ಒಡೆದ ಮನೆಯಲ್ಲಿ ಗೆದ್ದಿದ್ದ ಕೈಗೆ ಸತ್ವಪರೀಕ್ಷೆ

ಗುಮ್ಮಟನಗರಿ ವಿಜಯಪುರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿತ್ತು. ಬಿಜೆಪಿ-ಕೆಜೆಪಿ ಲಾಭ ಪಡೆದುಕೊಂಡಿದ್ದ ಕಾಂಗ್ರೆಸ್ ಎಂಟು ಕ್ಷೇತ್ರಗಳಲ್ಲಿ ಏಳರಲ್ಲಿ ವಿಜಯಮಾಲೆ ಧರಿಸಿತ್ತು. ಒಂದರಲ್ಲಿ ಮಾತ್ರ ಬಿಜೆಪಿ ಗೆದ್ದಿತ್ತು. ವೈಯಕ್ತಿಕ ವರ್ಚಸ್ಸಿಗಿಂತ ಪ್ರಧಾನಿ ನರೇಂದ್ರ ಮೋದಿ ಮೋಡಿಯೇ ಬಿಜೆಪಿಗೆ ಶ್ರೀರಕ್ಷೆ. ಜತೆಗೆ ವಿ.ಪ. ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿಗೆ ಸೇರ್ಪಡೆಯಾದರೆ ಅನುಕೂಲವಾಗಲಿದೆ ಎಂಬ ಭಾವನೆ ವ್ಯಕ್ತವಾಗಿದೆ. ಈ ಬಾರಿ ಜೆಡಿಎಸ್​ಗೆ ಎ.ಎಸ್. ಪಾಟೀಲ್ ನಡಹಳ್ಳಿ ಸೇರ್ಪಡೆ ಬಲ ತಂದಿದ್ದು, ದೇವರಹಿಪ್ಪರಗಿ ಕ್ಷೇತ್ರದಿಂದ ಅಕಸ್ಮಾತ್ ಕುಮಾರಸ್ವಾಮಿ ಸ್ಪರ್ಧಿಸಿದರೆ ತೆನೆಹೊತ್ತ ಮಹಿಳೆಗೆ ಆನೆಬಲ ಬರಲಿದೆ.

ಪರಶುರಾಮ ಭಾಸಗಿ

ವಿಜಯಪುರ: ಬಿಸಿಲೂರು ಖ್ಯಾತಿಯ ವಿಜಯಪುರದ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಒಂದು ಬಿಜೆಪಿ ವಶದಲ್ಲಿದ್ದರೆ, ಆರು ಕಾಂಗ್ರೆಸ್ ಹಿಡಿತದಲ್ಲಿವೆ. ಇನ್ನೊಂದು ನಡಹಳ್ಳಿ ಬಂಡಾಯಕ್ಕೆ ಛಿದ್ರಗೊಂಡಿದೆ.ನಾಗಠಾಣ ಮೀಸಲು ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಪಾಟೀಲರ ಪ್ರಾಬಲ್ಯವೇ ಹೆಚ್ಚಿದೆ. ಪ್ರತೀ ಕ್ಷೇತ್ರದಲ್ಲೂ ಮೇಲ್ವರ್ಗದ ಅಭ್ಯರ್ಥಿಗಳೇ ಹೆಚ್ಚಿನ ಮನ್ನಣೆ ಗಳಿಸಿದ್ದು, ಜಾತಿ ಆಧಾರಿತ ಚುನಾವಣೆಗೆ ಇದು ಕೈಗನ್ನಡಿ. ಆಂತರಿಕ ಕಲಹ, ಒಗ್ಗಟ್ಟಿನ ಕೊರತೆ, ಪ್ರಬಲ ನಾಯಕತ್ವದ ಅಭಾವ ಮೂರೂ ಪಕ್ಷವನ್ನೂ ಕಾಡುತ್ತಿದೆ. ಜಿಲ್ಲಾ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಚಿವ ಎಂ.ಬಿ. ಪಾಟೀಲ ಹಾಗೂ ಶಾಸಕ ಶಿವಾನಂದ ಪಾಟೀಲರ ಶೀತಲ ಸಮರ ಮತ್ತೆ ಬಿರುಗಾಳಿ ಎಬ್ಬಿಸುವ ಲಕ್ಷಣಗಳು ಗೋಚರಿಸತೊಡಗಿವೆ. ಇನ್ನು ಕಮಲ ಪಾಳೆಯದಿಂದ ಹೊರನಡೆದ ವಿಧಾನಪರಿಷತ್ ಸದಸ್ಯ ಬಸನಗೌಡ ಪಾಟೀಲ (ಯತ್ನಾಳ) ನಡೆ ಕುತೂಹಲಕ್ಕೆ ಕಾರಣವಾಗಿದೆ.


