ಗೌರಿ ಶಂಕರ

ಕಾಲಚಕ್ರದ ನಿರ್ಣಯದಂತೆ ಬ್ರಹ್ಮಾಂಡಕ್ಕೆ ಎದುರಾದ ಕಂಟಕಗಳನ್ನು ಮತ್ತು ಕಂಟಕಪ್ರಾಯರನ್ನು ನಿಗ್ರಹಿಸಿದವನು ಶಿವ. ತ್ರಿಮೂರ್ತಿಗಳಲ್ಲಿ ಲಯಕಾರಕನಾದ ಶಿವ ಹಠಯೋಗಿ, ಜಟಾಧರ, ಭಸ್ಮಾಂಗಿ, ತ್ರಿನೇತ್ರಧರ, ಗಂಗಾಧರ ಎಂಬ ವಿವಿಧ ರೂಪಗಳಿಂದ ಭಕ್ತರ ಮನದಲ್ಲಿ ನೆಲೆಸಿದ್ದಾನೆ. ಪುರಾಣಕಥನದಂತೆ ಋಷಿ ಶಾಪದಿಂದಾಗಿ ಕಲಿಯುಗದಲ್ಲಿ ಲಿಂಗರೂಪಿಯಾದರೂ, ಶಿವನ ಲೀಲೆಗಳ ಹಿಂದಿನ ಮರ್ಮವನ್ನು ಅರಿಯಲು ನಮ್ಮಿಂದ ಬಿಡಿ, ಮಹಾತಪಸ್ವಿಗಳಿಂದಲೂ ಹಲವು ಬಾರಿ ಸಾಧ್ಯವಾಗಿಲ್ಲ. ಲಿಂಗರೂಪಿ ಶಿವನಿಗೆ ಹಲವು ಧಾರ್ವಿುಕ ಕ್ಷೇತ್ರಗಳಲ್ಲಿ ಅಲ್ಲಿನ ಮಹಿಮೆಗೆ ಅನುಗುಣವಾಗಿ ದಿನನಿತ್ಯ ವಿವಿಧ ರೂಪಗಳ ಅಲಂಕಾರ ನಡೆಯುತ್ತದೆ. ಲಿಂಗವಾಗಿಯೇ ಶಿವ ಮಂಜುನಾಥನಾಗುತ್ತಾನೆ, ಇನ್ನು ಕೆಲವೆಡೆ ಗೋಕರ್ಣನಾಥ, ಕಾಶಿನಾಥ, ಮಲ್ಲಿಕಾರ್ಜುನ, ಮಲೆಮಹದೇಶ್ವರ, ಮಹಾಕಾಳ, ಕೇದಾರನಾಥನಾಗಿ ಭಕ್ತರ ಅಭೀಷ್ಟಗಳನ್ನು ಈಡೇರಿಸುತ್ತಿದ್ದಾನೆ. ಇಂಥ ಶಿವನನ್ನು ಮನಸ್ಸಿನಲ್ಲಿ ತುಂಬಿಕೊಂಡಿರುವ ಭಕ್ತರು ಆತನ ರೂಪಗಳನ್ನು ಹಲವು ವೈಶಿಷ್ಟ್ಯತೆಗಳಿಂದ ಕೂಡಿದ ಬೃಹತ್ ಮೂರ್ತಿಗಳಾಗಿ ದೇಶದ ಹಲವೆಡೆ ನಿರ್ವಿುಸಿ ಪೂಜಿಸುತ್ತಿದ್ದಾರೆ. ಅಂಥ ವೈಶಿಷ್ಟ್ಯಪೂರ್ಣ ಮಹಾದೇವನ ಮೂರ್ತಿಗಳ ಕುರಿತಾದ ಇಣುಕು ನೋಟ ಇಲ್ಲಿದೆ.

ಬಾಲೇಶ್ವರ ಮಹಾದೇವ

ಸ್ಥಳ: ಭಂಜನಗರ, ಗಂಜಾಂ, ಒಡಿಶಾ

ಎತ್ತರ: 61 ಅಡಿ

ವಿಶೇಷತೆ: ಜಲಾಶಯದ ಮಡಿಲಲ್ಲಿರುವ ಬೆಟ್ಟದ ಮೇಲಿನ ಶಿವನ ಮೂರ್ತಿ. ಎದುರಿಗೆ 21 ಅಡಿ ನಂದಿ ಮೂರ್ತಿ.

