಸ್ಯೆ ಅನುಭವಿಸುವುದು ಅನಿವಾರ್ಯ.

ಮಹಾನಗರ ಪಾಲಿಕೆಯಲ್ಲಿದ್ದ 26 ಕೋಟಿ ರೂ. ಬಳಸಿಕೊಂಡು ಮಲಪ್ರಭಾ ಜಲಾಶಯದಿಂದ ಹೆಚ್ಚುವರಿ ನೀರು ಸಂಗ್ರಹಿಸಲು ರಾಜ್ಯ ಸರ್ಕಾರ ತಡವಾಗಿ ಅನುಮತಿ ನೀಡಿದ್ದರಿಂದ ಸಮಸ್ಯೆ ನಿವಾರಣೆ ತಡವಾಗಿದೆ.

ಪಾಲಿಕೆ ಬೊಕ್ಕಸದಲ್ಲಿದ್ದ 26 ಕೋಟಿ ರೂ. ಬಳಸಿಕೊಳ್ಳಲು ರಾಜ್ಯ ಸರ್ಕಾರ ಸುಮಾರು ಒಂದು ವರ್ಷ ಅನುಮತಿ ನೀಡದೇ, ಮೀನಮೇಷ ಎಣಿಸಿದ್ದರ ಪರಿಣಾಮವನ್ನು ಅವಳಿನಗರದ ಜನತೆ ಅನುಭವಿಸುವಂತಾಗಿದೆ.

ಇದೀಗ 26 ಕೋಟಿ ರೂ. ಬಳಸಿಕೊಂಡು ಮಲಪ್ರಭಾ ಜಲಾಶಯದಿಂದ ಹೆಚ್ಚುವರಿ ನೀರು ಸಂಗ್ರಹಿಸಿ, ಅಮ್ಮಿನಬಾವಿಯ ಜಲಸಂಗ್ರಹಾರದಲ್ಲಿ ನೀರು ಶುದ್ಧೀಕರಣಗೊಳಿಸಲು ಬೇಕಾದ ಸಿದ್ಧತೆ ಕಾಮಗಾರಿಗಳು ನಡೆಯುತ್ತಿವೆ. ಈ ಎಲ್ಲ ಕಾಮಗಾರಿ ಇದೇ ಡಿಸೆಂಬರ್​ನಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, 2020ರ ಜನವರಿ-ಫೆಬ್ರವರಿಯಲ್ಲಿ ಹುಬ್ಬಳ್ಳಿಗೆ ಹೆಚ್ಚುವರಿ ನೀರು ಪೂರೈಕೆಯಾಗಲಿದೆ.

ಸದ್ಯ ಕೆಲ ಬಡಾವಣೆಗಳಲ್ಲಿ 8-10 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದ್ದು, 2020ರ ಪ್ರಾರಂಭದಿಂದ 4-5 ದಿನಗಳಿಗೊಮ್ಮೆ ನೀರು ಪೂರೈಸುವ ನಿರೀಕ್ಷೆ ಇದೆ.

ಮಲಪ್ರಭಾ ಜಲಾಶಯದಿಂದ ಇದೀಗ ನಿತ್ಯ 170 ಎಂಎಲ್​ಡಿ ನೀರು ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ಹುಬ್ಬಳ್ಳಿಗೆ 100 ಎಂಎಲ್​ಡಿ, ಧಾರವಾಡಕ್ಕೆ 65 ಎಂಎಲ್​ಡಿ ಹಾಗೂ ಅಮ್ಮಿನಬಾವಿ ಸುತ್ತಲಿನ ಕೆಲ ಗ್ರಾಮಗಳಿಗೆ 5 ಎಂಎಲ್​ಡಿ ನೀರು ಪೂರೈಸಲಾಗುತ್ತಿದೆ.