ವಲಸೆ ಪರ್ವದಲ್ಲಿ ಮುದ್ದೇಬಿಹಾಳ

ಕಾಂಗ್ರೆಸ್ ಭದ್ರಕೋಟೆ ಯಾಗಿರುವ ಕ್ಷೇತ್ರ ಶಾಸಕ ಸಿ.ಎಸ್. ನಾಡಗೌಡರ ಹಿಡಿತದಲ್ಲಿದೆ. ಸತತ ಐದು ಬಾರಿ ಶಾಸಕರಾಗಿರುವ ಇವರು, ಆರನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ದೇವರಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಈ ಬಾರಿ ಜೆಡಿಎಸ್​ನಿಂದ ಇಲ್ಲಿ ಸ್ಪರ್ಧಿಸಿದರೆ, ಹಾಲಿ ಶಾಸಕರಿಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ. ಬಿಜೆಪಿ, ಕೆಜೆಪಿ ವಿಲೀನ ಬಳಿಕ ಬಿಜೆಪಿ ಬಲವರ್ಧನೆಯಾಗಿದ್ದು, ಅಭ್ಯರ್ಥಿಯ ಆಯ್ಕೆ ಮೇಲೆ ಕಣದ ರಂಗು ನಿರ್ಧಾರ.


ನಾಗಠಾಣ ಮೇಲೆ ಕಾಂಗ್ರೆಸ್ ಕಣ್ಣು

ನಾಗಠಾಣ ಮೀಸಲು ಮತ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್​ನ ಪ್ರೊ. ರಾಜು ಆಲಗೂರ ಈ ಬಾರಿ ನೇಪಥ್ಯಕ್ಕೆ ಸರಿಯುವ ಮಾತುಗಳಿವೆ. ಕಳೆದ ಬಾರಿ ರನ್ನರ್ ಅಪ್ ಆಗಿದ್ದ ಜೆಡಿಎಸ್​ನ ದೇವಾನಂದ ಚೌವಾಣ ಅನುಕಂಪದ ಅಲೆಯ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಸದರಿ ಅಭ್ಯರ್ಥಿ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಕೆಜೆಪಿ ಅಭ್ಯರ್ಥಿಯಾಗಿದ್ದ ವಿಠಲ ಕಟಕಧೋಂಡ, ಬಿಜೆಪಿಯ ನಾಗೇಂದ್ರ ಮಾಯವಂಶಿ ಟಿಕೆಟ್​ಗಾಗಿ ಪೈಪೋಟಿ ನಡೆಸಿದ್ದಾರೆ. ಶಾಸಕ ಗೋವಿಂದ ಕಾರಜೋಳ ಪುತ್ರ ಗೋಪಾಲ ಕೂಡ ಆಕಾಂಕ್ಷಿ.


ಇವ್ರಿಗೆ ಹ್ಯಾಟ್ರಿಕ್, ಅವ್ರಿಗೆ ಅನುಕಂಪ?

ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ರಮೇಶ ಭೂಸನೂರ ಎರಡನೇ ಬಾರಿಗೆ ಶಾಸಕರಾಗಿದ್ದು, ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿ ಕೇವಲ 752 ಮತಗಳ ಅಂತರದಿಂದ ಕೈ ತಪ್ಪಿಹೋದ ಕ್ಷೇತ್ರ ಮರಳಿ ಪಡೆಯಲು ಜೆಡಿಎಸ್​ನ ಎಂ.ಸಿ. ಮನಗೂಳಿ ಈ ಬಾರಿ ಅನುಕಂಪದ ಅಲೆಯಲ್ಲಿದ್ದಾರೆ. ಕಾಂಗ್ರೆಸ್​ನ ಮಾಜಿ ಶಾಸಕ ಶರಣಪ್ಪ ಸುಣಗಾರ ಇನ್ನೊಂದು ಬಾರಿ ಟಿಕೆಟ್​ಗಾಗಿ ಕಸರತ್ತು ನಡೆಸಿದ್ದು, ಇವರ ಜತೆ ಇನ್ನಿಬ್ಬರು ಆಕಾಂಕ್ಷಿಗಳಿದ್ದಾರೆ.


