ನಮ್ಮದು ಭ್ರಷ್ಟಾಚಾರ ಮುಕ್ತ ಆಡಳಿತ, 2019ರಲ್ಲಿ ಬಿಜೆಪಿ ಗೆಲ್ಲುವುದು ಖಚಿತ: ನರೇಂದ್ರ ಮೋದಿ

ನವದೆಹಲಿ: 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಖಚಿತ. ಕಳೆದ ಬಾರಿ ಸೋತ ಕಡೆಗಳಲ್ಲೂ ಬಿಜೆಪಿ ಗೆಲ್ಲುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನಡೆಯುತ್ತಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಎರಡನೇ ದಿನ ಸಮಾರೋಪ ಭಾಷಣ ಮಾಡಿದ ಅವರು, ಇಂದು ನಾನು ಹೆಚ್ಚು ಮಾತನಾಡಲು ಬಯಸುತ್ತೇನೆ. 2 ಕೋಣೆ, ಇಬ್ಬರು ಸಂಸದರಿಗೆ ಸೀಮಿತವಾಗಿದ್ದ ಪಕ್ಷವು ಇಂದು ಕಾರ್ಯಕರ್ತರಿಂದಲೇ ದೊಡ್ಡ ಪಕ್ಷವಾಗಿ ಬೆಳೆದಿದೆ. ಬಿಜೆಪಿ ಕಾರ್ಯಕರ್ತರಿಗೆ ಈ ದಿನವನ್ನು ಅರ್ಪಿಸುತ್ತಿದ್ದೇನೆ ಎಂದರು.

ಅಟಲ್​ಜಿಗೆ ನಮಿಸುತ್ತೇನೆ

ಪ್ರಸ್ತುತ ದೇಶದ 17 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಅಟಲ್ ಬಿಹಾರಿ ವಾಜಪೇಯಿ ದೇಶಕ್ಕಾಗಿ ದುಡಿದವರು ಅವರಿಗೆ ನಮಿಸುತ್ತೇನೆ. ಅಟಲ್​ಜೀ ಅವರ ಮೌಲ್ಯಗಳೊಂದಿಗೆ ಮುನ್ನಡೆಯಬೇಕಿದೆ ಎಂದು ಹೇಳಿದರು.

ಎನ್​ಡಿಎ ವಿರುದ್ಧ ಒಂದೂ ಭ್ರಷ್ಟಾಚಾರದ ಆರೋಪ ಇಲ್ಲ. ದೇಶದ ಜನರಲ್ಲಿ ಬಿಜೆಪಿ ಬಗ್ಗೆ ಒಳ್ಳೆಯ ವಿಶ್ವಾಸವಿದೆ. ಭ್ರಷ್ಟಾಚಾರ ಆರೋಪವಿಲ್ಲದೆ ಉತ್ತಮ ಆಡಳಿತ ನೀಡಿದ್ದೇವೆ. ಹಿಂದಿನ ಸರ್ಕಾರ ದೇಶದ ಜನರನ್ನು ಕತ್ತಲಲ್ಲಿ ಇಟ್ಟಿತ್ತು. ಕೇಂದ್ರ ಸರ್ಕಾರ ಪ್ರಾಮಾಣಿಕ ಹಾದಿಯಲ್ಲಿ ನಡೆಯುತ್ತಿದೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ನಮ್ಮ ಧ್ಯೇಯವಾಕ್ಯ. ಬಿಜೆಪಿ ಕೇವಲ ಅಭಿವೃದ್ಧಿಯ ಹಾದಿಯಲ್ಲೇ ನಡೆಯುತ್ತದೆ. ಪ್ರತಿಯೊಂದು ಪೈಸೆಯನ್ನೂ ಅಭಿವೃದ್ಧಿಗೆ ಬಳಸುತ್ತಿದ್ದೇವೆ ಎಂದರು.

10% ಮೀಸಲಾತಿಯಿಂದ ಯುವಕರಿಗೆ ಅನುಕೂಲವಾಗುತ್ತದೆ. ಮೀಸಲಾತಿ ಡಾ.ಅಂಬೇಡ್ಕರ್ ಅವರು ಕೊಟ್ಟ ಕೊಡುಗೆ. ಮೀಸಲಾತಿ ಹೆಸರಿನಲ್ಲಿ ವಿರೋಧಿಗಳಿಂದ ಷಡ್ಯಂತ್ರ ನಡೆಯುತ್ತಿದೆ. ವಿರೋಧಿಗಳ ಷಡ್ಯಂತ್ರಕ್ಕೆ ಬಿಜೆಪಿ ಬಲಿಯಾಗುವುದಿಲ್ಲ. ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಕ್ಕೆ 10% ಮೀಸಲಾತಿಯನ್ನು ನೀಡಲಾಗಿದ್ದು, ಯಾರಿಂದಲೋ ಕಸಿದು ಯಾರಿಗೋ ಮೀಸಲಾತಿ ನೀಡಿಲ್ಲ. ಹಿಂದಿನಿಂದಲೂ ಮೀಸಲಾತಿ ಪಡೆಯುತ್ತಿದ್ದವರಿಗೆ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು. (ಏಜೆನ್ಸೀಸ್)

Leave a Reply

Your email address will not be published. Required fields are marked *