ಈ ವರ್ಷದ ಕೆಲವು ಸಿನಿಮಾಗಳನ್ನು ಡೈರೆಕ್ಟರ್ಸ್ ಸ್ಪೆಷಲ್ ಎಂದರೂ ಅತಿಶಯೋಕ್ತಿ ಏನಲ್ಲ. ಏಕೆಂದರೆ ಕೆಲವು ಸಿನಿಮಾಗಳು ನಿರ್ದೇಶಕರ ಕಾರಣಕ್ಕೇ ವಿಶೇಷ ಎನಿಸಿಕೊಳ್ಳುತ್ತವೆ. ಆ ನಿಟ್ಟಿನಲ್ಲಿ ‘ಗಾಳಿಪಟ 2’, ‘ಪಾಪ್ಕಾರ್ನ್ ಮಂಕಿ ಟೈಗರ್’, ‘ಏಕಲವ್ಯು’, ‘ಬನಾರಸ್’, ‘ಇಂಡಿಯಾ ವರ್ಸಸ್ ಇಂಗ್ಲೆಂಡ್’, ‘ಅಮೃತಮತಿ’, ‘ಅವತಾರ ಪುರುಷ’, ‘ಸಲಗ’ ಚಿತ್ರಗಳು ಸ್ಪೆಷಲ್ ಎನಿಸಿಕೊಂಡಿವೆ.
ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಅವರದೇ ನಿರ್ದೇಶನದ ‘ಗಾಳಿಪಟ’ ಸಿನಿಮಾದ ಸೀಕ್ವೆಲ್. ವಿಶೇಷವೆಂದರೆ ‘ಗಾಳಿಪಟ’ದಂತೆ ಈ ಚಿತ್ರದಲ್ಲಿ ಮತ್ತೊಮ್ಮೆ ಅನಂತನಾಗ್, ‘ಗೋಲ್ಡನ್ ಸ್ಟಾರ್’ ಗಣೇಶ್, ದಿಗಂತ್ ಜತೆಯಾಗುತ್ತಿದ್ದಾರೆ. ಜತೆಗೆ ‘ಮನಸಾರೆ’ಯಂತೆ ಮತ್ತೊಮ್ಮೆ ಯೋಗರಾಜ್ ಭಟ್ ಜತೆ ಪವನ್ಕುಮಾರ್ ಕೈ ಜೋಡಿಸಿದ್ದಾರೆ. ನಿರ್ದೇಶಕ ‘ದುನಿಯಾ’ ಸೂರಿ ’ಟಗರು’ ಬಳಿಕ ಯಾವುದೇ ಚಿತ್ರಕ್ಕೆ ಆಕ್ಷನ್-ಕಟ್ ಹೇಳದ್ದರಿಂದ ಕಳೆದ ವರ್ಷ ಅವರ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಆದರೆ ಈ ನಡುವೆ ಅವರು ‘ಪಾಪ್ಕಾರ್ನ್ ಮಂಕಿ ಟೈಗರ್’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ‘ಟಗರು’ ಬಳಿಕ ಮತ್ತೆ ಸೂರಿ-ಧನಂಜಯ್ ಕಾಂಬಿನೇಷನ್ ಇಲ್ಲಿ ಕ್ಲಿಕ್ ಆಗುವ ಸಾಧ್ಯತೆ ಇರುವುದರಿಂದ ಈ ಚಿತ್ರವೂ ನಿರೀಕ್ಷೆ ಹುಟ್ಟಿಸಿದೆ. ನಾನಾ ಗಿಮಿಕ್ಗಳ ಮೂಲಕವೇ ಚಿತ್ರದ ಬಗ್ಗೆ ಕ್ರೇಜ್ ಸೃಷ್ಟಿಸಿಕೊಳ್ಳುವ ‘ಜೋಗಿ’ ಪ್ರೇಮ್ ನಿರ್ದೇಶನದ ‘ಏಕಲವ್ಯು’ ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದ್ದು, ಇದೇ ವರ್ಷ ತೆರೆ ಕಾಣುವ ಸಾಧ್ಯತೆ ಇದೆ. ಈಗಾಗಲೇ ಎರಡು ಬಾರಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಪಡೆದಿರುವ ಜಯತೀರ್ಥ ನಿರ್ದೇಶನದ ‘ಬೆಲ್ಬಾಟಂ’ ಕಳೆದ ವರ್ಷ ಶತದಿನೋತ್ಸವ ಆಚರಿಸಿತ್ತು. ಈ ಹಿನ್ನೆಲೆಯಲ್ಲಿ ಅವರ ನಿರ್ದೇಶನದ ‘ಬನಾರಸ್’ ಸಿನಿಮಾ ವಿಶೇಷ ಎನಿಸಿಕೊಂಡಿದೆ. ಸಿಂಪಲ್ ಆಗಿಯೇ ವಿಭಿನ್ನ ಪ್ರಯತ್ನಗಳನ್ನು ಮಾಡುವ ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದ ‘ಅವತಾರ ಪುರುಷ’ ಕೂಡ ಡೈರೆಕ್ಟರ್ಸ್ ಸ್ಪೆಷಲ್ ಎನಿಸಿಕೊಂಡಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಸಿನಿಮಾ ಎಂದರೆ ಅಲ್ಲೊಂದು ವಿಶೇಷತೆ ಇರುತ್ತದೆ. ಅದರಲ್ಲೂ ಅವರು ನಾಲ್ಕು ವರ್ಷಗಳ ಬಳಿಕ ಮತ್ತೆ ಸಿನಿಮಾದಲ್ಲಿ ತೊಡಗಿಸಿಕೊಂಡಿರುವುದರಿಂದ ಅವರ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಕುರಿತು ಸಿನಿಪ್ರಿಯರಿಗೆ ಕೌತುಕವಿದೆ. ಕಲಾತ್ಮಕ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡಿರುವ ಬರಗೂರು ರಾಮಚಂದ್ರಪ್ಪ ಇದೀಗ ‘ಅಮೃತಮತಿ’ ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ಅದರಲ್ಲೂ ಇದು 13ನೇ ಶತಮಾನದ ಕಥೆ ಆಧಾರಿತ ಚಿತ್ರವಾದ್ದರಿಂದ ಈಗಾಗಲೇ ಕುತೂಹಲ ಕೆರಳಿಸಿದೆ. ದುನಿಯಾ ವಿಜಯ್ ಇದೇ ಮೊದಲ ಸಲ ನಿರ್ದೇಶನ ಮಾಡುವ ಜತೆಗೆ ನಾಯಕನಾಗಿಯೂ ನಟಿಸಿರುವುದರಿಂದ ‘ಸಲಗ’ ಚಿತ್ರದ ಬಗ್ಗೆಯೂ ನಿರೀಕ್ಷೆಗಳಿವೆ. ನಿರ್ದೇಶಿಸಿದ ಏಳು ಚಿತ್ರಗಳಲ್ಲಿ ಎರಡಕ್ಕೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿರುವ ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಕೂಡ ವೈಶಿಷ್ಟ್ಯಗಳಿಂದ ಕೂಡಿದೆ.
ಚಿತ್ರಗಳ ಸಂಖ್ಯೆಯಲ್ಲೂ ಹ್ಯಾಟ್ರಿಕ್?
ಕಳೆದ ದಶಕದಲ್ಲಿ ಈ ಹಿಂದಿನ ಎರಡು ವರ್ಷಗಳನ್ನು ಹೊರತು ಪಡಿಸಿದರೆ ಯಾವ ವರ್ಷದಲ್ಲೂ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 200 ದಾಟಿಲ್ಲ. 2010ರಲ್ಲಿ 150 ಚಿತ್ರ ಬಿಡುಗಡೆ ಆಗಿದ್ದು, ನಂತರ 2017ರ ವರೆಗೂ ರಿಲೀಸ್ಡ್ ಸಿನಿಮಾಗಳ ಸಂಖ್ಯೆ 200ರ ಒಳಗೇ ಇತ್ತು. ಆದರೆ 2018 ಹಾಗೂ 2019ರಲ್ಲಿ ಕ್ರಮವಾಗಿ ಅಂದಾಜು 210 ಹಾಗೂ 240 ಸಿನಿಮಾಗಳು ಬಿಡುಗಡೆ ಆಗಿದ್ದವು. ಸ್ಯಾಂಡಲ್ವುಡ್ನ ಸದ್ಯದ ಬೆಳವಣಿಗೆ ಗಮನಿಸಿದರೆ ಈ ವರ್ಷವೂ 200ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆ ಆಗುವ ಸಾಧ್ಯತೆ ಇದೆ.
ಕ್ರೇಜಿಸ್ಟಾರ್ ಆ್ಯಂಡ್ ಕ್ರೇಜಿಸನ್ಸ್
ಈ ಸಲ ಕ್ರೇಜಿಸ್ಟಾರ್ ಅಭಿಮಾನಿಗಳ ಕ್ರೇಜ್ ತುಸು ಹೆಚ್ಚೇ ಇರಲಿದೆ. ಏಕೆಂದರೆ ರವಿಚಂದ್ರನ್ ಅವರ ಅಭಿನಯದ ‘ರವಿ ಬೋಪಣ್ಣ’, ‘ರಾಜೇಂದ್ರ ಪೊನ್ನಪ್ಪ’ ಚಿತ್ರಗಳು ಬಿಡುಗಡೆ ಆಗಲಿವೆ. ಅದರಲ್ಲೂ ಎರಡಕ್ಕೂ ರವಿಚಂದ್ರನ್ ಅವರದೇ ನಿರ್ದೇಶನ ಇರುವುದರಿಂದ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ. ಈ ನಡುವೆ ರವಿಚಂದ್ರನ್ ಅವರ ಕಿರಿಯ ಪುತ್ರ ವಿಕ್ರಮ್ ಈ ಬಾರಿ ‘ತ್ರಿವಿಕ್ರಮ’ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪ್ರವೇಶಿಸಲಿದ್ದರೆ, ಹಿರಿಯ ಪುತ್ರ ಮನುರಂಜನ್ ಅಭಿನಯದ ‘ಪ್ರಾರಂಭ’, ‘ಮುಗಿಲ್ ಪೇಟೆ’ ಚಿತ್ರಗಳು ತೆರೆಗೆ ಬರಲಿವೆ.