ಕಮಲ ಅಲೆಯಲ್ಲಿ ಇಂಡಿ

ಕೆಜೆಪಿ, ಬಿಜೆಪಿ ಕಲಹದ ಮಧ್ಯೆ ಕಳೆದ ಬಾರಿ ವಿಜಯದ ನಗೆ ಬೀರಿದ್ದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಭಾರೀ ಅಂತರದಿಂದ ಜಯಸಿದ ಕ್ಷೇತ್ರದಲ್ಲಿ ಬಿಜೆಪಿಯಿಂದ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಮತ್ತು ಮಾಜಿ ಶಾಸಕ ರವಿಕಾಂತ ಪಾಟೀಲ ರೇಸ್​ನಲ್ಲಿದ್ದಾರೆ. ಕಳೆದ ಬಾರಿ ಜೆಡಿಎಸ್​ನಿಂದ ಕಣಕ್ಕಿಳಿದ ಗಾಣಿಗ ಸಮುದಾಯದ ಅಣ್ಣಪ್ಪಗೌಡ ಖೈನೂರ ಬಿಜೆಪಿ ಸೇರಿದ್ದಾರೆ. ಕೇಂದ್ರ ಸಚಿವ ರಮೇಶ ಜಿಗಜಿಣಗಿ ತವರು ಕ್ಷೇತ್ರ ಇದಾಗಿರುವುದರಿಂದ ಬಿಜೆಪಿ ಅಲೆಯೂ ಹೆಚ್ಚಿದ್ದು, 24 ಆಕಾಂಕ್ಷಿಗಳಿದ್ದಾರೆ. ಜೆಡಿಎಸ್​ನಿಂದ ಬಿ.ಡಿ. ಪಾಟೀಲ ಅಥವಾ ಆರ್.ಕೆ. ಪಾಟೀಲ ಕಣಕ್ಕಿಳಿಯುವ ಸಾಧ್ಯತೆ ಇದೆ.


ಬಾಗೇವಾಡಿ ಕೈಗೆ ಬಾಗಿ…

ಕೆಜೆಪಿ-ಬಿಜೆಪಿ-ಬಿಎಸ್​ಆರ್ ಕಾಂಗ್ರೆಸ್​ನ ಒಟ್ಟು ಮತ ಮೀರಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ (56,329) ಭಾರೀ ಅಂತರದಿಂದ ಜಯ ಸಾಧಿಸಿದ ಕ್ಷೇತ್ರ. ಬಿಜೆಪಿಯಿಂದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹಾಗೂ ಸಂಗರಾಜ ದೇಸಾಯಿ ನಡುವೆ ಟಿಕೆಟ್​ಗಾಗಿ ಪೈಪೋಟಿ. ಗಾಣಿಗ ಸಮುದಾಯದ ಈ ಇಬ್ಬರನ್ನು ಹೊರತುಪಡಿಸಿದರೆ ಬಿಜೆಪಿಗೆ ಕ್ಷೇತ್ರದಲ್ಲಿ ಹೇಳಿಕೊಳ್ಳುವಂಥ ಅಭ್ಯರ್ಥಿಗಳಿಲ್ಲ. ಜೆಡಿಎಸ್ ಅಭ್ಯಥಿಯಾಗಿದ್ದ ಸೋಮನಗೌಡ ಪಾಟೀಲ ಈ ಬಾರಿ ಪಕ್ಷೇತರರಾಗಿ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜೆಡಿಎಸ್​ಗೆ ಎಸ್.ಎಸ್. ಪಾಟೀಲ (ಗೂಗಿಹಾಳ) ಸಾರಥಿಯಾಗುವ ಸಾಧ್ಯತೆ ಇದೆ. ವಿಶೇಷವೆಂದರೆ, ಶಿವಾನಂದ ಪಾಟೀಲ ಬಿಜೆಪಿ ಸೇರುತ್ತಾರೆಂಬ ಕೂಗು ಬಲವಾಗಿದೆ.


ಬಬಲೇಶ್ವರ – ಪಾಟೀಲರ ಪಾರಮ್ಯ

ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರ ತವರು ಕ್ಷೇತ್ರ, ಕಳೆದ ಬಾರಿ ಜೆಡಿಎಸ್​ನಿಂದ ಕಣಕ್ಕಿಳಿದಿದ್ದ ಸಾಂಪ್ರದಾಯಿಕ ಎದುರಾಳಿ ವಿಜುಗೌಡ ಪಾಟೀಲ ಈ ಸಲ ಬಿಜೆಪಿ ಘೊಷಿತ ಅಭ್ಯರ್ಥಿ. ಪಕ್ಷಕ್ಕಿಂತ ಇಲ್ಲಿ ವ್ಯಕ್ತಿಗತ ಚುನಾವಣೆಗೆ ಹೆಚ್ಚಿನ ಆದ್ಯತೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಂ.ಎಸ್. ರುದ್ರಗೌಡರ ನೇಪಥ್ಯಕ್ಕೆ ಸರಿದಿದ್ದಾರೆ. ಅಭಿವೃದ್ಧಿ ಕಾರ್ಯಗಳೇ ಪಾಟೀಲರಿಗೆ ಶ್ರೀರಕ್ಷೆ. ಬಿಜೆಪಿ ಭೀತಿ ಅಲ್ಲಗಳೆಯುವಂತಿಲ್ಲ.


