20 ದಿನಗಳಲ್ಲಿ ಅರ್ಧ ಕೋಟಿ ಮೌಲ್ಯದ ಅಕ್ರಮ ಮದ್ಯ ವಶ

ಕಾರವಾರ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಬಕಾರಿ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ 20 ದಿನಗಳಲ್ಲಿ ಅರ್ಧ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮ ಸಾರಾಯಿಯನ್ನು ವಶಕ್ಕೆ ಪಡೆದಿದ್ದಾರೆ.

ಮಾರ್ಚ್ 10 ರಂದು ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ಅಂದಿನಿಂದ ಇದುವರೆಗೆ 634 ದಾಳಿಗಳನ್ನು ನಡೆಸಲಾಗಿದೆ. ದಾಂಡೇಲಿ ವಲಯ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಅಂದರೆ 115 ದಾಳಿಗಳನ್ನು ನಡೆಸಲಾಗಿದೆ. ಅದರಲ್ಲಿ 212 ಪ್ರಕರಣ ದಾಖಲಿಸಿ 134 ಜನರನ್ನು ಬಂಧಿಸಲಾಗಿದೆ.

20 ದಿನದಲ್ಲಿ 16,74,965 ರೂ. ಮೌಲ್ಯದ ಒಟ್ಟು 4,400ಲೀಟರ್ ಭಾರತೀಯ ಮದ್ಯ, 3,66,234 ರೂ. ಮೌಲ್ಯದ 1093 ಲೀ. ಗೋವಾ ಮದ್ಯ. 32,71,854 ರೂ. ಮೌಲ್ಯದ 19,254 ಲೀ. ಬಿಯರ್, 13,440 ರೂ. ಮೌಲ್ಯದ 55 ಲೀ. ಗೋವಾ ಬಿಯರ್, 30,250 ರೂ. ಮೌಲ್ಯದ 180 ಲೀಟರ್ ಕಳ್ಳಭಟ್ಟಿ ಸಾರಾಯಿ ವಶಕ್ಕೆ ಪಡೆಯಲಾಗಿದೆ. 41,000 ರೂ. ಮೌಲ್ಯದ 164 ಲೀ. ಬೆಲ್ಲದ ಕೊಳೆ ನಾಶ ಮಾಡಲಾಗಿದೆ. ಒಟ್ಟಾರೆ 53,97,743 ರೂ. ಮೌಲ್ಯದ 26,633 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ.43,60,000 ರೂ. ಮೌಲ್ಯದ 9 ಬೈಕ್​ಗಳು, 1 ಆಟೋ ರಿಕ್ಷಾ , 4 ಕಾರು, 1 ಲಾರಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಾಪಾರವೂ ಇಳಿಮುಖ: ಚುನಾವಣೆ ಎಂದಾಕ್ಷಣ ಪರವಾನಗಿ ಪಡೆದ ಬಾರ್, ವೈನ್ ಶಾಪ್​ಗಳಲ್ಲೂ ಮದ್ಯ ಮಾರಾಟ ಹೆಚ್ಚುತ್ತದೆ. ಆದರೆ, ಈ ಬಾರಿ ಅಲ್ಲೂ ವ್ಯಾಪಾರಕ್ಕೆ ನಿಯಂತ್ರಣ ಹೇರಲಾಗಿದೆ. ಪರಿಣಾಮ ಈ ಬಾರಿ ಮಾರ್ಚ್ ಒಂದೇ ತಿಂಗಳಲ್ಲಿ 28,194 ಕೇಸ್(ಬಾಕ್ಸ್)ಗಳಷ್ಟು ಭಾರತೀಯ ಮದ್ಯದ ಮಾರಾಟ ಕಡಿಮೆಯಾಗಿದೆ ಎಂಬುದು ಅಬಕಾರಿ ಅಧಿಕಾರಿಗಳ ಅಭಿಪ್ರಾಯ.

Leave a Reply

Your email address will not be published. Required fields are marked *