ಒಡಿಶಾದ 119 ವರ್ಷಗಳ ಹಳೆಯ ಭಂಜನಗರ ಜಲಾಶಯದ ಪಕ್ಕದ ಬೆಟ್ಟದ ಮೇಲಿರುವ ಶಿವನ ಮೂರ್ತಿಯಿದು. ಭಂಜನಗರ ನೀರಾವರಿ ಇಲಾಖೆ ನೌಕರರ ಸಾಂಸ್ಕೃತಿಕ ಸಂಘದಿಂದ 2013ರಲ್ಲಿ ಇದರ ನಿರ್ವಣವಾಗಿದೆ. 25 ಚದರ ಮೈಲಿಗಳ ಜಲಾಶಯದ ಪಕ್ಕದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಸಂಘದಿಂದ ಬಿಜು ಪಟ್ನಾಯಕ್ ಮಕ್ಕಳ ಉದ್ಯಾನ ನಿರ್ವಿುಸಲಾಗಿದ್ದು. ಅಲ್ಲಿಗೆ ಭೇಟಿ ನೀಡುವವರು ತಪ್ಪದೇ ಶಿವನ ದರ್ಶನ ಪಡೆಯುತ್ತಾರೆ.


ಕೈಲಾಸನಾಥ

ಸ್ಥಳ: ಸಂಗಾ, ನೇಪಾಳ

ಎತ್ತರ: 144 ಅಡಿ

ವಿಶೇಷತೆ: ವಿಶ್ವದ ಅತೀ ಎತ್ತರದ ಶಿವನ ಮೂರ್ತಿ.

ನಿಂತಿರುವ ಭಂಗಿಯಲ್ಲಿರುವ ಈಶ್ವರನ ಮೂರ್ತಿಯಿದು. 2003ರಲ್ಲಿ ಕಮಲ್ ಜೈನ್ ಎಂಬ ಉದ್ಯಮಿ ಮೂರ್ತಿಯನ್ನು ನಿರ್ವಿುಸಲು ಸಂಕಲ್ಪ ಮಾಡಿ 2010ರಲ್ಲಿ ಕಾರ್ಯ ಪೂರ್ಣಗೊಂಡಿತು. ತಾಮ್ರ, ಉಕ್ಕು, ಸತು (ಝಿಂಕ್) ಮತ್ತು ಸಿಮೆಂಟ್ ಬಳಸಿ ಬೃಹತ್ ಮೂರ್ತಿ ನಿರ್ವಿುಸಲಾಗಿದೆ. ಭೂಕಂಪ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಮೂರ್ತಿಗೆ ಹಾನಿಯಾಗದಂತೆ ರಕ್ಷಿಸಲು ಅಂದಾಜು 100 ಅಡಿಗಳಷ್ಟು ಅಡಿಪಾಯ ತೋಡಿ ಅದರ ಮೇಲೆ ಮೂರ್ತಿ ನಿಲ್ಲಿಸಲಾಗಿದೆ. ವಿಶ್ವದ ಅತೀ ಎತ್ತರದ ಮೂರ್ತಿಗಳ ಪಟ್ಟಿಯಲ್ಲಿ 40ನೇ ಸ್ಥಾನ ಕೈಲಾಸನಾಥನಿಗಿದೆ. ಪ್ರತಿ ನಿತ್ಯ 5 ಸಾವಿರ ಪ್ರವಾಸಿಗರು ಶಿವನನ್ನು ಕಣ್ತುಂಬಿಕೊಳ್ಳಲು ಆಗಮಿಸುವುದರಿಂದ ನೇಪಾಳ ಸರ್ಕಾರ ಈ ಸ್ಥಳವನ್ನು ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿದೆ.


ಸರ್ವೆಶ್ವರ ಮಹಾದೇವ

ಸ್ಥಳ: ವಡೋದರಾ, ಗುಜರಾತ್

ಎತ್ತರ: 36.5 ಮೀ (120 ಅಡಿ)

ವಿಶೇಷತೆ: ಕೆರೆ ಮಧ್ಯದಲ್ಲಿ ನಿಂತಿರುವ ಶಿವನ ಮೂರ್ತಿ.