26 ಕೋಟಿ ರೂ.ಗಳಲ್ಲಿ ಮಲಪ್ರಭಾ ಜಲಾಶಯದಲ್ಲಿ ಒಂದು ಪಂಪಿಂಗ್ ಯಂತ್ರ, ಅಮ್ಮಿನಬಾವಿಯಲ್ಲಿ ಒಂದು ಪಂಪಿಂಗ್ ಯಂತ್ರ ಹಾಗೂ ನೀರು ಶುದ್ಧೀಕರಣ ಘಟಕ ನಿರ್ವಿುಸಲಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಂಡಲ್ಲಿ ಮಲಪ್ರಭಾ ಜಲಾಶಯದಿಂದ ಹೆಚ್ಚುವರಿಯಾಗಿ ನಿತ್ಯ 40 ಎಂಎಲ್​ಡಿ ನೀರು ಸಂಗ್ರಹಿಸಬಹುದಾಗಿದ್ದು, ಈ ನೀರಿನ ಬಹುತೇಕ ಪ್ರಮಾಣವನ್ನು ಹುಬ್ಬಳ್ಳಿಗೆ ಪೂರೈಸಲು ನಿರ್ಧರಿಸಲಾಗಿದೆ. ಇದರಿಂದ ನೀರಸಾಗರ ಜಲಾಶಯದ ಮೇಲಿನ ಅವಲಂಬನೆ ತಪ್ಪಿದಂತಾಗುತ್ತದೆ.

8.95 ಕೋಟಿ ರೂ. ವೆಚ್ಚದಲ್ಲಿ ಅಮ್ಮಿನಬಾವಿಯಲ್ಲಿ ಪಂಪ್​ಹೌಸ್, ನೀರು ಶುದ್ಧೀಕರಣ ಘಟಕ ಸೇರಿದಂತೆ ಇನ್ನಿತರ ಉಪಕರಣಗಳನ್ನು ಹೊಂದಿರುವ ಕಟ್ಟಡಗಳ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ.

ಮಲಪ್ರಭಾ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹ ಇದ್ದರೂ ಸಂಪನ್ಮೂಲಗಳ ಕೊರತೆಯಿಂದಾಗಿ ಹೆಚ್ಚುವರಿ ನೀರು ಎತ್ತಲು ಸಾಧ್ಯವಾಗಿರಲಿಲ್ಲ. ಪಾಲಿಕೆಯಲ್ಲಿನ ಹಣ ಬಳಸಿಕೊಳ್ಳಲು ರಾಜ್ಯ ಸರ್ಕಾರ ಅನುಮತಿ ನೀಡಿದ ನಂತರ ಹೆಚ್ಚುವರಿ ನೀರು ಎತ್ತಲು ಬೇಕಾದ ಕಾಮಗಾರಿ ಕೈಗೊಳ್ಳಲು ಹೈದ್ರಾಬಾದ್ ಮೂಲದ ಮೆ.

ಡಿಆರ್​ಎಸ್ ಇನ್​ಫ್ರಾಟೆಕ್ ಪ್ರೖೆ.ಲಿ. ಗೆ ಕರ್ನಾಟಕ ಅರ್ಬನ್ ವಾಟರ್ ಸಪ್ಲೈ ಆಂಡ್ ಡ್ರೖೆನೇಜ್ ಬೋರ್ಡ್ ಗುತ್ತಿಗೆ ನೀಡಿದೆ. ಹೀಗಾಗಿ ಮಹಾನಗರದ ಜನತೆ ಇನ್ನೂ

7-8 ತಿಂಗಳು ನೀರಿನ ಸಮಸ್ಯೆ ಎದುರಿಸದೇ ಬೇರೆ ದಾರಿ ಇಲ್ಲದಂತಾಗಿದೆ.

ಡಿಸೆಂಬರ್​ನಲ್ಲಿ ಪೂರ್ಣ ಮಲಪ್ರಭಾ ಜಲಾಶಯದಿಂದ ಹೆಚ್ಚುವರಿಯಾಗಿ 40 ಎಂಎಲ್​ಡಿ ನೀರು ಎತ್ತಲು ಅಗತ್ಯವಿರುವ ಕಾಮಗಾರಿ ಡಿಸೆಂಬರ್​ನಲ್ಲಿ ಪೂರ್ಣಗೊಳ್ಳಲಿದ್ದು, 2020ರ ಜನವರಿ ಅಥವಾ ಫೆಬ್ರವರಿಯಿಂದ ಹುಬ್ಬಳ್ಳಿಗೆ ಹೆಚ್ಚು ನೀರು ಪೂರೈಸಲಾಗುವುದು. ಇದರಿಂದ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ಹೆಸರು ಹೇಳಲಿಚ್ಛಿಸದ ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.

Leave a Reply

Your email address will not be published. Required fields are marked *