2017ರ ಐಪಿಎಲ್ ಅನುಮಾನ

ಮುಂಬೈ: ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ನ 10ನೇ ಆವೃತ್ತಿ ನಡೆಯುವುದು ಅನುಮಾನವೆನಿಸಿದೆ. ಐಪಿಎಲ್ನ ರೂವಾರಿ ಬಿಸಿಸಿಐನಿಂದ ಸ್ವತಃ ಈ ಅನುಮಾನ ವ್ಯಕ್ತವಾಗಿರುವ ಕಾರಣ, ಜನಮನ್ನಣೆ ಪಡೆದ ಟಿ20 ಟೂರ್ನಿ ಮೇಲೆ ಕಾಮೋಡ ಆವರಿಸಿದೆ.

2017ರ ಏಪ್ರಿಲ್ 8ರಂದು 10ನೇ ಆವೃತ್ತಿಯ ಲೀಗ್ ಆರಂಭವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ. ಆದರೆ, ಈವರೆಗೂ 2017ರ ಟೂರ್ನಿಗೆ ಸಂಬಂಧಪಟ್ಟಂತೆ ಒಂದೇ ಒಂದು ಒಪ್ಪಂದವೂ ಅಂತಿಮವಾಗಿಲ್ಲ ಎಂದು ಮಂಡಳಿ ಕಳವಳ ವ್ಯಕ್ತಪಡಿಸಿದೆ. ಆಟಗಾರರ ಹರಾಜು ಪ್ರಕ್ರಿಯೆ, ಲಾಜಿಸ್ಟಿಕ್ಸ್ ಯೋಜನೆಗಳು, ಕ್ರಿಯೇಟಿವ್ ಹಾಗೂ ಮ್ಯಾನೇಜ್ವೆುಂಟ್ ಏಜೆನ್ಸಿಗಳ ನೇಮಕ, ಜಾಹೀರಾತು ಒಪ್ಪಂದಗಳು ಈಗಾಗಲೇ ನಡೆದಿರಬೇಕಿತ್ತು. ಎರಡು ತಿಂಗಳ ಕಾಲ ನಡೆಯಲಿರುವ ಟೂರ್ನಿ ಆರಂಭಕ್ಕೆ ಕೇವಲ ಇನ್ನು ನಾಲ್ಕು ತಿಂಗಳು ಬಾಕಿ ಇದೆ. ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿರುವ ಕಾರಣ ಬಿಸಿಸಿಐ ಐಪಿಎಲ್ ಕುರಿತಾಗಿ ಆತಂಕ ಹೊರಹಾಕಿದೆ.

‘ಇಂಟರ್ನ್ಯಾಷನಲ್ ಮ್ಯಾನೇಜ್ವೆುಂಟ್ ಗ್ರೂಪ್ (ಐಎಂಜಿ) ಪ್ರತಿ ವರ್ಷ ಅಕ್ಟೋಬರ್ನಲ್ಲಿ ಐಪಿಎಲ್ನ ಕೆಲಸಗಳನ್ನು ಆರಂಭಿಸುತ್ತದೆ. ಆದರೆ ಈ ವರ್ಷ ಅವರಿನ್ನೂ ಕೆಲಸ ಆರಂಭ ಮಾಡಿಲ್ಲ. ಐಪಿಎಲ್ ಆರಂಭೋತ್ಸವ ಸಮಾರಂಭವನ್ನು 5ರಿಂದ 6 ತಿಂಗಳು ಮುಂಚಿತವಾಗಿ ಯೋಜನೆ ಮಾಡಲಾಗುತ್ತದೆ. ಅದರ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲ. ಒಟ್ಟಾರೆ ಸಂಪೂರ್ಣ ಗೊಂದಲಮಯವಾಗುವ ಸ್ಥಿತಿ ಇದೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲೀಗ್ ಆರಂಭವಾಗುವ 270 ದಿನಗಳಿಗೂ ಮುನ್ನ ನೇರಪ್ರಸಾರ ವಾಹಿನಿಗಳು ಹಾಗೂ ಪ್ರಾಯೋಜಕರು ತಮ್ಮ ಕೆಲಸ ಆರಂಭಿಸುತ್ತಾರೆ. ಈವರೆಗೂ ವೃತ್ತಿಪರವಾಗಿ ಕೆಲಸ ಮಾಡುತ್ತ ಬಂದಿರುವ ಬಿಸಿಸಿಐಗೆ ಈ ವಿಚಾರದಿಂದ ಘನತೆಗೆ ಧಕ್ಕೆಯಾಗಲಿದೆ ಎಂದು ಮಂಡಳಿಯ ಕಾರ್ಯದರ್ಶಿ ಅಜಯ್ ಶಿರ್ಕೆ, ಲೋಧಾ ಸಮಿತಿಗೆ ಪತ್ರವನ್ನೂ ಬರೆದಿದ್ದಾರೆ.

ತಲೆಕೆಡಿಸಿಕೊಳ್ಳದ ಲೋಧಾ ಸಮಿತಿ: ಈ ಕುರಿತಾಗಿ ಲೋಧಾ ಸಮಿತಿಗೂ ಮನವರಿಕೆ ಮಾಡಿ ಕೊಡುವ ಪ್ರಯತ್ನ ಮಾಡಲಾಗಿದೆ. ಆದರೆ, ‘ಡಿಸೆಂಬರ್ 5ರವರೆಗೆ ಕಾಯಿರಿ’ ಎಂದು ಒಂದೇ ವಾಕ್ಯದ ಉತ್ತರವನ್ನು ಲೋಧಾ ಸಮಿತಿ ನೀಡಿತ್ತು ಎಂದು ಹೇಳಲಾಗಿದೆ. ಬಿಸಿಸಿಐ ಒಪ್ಪಂದಗಳಿಗಾಗಿ ಆಡಿಟರ್ ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಇದಾವುದು ನಡೆದಿಲ್ಲ. -ಏಜೆನ್ಸೀಸ್

Leave a Reply

Your email address will not be published. Required fields are marked *