ವಡೋದರಾ ನಗರದ ಹೃದಯ ಭಾಗದಲ್ಲಿ 18ನೇ ಶತಮಾನದಲ್ಲಿ ಸುರ್​ಸಾಗರ್ ಕೆರೆ (ಚಂದನ್ ತಲಾವೊ) ನಿರ್ವಿುಸಲಾಯಿತು. ನಂತರ 2002ರಲ್ಲಿ ಮಹಾನಗರ ಸೇವಾ ಸದನ ವತಿಯಿಂದ ನಿಂತಿರುವ ಭಂಗಿಯ ಈ ಬೃಹತ್ ಶಿವನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ದೋಣಿಗಳ ಮೂಲಕ ಶಿವ ಮೂರ್ತಿ ಬಳಿಗೆ ತೆರಳಲು ಅವಕಾಶವಿದೆ. ಕೆರೆಯ ಆಳದಲ್ಲಿ ದ್ವಾರಗಳಿದ್ದು, ಈ ಮೂಲಕ ವಿಶ್ವಾಮಿತ್ರ ನದಿಗೆ ಕೆರೆಯ ನೀರನ್ನು ಹರಿಸಿ ಸ್ವಚ್ಛ ಮಾಡಲು ಅನುಕೂಲವಾಗುತ್ತದೆ.


ಆದಿಯೋಗಿ

ಸ್ಥಳ: ಕೊಯಮತ್ತೂರು, ತಮಿಳುನಾಡು

ಎತ್ತರ: 122 ಅಡಿ

ವಿಶೇಷತೆ: ಎದೆ ಭಾಗದವರೆಗಿನ ಬೃಹತ್ ಶಿವನ ಮೂರ್ತಿ ಎಂದು ಗಿನ್ನೆಸ್ ದಾಖಲೆ

ಈಶ ಪ್ರತಿಷ್ಠಾನದ ಸದ್ಗುರು ಜಗ್ಗಿ ವಾಸುದೇವ್ ಪರಿಕಲ್ಪನೆಯ ಮೂರ್ತಿಯಿದು. 2017ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ ಮೂರ್ತಿಯನ್ನು ಯೋಗಿಗಳ ಮೂಲಪುರುಷ ಎಂಬ ಪರಿಕಲ್ಪನೆ ಅಡಿಯಲ್ಲಿ ನಿರ್ವಿುಸಲಾಗಿದೆ. ಬಹುಪಾಲು ಉಕ್ಕು ಬಳಸಿ ನಿರ್ವಿುಸಲಾಗಿರುವ ಮೂರ್ತಿಯನ್ನು 8 ತಿಂಗಳಲ್ಲಿ ನಿಖರವಾಗಿ 112 ಅಡಿ ಎತ್ತರ ಕಾಯ್ದುಕೊಳ್ಳುವಂತೆ ಕಟ್ಟಲಾಗಿದೆ. ಮೋಕ್ಷ ಸಾಧನೆಗಿರುವ 112 ಮಾರ್ಗಗಳನ್ನು ಇದು ಪ್ರತಿನಿಧಿಸುತ್ತದೆ.


ಮುರ್ಡೆಶ್ವರ

ಸ್ಥಳ: ಉತ್ತರ ಕನ್ನಡ ಜಿಲ್ಲೆ, ಕರ್ನಾಟಕ

ಎತ್ತರ: 123 ಅಡಿ

ವಿಶೇಷತೆ: ವಿಶ್ವದ 2ನೇ ಅತೀ ಎತ್ತರದ ಶಿವನ ಮೂರ್ತಿ

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಅರಬ್ಬಿ ಸಮುದ್ರ ತೀರದಲ್ಲಿ ಕುಳಿತಿರುವ ಭಂಗಿಯಲ್ಲಿರುವ ಶಿವನ ಮೂರ್ತಿಯಿದು. ಕಂದುಕ ಗಿರಿ ಎಂಬ ಚಿಕ್ಕ ಶಿಖರದ ಮೇಲಿನ ಮೂರ್ತಿಯನ್ನು ಉದ್ಯಮಿ ಆರ್.ಎನ್.ಶೆಟ್ಟಿ ನಿರ್ವಿುಸಿದ್ದಾರೆ. 20 ಮಹಡಿ ಎತ್ತರದ ಆಕರ್ಷಕ ಗೋಪುರ ಕೂಡ ಮುರ್ಡೆಶ್ವರದಲ್ಲಿ ನೋಡಬಹುದು. ವ್ಯಾಘ್ರ ಚರ್ಮದ ಮೇಲೆ ಪದ್ಮಾಸನದಲ್ಲಿ ಜ್ಞಾನ ಮುದ್ರೆಯಲ್ಲಿ ಕೂತಿರುವ ಶಿವ, ಡಮರು ಮತ್ತು ತ್ರಿಶೂಲ ಹಿಡಿದಿದ್ದಾನೆ. ಈ ಮೂರ್ತಿಯ ಸುತ್ತ ಗಂಗೆ ಭೂಮಿಗಿಳಿದ ಕಥಾನಕದ ಪ್ರತೀಕವಾದ ಮೂರ್ತಿಗಳು, ಗೀತೋಪದೇಶ ಮತ್ತು ರಾವಣ ಆತ್ಮಲಿಂಗವನ್ನು ಪಡೆದ ಸನ್ನಿವೇಶ ನಿರೂಪಿಸುವ ಮೂರ್ತಿಗಳನ್ನು ನಿರ್ವಿುಸಲಾಗಿದೆ.