ವಿಜಯಪುರನಗರ ಯಾರಿಗೆ?

ಹಿಂದು-ಮುಸ್ಲಿಂ ಸಮಬಾಹುಳ್ಯದ ನಗರ ಕ್ಷೇತ್ರ ಪಕ್ಷಾಧಾರಿತ ಮತ್ತು ಧರ್ವಧಾರಿತ ಚುನಾವಣೆಗೆ ಮುನ್ನುಡಿ ಬರೆಯಲಿದೆ. ಹಾಲಿ ಶಾಸಕ ಡಾ. ಮಕ್ಬೂಲ್ ಬಾಗವಾನ ಕಳೆದ ಬಾರಿ ಹಿಂದು ನಾಯಕರ ಕಲಹದ ಸದುಪಯೋಗ ಪಡೆದಿದ್ದರು. ಜೆಡಿಎಸ್ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಅಭ್ಯರ್ಥಿ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನಡುವಿನ ಕಲಹ ಕಾಂಗ್ರೆಸ್​ಗೆ ಪ್ಲಸ್ ಪಾಯಿಂಟ್ ಆಯ್ತು. ಚುನಾವಣೆ ಮುಗಿಯುತ್ತಿದ್ದಂತೆ ಜೆಡಿಎಸ್​ನಿಂದ ಹೊರ ಬಂದ ಯತ್ನಾಳ ಪಕ್ಷೇತರವಾಗಿ ವಿಧಾನಪರಿಷತ್ ಸದಸ್ಯರಾದರು. ಬಿಜೆಪಿ ಸೇರ್ಪಡೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಜೆಡಿಎಸ್​ನಿಂದ ಈ ಬಾರಿ ರೇಷ್ಮಾ ಪಡೇಕನೂರ, ಉಪಮಹಾಪೌರ ರಾಜೇಶ ದೇವಗಿರಿ, ಎಲ್.ಎಲ್. ಉಸ್ತಾದ ಪ್ರಮುಖ ಆಕಾಂಕ್ಷಿಗಳು. ಬಿಜೆಪಿ ಮುಖಂಡರ ಜಗಳದಲ್ಲಿ ಒಬ್ಬ ಆಕಾಂಕ್ಷಿಯಾದರೂ ಜೆಡಿಎಸ್ ಮೆಟ್ಟಿಲು ತುಳಿದರೆ ಅಚ್ಚರಿಯಿಲ್ಲ. ಅಚ್ಚರಿಯ ಬೆಳವಣಿಗೆ ಪೈಕಿ ಕಾಂಗ್ರೆಸ್ ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇಲ್ಲದಿಲ್ಲ.


ನಡಹಳ್ಳಿ ನಡೆ- ದೇವರಹಿಪ್ಪರಗಿ

ಕಾಂಗ್ರೆಸ್​ನ ಉಚ್ಛಾಟಿತ ಶಾಸಕ ನಡಹಳ್ಳಿ ಮುದ್ದೇಬಿಹಾಳದತ್ತ ವಲಸೆ ಹೋಗಿದ್ದಾರೆ. ಬಿಜೆಪಿಯ ಸೋಮನಗೌಡ ಪಾಟೀಲ ಸಾಸನೂರ, ಕೆಜೆಪಿಯ ರಾಜುಗೌಡ ಪಾಟೀಲ ಕುದರಿಸಾಲೋಡಗಿ ತಿಕ್ಕಾಟದ ನಡುವೆ ನಡಹಳ್ಳಿ ಗೆಲುವು ಸಾಧಿಸಿದ್ದರು. ಜೆಡಿಎಸ್​ನ ರೇಷ್ಮಾ ಪಡೇಕನೂರ ಈ ಬಾರಿ ಕ್ಷೇತ್ರ ತೊರೆದಿದ್ದು, ಎಚ್.ಡಿ. ಕುಮಾರಸ್ವಾಮಿ ಬರುವರೆಂಬ ಸುದ್ದಿ ನಡುವೆಯೇ ನಡಹಳ್ಳಿ ತಮ್ಮ ಸಹೋದರನಿಗಾಗಿ ಕರ್ಚಿಫ್ ಹಾಕಿದ್ದಾರೆ. ತೆರವಾದ ಸ್ಥಾನಕ್ಕೆ ಕಾಂಗ್ರೆಸ್​ನಿಂದ ಮಾಜಿ ಶಾಸಕ ಶರಣಪ್ಪ ಸುಣಗಾರ, ನಿಂಗನಗೌಡ ಪಾಟೀಲ, ಸುಭಾಷ ಛಾಯಾಗೋಳ ಸ್ಪರ್ಧಾಕಾಂಕ್ಷಿಗಳಿದ್ದಾರೆ.

Leave a Reply

Your email address will not be published. Required fields are marked *