ಕಾರವಾರ: ಜಿಲ್ಲೆಯಲ್ಲಿ ಬುಧವಾರ ಕರೊನಾದಿಂದ ಗುಣ ಹೊಂದಿದ 20 ಜನರನ್ನು ಬಿಡುಗಡೆ ಮಾಡಿದ್ದರೆ, 19 ಜನರಿಗೆ ಸೋಂಕು ಖಚಿತವಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ, 489ಕ್ಕೆ ತಲುಪಿದ್ದು, 184 ಜನರು ಬಿಡುಗಡೆಯಾಗಿದ್ದಾರೆ. ಭಟ್ಕಳದ 13, ಯಲ್ಲಾಪುರದ ಮೂವರು, ದಾಂಡೇಲಿಯ ಇಬ್ಬರು, ಕಾರವಾರದ ಒಬ್ಬರಲ್ಲಿ ಬುಧವಾರ ಸೋಂಕು ಕಾಣಿಸಿಕೊಂಡಿದೆ.
ಆಸ್ಪತ್ರೆ ನೌಕರರಿಗೆ ಆಪತ್ತು: ಮಂಗಳೂರಿಗೆ ಹೋಗಿ ಬಂದ ಕಾರವಾರದ 71 ವರ್ಷದ ಮಹಿಳೆಗೆ ಬುಧವಾರ ಕರೊನಾ ಇರುವುದು ಖಚಿತವಾಗಿದೆ. ಆದರೆ, ಆಕೆ ಸುಳ್ಳು ಹೇಳಿ ಆಸ್ಪತ್ರೆಗೆ ಸೇರಿರುವುದು,
ಕ್ರಿಮ್ಸ್ನ ವೈದ್ಯರು ಹಾಗೂ ಸಿಬ್ಬಂದಿ ಆತಂಕಕ್ಕೆ ಕಾರಣವಾಗಿದೆ. ವೃದ್ಧೆ ಮಂಗಳೂರಿಗೆ ಹೋಗಿ ಬಂದಿದ್ದನ್ನು ತಿಳಿಸದೇ ಆಸ್ಪತ್ರೆ ಸೇರಿದ್ದರು. ಇಲ್ಲಿನ ಕರೊನಾ ವಾರ್ಡ್ ಬದಲು ಸಾಮಾನ್ಯ ವಿಭಾಗದ ವಿಶೇಷ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರಿಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಗಂಟಲ ದ್ರವ ತೆಗೆದಾಗ ಆಕೆಗೆ ರೋಗ ಖಚಿತವಾಗಿದೆ. ಆಕೆಗೆ ಚಿಕಿತ್ಸೆ ನೀಡಿದವರ ಗಂಟಲ ದ್ರವದ ಮಾದರಿಯನ್ನು ಈಗ ಪರೀಕ್ಷೆಗೆ ಕಳಿಸಲಾಗಿದೆ. ಯಲ್ಲಾಪುರದಲ್ಲಿ ಜ್ವರದ ಸಮಸ್ಯೆ ಇದ್ದ 46 ವರ್ಷದ ಪುರುಷನಿಗೆ, ಇನ್ನೊಬ್ಬ ಬಸ್ ಕಂಡಕ್ಟರ್ಗೆ, ರೋಗಿಯ ಸಂಪರ್ಕಕ್ಕೆ ಬಂದ ಇನ್ನೊಬ್ಬ ವ್ಯಕ್ತಿಗೆ ಕೋವಿಡ್ ಖಚಿತವಾಗಿದೆ. ದಾಂಡೇಲಿಯ ಪಟೇಲ್ ನಗರದಲ್ಲಿ 1708 ಸಂಪರ್ಕಕ್ಕೆ ಬಂದ 25 ಹಾಗೂ 35 ವರ್ಷದ ಇಬ್ಬರಿಗೆ ಸೋಂಕು ಕಂಡುಬಂದಿದೆ.ಭಟ್ಕಳದಲ್ಲಿ ಮುಂದುವರಿದ ತಲ್ಲಣ: ಭಟ್ಕಳದಲ್ಲಿ ಕರೊನಾ ಅಬ್ಬರ ಮುಂದುವರಿದಿದೆ. ಬುಧವಾರ 13 ಜನರಿಗೆ ಸೋಂಕು ಇರುವುದು ಖಚಿತವಾಗಿದೆ. ಕರೊನಾ ಸೇನಾನಿಯಾಗಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರ 26 ವರ್ಷದ ಪತ್ನಿ ಹಾಗೂ 1 ವರ್ಷದ ಗಂಡು ಮಗುವಿಗೂ ಸೋಂಕು ತಗುಲಿದೆ. ಖಾಸಗಿ ಆಸ್ಪತ್ರೆಯ 24 ವರ್ಷದ ಸಿಬ್ಬಂದಿ, ಜೂನ್ 25 ರಂದು ನಡೆದ ಮದುವೆಯಲ್ಲಿ ಭಾಗವಹಿಸಿದ್ದ ಏಳು ಜನರಿಗೆ ಸೋಂಕು ಕಂಡು ಬಂದಿದೆ. ಕುವೈತ್ನಿಂದ ಮರಳಿದ್ದ 27 ವರ್ಷದ ಮಹಿಳೆಗೆ, ವಿಜಯವಾಡದಿಂದ ಮರಳಿದ ಪುರುಷನಲ್ಲಿ ರೋಗ ಕಂಡು ಬಂದಿದೆ.
ಬಿಡುಗಡೆ
ಇಬ್ಬರು ಮಕ್ಕಳು, 6 ಜನ ಮಹಿಳೆಯರು ಸೇರಿ 20 ಜನ ಗುಣ ಹೊಂದಿದ್ದು,ಅವರನ್ನು ಕ್ರಿಮ್್ಸ ಆಸ್ಪತ್ರೆಯಿಂದ ಬುಧವಾರ ಬಿಡುಗಡೆ ಮಾಡಲಾಯಿತು. ಕಾರವಾರದ ಇಬ್ಬರು, ಮುಂಡಗೋಡಿನ ಆರು ಜನ, ದಾಂಡೇಲಿಯ ಮೂವರು, ದಾವಣಗೆರೆಯ ಒಬ್ಬ, ಬಳ್ಳಾರಿಯ ಇನ್ನೊಬ್ಬ, ವಿಜಯಪುರದ ಬಸ್ ಕಂಡಕ್ಟರ್, ಯಲ್ಲಾಪುರದ ಆರು ಜನರನ್ನು ಕ್ರಿಮ್್ಸ ನಿರ್ದೇಶಕ ಡಾ.ಗಜಾನನ ನಾಯಕ, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್, ಡಿಎಷ್ಒ ಡಾ.ಶರದ ನಾಯಕ ಎಲ್ಲರಿಗೂ ಪ್ರಮಾಣಪತ್ರ ನೀಡಿದರು.
ಅಂತ್ಯ ಸಂಸ್ಕಾರಕ್ಕೆ ವಿರೋಧ
ಕಾರವಾರ: ಕರೊನಾ ಆತಂಕದಿಂದ ಸ್ಥಳೀಯರು ನೌಕಾ ಸೇನೆಯ ನೌಕರರೊಬ್ಬರ ತಾಯಿಯ ಅಂತ್ಯ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆಯಿತು.
ಇಲ್ಲಿನ ಕದಂಬ ನೌಕಾನೆಲೆಯಲ್ಲಿ ಕರ್ತವ್ಯದಲ್ಲಿರುವ ಜಾರ್ಖಂಡ್ ಮೂಲದ ಸುಮಿತ್ ಕುಮಾರ್ ಸೆಹಗಲ್ ಅವರ ತಾಯಿ ಅನಿತಾ ದೇವಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಅವರನ್ನು ಕೆಲ ದಿನಗಳ ಹಿಂದೆ ಕಾರವಾರದ ಪತಂಜಲಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮಂಗಳವಾರ ಮೃತಪಟ್ಟರು. ಜಾರ್ಖಂಡ್ಗೆ ಮೃತದೇಹ ಕೊಂಡೊಯ್ಯುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಸೆಹಗಲ್ ಅವರು ಇಲ್ಲಿಯೇ ಅಂತ್ಯ ಸಂಸ್ಕಾರ ನಡೆಸಲು ಮುಂದಾದರು. ಅಂತ್ಯ ಸಂಸ್ಕಾರಕ್ಕೆ ಚೆಂಡಿಯಾ ಗ್ರಾಮ ಪಂಚಾಯಿತಿಯ ಅನುಮತಿ ಪಡೆದಿದ್ದರು. ಅದಕ್ಕೂ ಮುನ್ನ ಮೃತರ ಕರೊನಾ ಪರೀಕ್ಷೆಯನ್ನೂ ನಡೆಸಿದ್ದರು. ಅದರ ವರದಿ ನೆಗೆಟಿವ್ ಬಂದಿತ್ತು. ಆದರೆ, ಸ್ಥಳೀಯ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಗ್ರಾಮಸ್ಥರು ಕರೊನಾ ಆತಂಕದ ನೆಪವೊಡ್ಡಿ ವಿರೋಧ ವ್ಯಕ್ತಪಡಿಸಿದ್ದರು.ಸೆಹಗಲ್ ಅವರು ದಾರಿ ಕಾಣದೇ ಕಾರವಾರ ಠಾಣೆ ಪೊಲೀಸರ ಮೊರೆ ಹೋಗಿದ್ದರು. ಅವರ ಮಧ್ಯಸ್ಥಿಕೆಯಲ್ಲಿ ಬುಧವಾರ ಅಂತ್ಯ ಸಂಸ್ಕಾರ ನೆರವೇರಿಸಿದರು.
ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದರೆ ಪ್ರಕರಣ ದಾಖಲಿಸಲು ಸೂಚನೆ
ಕಾರವಾರ: ಶವ ಸಂಸ್ಕಾರಕ್ಕೆ ಅಡ್ಡಿಪಡಿಸುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಅವರು ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಉಪವಿಭಾಗಧಿಕಾರಿ, ತಹಸೀಲ್ದಾರ್, ತಾಪಂ ಇಒ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಬುಧವಾರ ಕೋವಿಡ್-19 ಕುರಿತು ವಿಡಿಯೋ ಸಂವಾದ ನಡೆಸಿ ಮಾತನಾಡಿದರು.
ಯಾವುದೇ ವ್ಯಕ್ತಿ ಮರಣ ಹೊಂದಿದಾಗ ಸರ್ಕಾರದ ನಿಯಮಾನುಸಾರ ಆ ವ್ಯಕ್ತಿಯ ಶವ ಸಂಸ್ಕಾರವನ್ನು ಕೈಗೊಳ್ಳುವ ಅಧಿಕಾರ ಸ್ಥಳೀಯ ಸಂಸ್ಥೆ ಮತ್ತು ಅಧಿಕಾರಿಗಳಿಗಿದ್ದು, ಇದನ್ನು ವಿರೋಧಿಸುವವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕೋವಿಡ್-19ಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಇದೆ. ಯಾವುದೇ ವ್ಯಕ್ತಿಯಲ್ಲಿ ಸೋಂಕು ಕಂಡುಬಂದಲ್ಲಿ ಸ್ಥಳೀಯವಾಗಿ ಚಿಕಿತ್ಸೆ ನೀಡಬೇಕು. ಇದರೊಂದಿಗೆ ಇತರ ಕಾಯಿಲೆಗಳಿದ್ದಲ್ಲಿ ತ್ವರಿತವಾಗಿ ಚಿಕಿತ್ಸೆ ನೀಡಬೇಕು. ಎಲ್ಲ ರೋಗಿಗಳನ್ನು ಕಾರವಾರ ವೈದ್ಯಕೀಯ ಸಂಸ್ಥೆಯ ಕೋವಿಡ್ ವಾರ್ಡ್ಗೆ ಕಳುಹಿಸಿ ಕೊಡಲು ಮುಂದಾದಲ್ಲಿ ವಿಳಂಬವಾಗಿ ಸಮಸ್ಯೆ ಉದ್ಭವಿಸುವ ಸಂಭವವಿರುತ್ತದೆ. ಇನ್ನು ಮುಂದೆ ಹೊರಗಡೆಯಿಂದ ಬಂದವರಿಗೆಲ್ಲರಿಗೂ ಹೋಮ್ ಕ್ವಾರಂಟೈನ್ ಕಡ್ಡಾಯವಾಗಿದ್ದು, ಇದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಎಸ್ಪಿ ಶಿವಪ್ರಕಾಶ ದೇವರಾಜು ಮಾತನಾಡಿ, ಸೋಂಕಿತರ ಸಂಪರ್ಕ ಹುಡುಕುವ ಮತ್ತು ಕ್ವಾರಂಟೈನ್ ನಿಗಾ ಸರಿಯಾಗಿ ನಿಭಾಯಿಸಿ. ಕಂಟೇನ್ಮೆಟ್ ಜೋನ್ಗಳ ನಿರ್ವಹಣೆ ಅತಿಮುಖ್ಯವಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್, ಎಸಿ ಪ್ರಿಯಾಂಗಾ ಎಂ., ಜಿಲ್ಲಾ ಸರ್ವೆಕ್ಷಣಾಧಿಕಾರಿ ವಿನೋದ ಭೂತೆ, ಕಾರವಾರ ತಹಸೀಲ್ದಾರ್ ಆರ್.ವಿ.ಕಟ್ಟಿ, ತಾಲೂಕು ವೈದ್ಯಾಧಿಕಾರಿ ಸೂರಜಾ ನಾಯ್ಕ ಇದ್ದರು.