ಶಿವಗಿರಿ

ಸ್ಥಳ: ವಿಜಯಪುರ, ಕರ್ನಾಟಕ

ಎತ್ತರ: 85 ಅಡಿ

ವಿಶೇಷತೆ: ಕರ್ನಾಟಕದ 2ನೇ ಅತೀ ಎತ್ತರದ ಶಿವನ ಮೂರ್ತಿ.

ವಿಜಯಪುರದ ಸಿಂದಗಿ ರಸ್ತೆಯಲ್ಲಿನ ಈ ಮೂರ್ತಿಯನ್ನು ಟಿ.ಕೆ.ಪಾಟೀಲ್ ಬನಕಟ್ಟಿ ದತ್ತಿ ಟ್ರಸ್ಟ್ ನಿರ್ವಿುಸಿದೆ. ಸಿಮೆಂಟ್ ಮತ್ತು ಉಕ್ಕು ಬಳಸಿ ಮೂರ್ತಿ ನಿರ್ವಿುಸಲಾಗಿದ್ದು, 2006ರ ಶಿವರಾತ್ರಿಯಂದು ಮೂರ್ತಿ ಲೋಕಾರ್ಪಣೆಗೊಂಡಿತು. 1500 ಟನ್ ತೂಕವಿರುವ ಈ ಮೂರ್ತಿಯ ಕೆಳಭಾಗದಲ್ಲಿ ಪೂಜೆಗಾಗಿ ಸಣ್ಣ ಶಿವಲಿಂಗ ಪ್ರತಿಷ್ಠಾಪಿಸಲಾಗಿದ್ದು, ಸೂರ್ಯನ ಕಿರಣ ಬಿದ್ದಕೂಡಲೇ ಹೊಳಪಿನಿಂದ ಕಂಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ. ಧ್ಯಾನಾಸಕ್ತರ ಅನುಕೂಲಕ್ಕಾಗಿ 18 ಎಕರೆ ವಿಶಾಲ ಪ್ರದೇಶದಲ್ಲಿ ಆಸನ ವ್ಯವಸ್ಥೆ ಜತೆಗೆ ನೈಸರ್ಗಿಕ ವಾತಾವರಣ ನಿರ್ವಣಕ್ಕೂ ಒತ್ತು ನೀಡಲಾಗಿದೆ.


ಓಂಕಾರೇಶ್ವರ

ಸ್ಥಳ: ಖಾಂಡ್ವಾ, ಮಧ್ಯಪ್ರದೇಶ

ಎತ್ತರ: 82 ಅಡಿ

ವಿಶೇಷತೆ: ಜ್ಯೋತಿರ್ಲಿಂಗ ಸಾನ್ನಿಧ್ಯದಲ್ಲಿರುವ ಮೂರ್ತಿ.

ನರ್ಮದಾ ನದಿ ತೀರದ ದ್ವೀಪದಲ್ಲಿರುವ ಜ್ಯೋತಿರ್ಲಿಂಗ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಈ ಮೂರ್ತಿಯಿದೆ. ಶಿವನಿಗೆ ಬೆನ್ನು ಮಾಡಿ ಸಣ್ಣ ನಂದಿ ಮೂರ್ತಿ ಮುಂಭಾಗದಲ್ಲಿದ್ದು, ಪೂರ್ಣ ಅನುಗ್ರಹ ರೂಪದಲ್ಲಿ ಶಿವ ಆಸೀನನಾಗಿದ್ದಾನೆ. ಓಂಕಾರ ರೂಪದಲ್ಲಿ ದ್ವೀಪದಲ್ಲಿ ಪ್ರತಿ ಹುಣ್ಣಿಮೆ ಮತ್ತು ಶಿವರಾತ್ರಿ ಸಂದರ್ಭದಲ್ಲಿ ಜನಜಂಗುಳಿ ಹೆಚ್ಚಿರುತ್ತದೆ. ದ್ವೀಪವನ್ನು ಒಂದು ಸುತ್ತು ಹಾಕಿದರೆ ಓಂಕಾರೇಶ್ವರ ಪರಿಕ್ರಮದಿಂದ ಮಹಾಪಾಪಗಳು ನಾಶವಾಗುತ್ತವೆ ಎಂದ ಪ್ರತೀತಿ ಇದೆ.


