ಮರ, ರೆಂಬೆ ತೆರವಿಗೆ 20 ತಂಡ ನಿಯೋಜನೆ

ಬೆಂಗಳೂರು: ಮಳೆಗಾಲದ ಅನಾಹುತ ತಡೆಗೆ ಸಿದ್ಧತೆ ನಡೆಸಿರುವ ಬಿಬಿಎಂಪಿ ಮಳೆಗೆ ಬೀಳುವ ಮರ ಮತ್ತು ರೆಂಬೆಗಳ ತೆರವಿಗೆ 20 ತಂಡಗಳನ್ನು ನೇಮಿಸಿದೆ. ಅದರ ಜತೆಗೆ ಇದೀಗ ರಾತ್ರಿಪಾಳಿಯಲ್ಲಿ ಕೆಲಸ ಮಾಡಲು ಹೆಚ್ಚುವರಿಯಾಗಿ 8 ತಂಡಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ.

ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಸುರಿದ ಭಾರಿ ಮಳೆಗೆ ನಗರದಲ್ಲಿ 500ಕ್ಕೂ ಹೆಚ್ಚಿನ ಮರ ಮತ್ತು 2 ಸಾವಿರಕ್ಕೂ ಹೆಚ್ಚಿನ ರೆಂಬೆಗಳು ಬಿದ್ದಿವೆ. ಅವುಗಳ ತೆರವಿಗೆ ಬಿಬಿಎಂಪಿ ಸಿಬ್ಬಂದಿ ಹರಸಾಹಸ ಪಡುವಂತಾಗಿತ್ತು. ಬಿದ್ದ ಮರ ಮತ್ತು ರೆಂಬೆಗಳ ತೆರಿವಿಗಾಗಿಯೇ ಬಿಬಿಎಂಪಿ ಎಲ್ಲ 8 ವಲಯಗಳಲ್ಲೂ ತಲಾ 2ರಂತೆ 16 ತಂಡಗಳನ್ನು ನಿಯೋಜಿಸಲಾಗಿದೆ. ಜತೆಗೆ ಹೆಚ್ಚುವರಿಯಾಗಿ 4 ತಂಡಗಳು ಅಗತ್ಯವಿರುವಲ್ಲಿ ಕೆಲಸ ಮಾಡಲಿವೆ. ಪ್ರತಿ ತಂಡದಲ್ಲೂ 7ರಿಂದ 10 ಸಿಬ್ಬಂದಿ ಇರಲಿದ್ದು, ಅವರೊಂದಿಗೆ ಮರ ಕತ್ತರಿಸುವ ಸಾಧನಗಳು ಇರಲಿವೆ. ಇದೀಗ ಆ ತಂಡಗಳ ಜತೆಗೆ ಪ್ರತಿ ವಲಯಕ್ಕೆ 1 ತಂಡದಂತೆ 8 ತಂಡಗಳನ್ನು ರಾತ್ರಿ ಪಾಳಿಯಲ್ಲಿ ಮರ ಮತ್ತು ರೆಂಬೆಗಳನ್ನು ತೆರವು ಮಾಡಲು ನಿಯೋಜಿಸಲಾಗುತ್ತಿದೆ.

ಮೊಬೈಲ್ ಆಪ್​ನಲ್ಲಿ ಅಪ್​ಡೇಟ್ ಕಡ್ಡಾಯ

ತಂಡಗಳು ತಮ್ಮ ಕಾರ್ಯದ ಬಗ್ಗೆ ಬಿಬಿಎಂಪಿಗೆ ವರದಿ ಸಲ್ಲಿಸುವಂತೆ ಮಾಡಲು ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ. ತಂಡಗಳಲ್ಲಿನ ಸಿಬ್ಬಂದಿ ಪ್ರತಿದಿನ ಮೊಬೈಲ್ ಆಪ್ ಮೂಲಕ ಹಾಜರಾತಿ ಹಾಕಬೇಕಿದೆ. ಜತೆಗೆ ತಾವು ಆ ದಿನ ತೆರವು ಮಾಡಿರುವ ಮರ ಮತ್ತು ರೆಂಬೆಗಳ ಭಾವಚಿತ್ರವನ್ನು ಆಪ್​ನಲ್ಲಿ ಹಾಕಬೇಕಿದೆ. ಒಂದು ವೇಳೆ ಭಾವಚಿತ್ರ ಹಾಕದಿದ್ದರೆ, ಸಿಬ್ಬಂದಿಗೆ ಮತ್ತು ತಂಡವನ್ನು ನಿಯೋಜಿಸಿದ ಗುತ್ತಿಗೆದಾರರಿಗೆ ನೀಡುವ ಹಣವನ್ನು ಕಡಿತಗೊಳಿಸಲಾಗುತ್ತದೆ.

Leave a Reply

Your email address will not be published. Required fields are marked *