ನಾಗೇಶ್ವರ

ಸ್ಥಳ: ದ್ವಾರಕಾ, ಗುಜರಾತ್

ಎತ್ತರ: 82 ಅಡಿ

ವಿಶೇಷತೆ: ಸ್ವಯಂಭೂ ಜ್ಯೋತಿರ್ಲಿಂಗ ಕ್ಷೇತ್ರದಲ್ಲಿನ ಬೃಹತ್ ಮೂರ್ತಿ.

ಸೌರಾಷ್ಟ್ರದ ಕರಾವಳಿ ತೀರದ ಪ್ರಸಿದ್ಧ ನಾಗೇಶ್ವರ ದೇವಸ್ಥಾನದಲ್ಲಿನ ಆವರಣದಲ್ಲಿ ವಿಶಾಲ ಉದ್ಯಾನ ನಿರ್ವಿುಸಿ ಅದರ ಮಧ್ಯದಲ್ಲಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸಣ್ಣ ನೀರಿನ ಕುಂಡವನ್ನು ಇಲ್ಲಿ ನಿರ್ವಿುಸಲಾಗಿದ್ದು , ಗುಜರಾತ್​ನಲ್ಲಿರುವ 2ನೇ ಜ್ಯೋತಿರ್ಲಿಂಗದ ಮಡಿಲಿನಲ್ಲಿರುವ ಈ ಮೂರ್ತಿಗೆ ಶ್ರದ್ಧಾಳುಗಳು ಜ್ಯೋತಿರ್ಲಿಂಗದಷ್ಟೇ ಭಕ್ತಿಭಾವ ತೋರುತ್ತಾರೆ.

 


ಸಿದ್ಧೇಶ್ವರ ಧಾಮ

ಸ್ಥಳ: ಸೊಲೊಫೊಕ್ ಶಿಖರ, ನಾಮ್ಚಿ, ಸಿಕ್ಕಿಂ

ಎತ್ತರ: 108 ಅಡಿ

ವಿಶೇಷತೆ: ಚಾರ್​ಧಾಮ್ ದೇವಸ್ಥಾನಗಳ ಪ್ರತಿಕೃತಿ ಜತೆಗಿರುವ ಏಕೈಕ ಶಿವನ ಮೂರ್ತಿ.

ಈಶಾನ್ಯ ಭಾರತದ ಗುಡ್ಡಗಾಡು ರಾಜ್ಯ ಸಿಕ್ಕಿಂನ ದಕ್ಷಿಣ ಭಾಗದಲ್ಲಿರುವ ನಾಮ್ಚಿ ನಗರದಿಂದ 5 ಕಿ.ಮೀ ದೂರದಲ್ಲಿ ಈ ಬೃಹತ್ ಶಿವನ ಮೂರ್ತಿ ವಿರಾಜಮಾನವಾಗಿದೆ. ಸ್ಥಳೀಯರು ಶಿವನನ್ನು ಕಿರಾತೇಶ್ವರ ಎಂದು ಕರೆಯುತ್ತಾರೆ. ದ್ವಾದಶ ಜ್ಯೋತಿರ್ಲಿಂಗಗಳು, ಚಾರ್​ಧಾಮ್ ಯಾತ್ರೆಯ ಪ್ರಸಿದ್ಧ ನಾಲ್ಕು ದೇವಸ್ಥಾನಗಳನ್ನು ಹೋಲುವ ಪ್ರತಿಕೃತಿಗಳನ್ನು ಶಿವನ ಸುತ್ತಲು ನಿರ್ವಿುಸಲಾಗಿದೆ. 29.9 ಹೆಕ್ಟೇರ್ ಪ್ರದೇಶದಲ್ಲಿ ಸಿಕ್ಕಿಂ ಸರ್ಕಾರ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಈ ತಾಣ ಅಭಿವೃದ್ಧಿಪಡಿಸಿದೆ. ಅತೀ ವಿಭಿನ್ನ ಮತ್ತು ಕ್ರಿಯಾಶೀಲ ನಿರ್ಮಾಣ ವಿಭಾಗದಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿ ಕೂಡ 2012ರಲ್ಲಿ ಈ ಸ್ಥಳಕ್ಕೆ ಸಿಕ್ಕಿದೆ.


ಕೋಟಿಲಿಂಗೇಶ್ವರ

ಸ್ಥಳ: ಕಮ್ಮಸಂದ್ರ, ಬಂಗಾರಪೇಟೆ ತಾಲೂಕು, ಕೋಲಾರ ಜಿಲ್ಲೆ

ಎತ್ತರ: 108 ಅಡಿ

ವಿಶೇಷತೆ: ವಿಶ್ವದ ಅತಿ ಎತ್ತರದ ಶಿವಲಿಂಗ

ಇಲ್ಲಿ ಸಹಸ್ರಾರು ಶಿವಲಿಂಗಗಳ ಸಂಗ್ರಹವಿರುವುದರಿಂದ ಕೋಟಿಲಿಂಗೇಶ್ವರ ಎಂಬ ಅನ್ವರ್ಥ ನಾಮ ಬಂದಿದೆ. ಶಿವಲಿಂಗದ ಎದುರು 32 ಅಡಿಯ ಬಸವಣ್ಣ (ನಂದಿ) ಪ್ರಮುಖ ಆಕರ್ಷಣೆ. 1974ರಲ್ಲಿ ಕಮ್ಮಸಂದ್ರದ ಶ್ರೀ ಸಾಂಬಶಿವಮೂರ್ತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಕೋಟಿ ಶಿವಲಿಂಗ ಸ್ಥಾಪನೆ ಕಾರ್ಯ ಆರಂಭವಾಯಿತು. ನಂತರ ಇಲ್ಲಿಗೆ ಬರುವ ಯಾತ್ರಾರ್ಥಿಗಳು, ಭಕ್ತರಿಂದ ಲಿಂಗಗಳ ಪ್ರತಿಷ್ಠಾಪನೆ ಕಾರ್ಯ ಮುಂದುವರಿದು ಲಿಂಗಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. 15 ಎಕರೆ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಶಿವಲಿಂಗಗಳನ್ನು ಕಂಡು ಭಕ್ತಿಪರವಶರಾಗುತ್ತೇವೆ.


ಹರ್ ಕೀ ಪೌಡಿ

ಸ್ಥಳ: ಹರಿದ್ವಾರ, ಉತ್ತರಾಖಂಡ

ಎತ್ತರ: 100 ಅಡಿ

ವಿಶೇಷತೆ: ವಿಷ್ಣುವಿನ ಸನ್ನಿಧಾನದಲ್ಲಿರುವ ಶಿವನ ಮೂರ್ತಿ.

ಪುರಾಣ ಪ್ರಸಿದ್ಧ ಹರಿದ್ವಾರದ ಗಂಗಾ ತಟದಲ್ಲಿ ನಿಂತಿರುವ ಶಿವನ ಮೂರ್ತಿಯಿದು. ಹರ್ ಕೀ ಪೌಡಿ ಎಂದರೆ ಶಿವನ ಹೆಜ್ಜೆ ಗುರುತು ಎಂದರ್ಥ. ವಿಷ್ಣು ಮತ್ತು ಶಿವ ಹರಿದ್ವಾರದ ಬ್ರಹ್ಮಕುಂಡಕ್ಕೆ ಭೇಟಿಕೊಟ್ಟಿದ್ದರು ಎಂದು ಪುರಾಣದಲ್ಲಿ ಉಲ್ಲೇಖವಿದೆ. ಅದರ ಕುರುಹಾಗಿ ಬೃಹತ್ ಪಾದಗಳ ಪ್ರತಿಕೃತಿ ಇಲ್ಲಿದೆ. ಹರಿದ್ವಾರ ಪ್ರವೇಶಿಸುವಾಗ ಗಂಗೆಯ ಅಡ್ಡವಾಗಿ ನಿರ್ವಿುಸಲಾಗಿರುವ ಸೇತುವೆಯ ಆರಂಭದಲ್ಲಿ ಕಾಣ ಸಿಗುವ ಶಿವನ ಬೃಹತ್ ಮೂರ್ತಿ ಯಾತ್ರಿಕರನ್ನು ಸ್ವಾಗತಿಸುವಂತೆ ಭಾಸವಾಗುತ್ತದೆ.


Leave a Reply

Your email address will not be published. Required fields are marked *