20 ಅಡಿ ರಸ್ತೆಗಾಗಿ ಸೇತುವೆ ಉದ್ಘಾಟನೆ ವಿಳಂಬ

ರಾಮನಗರ: ಅರ್ಕಾವತಿ ನದಿಗೆ ನಿರ್ವಿುಸಲಾದ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ ಜಮೀನು ಮಾಲೀಕರ ತಕರಾರಿನಿಂದ ಉದ್ಘಾಟನೆಗೆ ಅಡ್ಡಿಯಾಗಿದೆ.

ಹೆದ್ದಾರಿಗೆ ಸಮೀಪವಿರುವ ಐಜೂರು ಕೈಗಾರಿಕಾ ಪ್ರದೇಶದಲ್ಲಿರುವ ಸೇತುವೆ ಕಾಮಗಾರಿಯನ್ನು ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಲ್ಲಿ 2010-11ನೇ ಸಾಲಿನಲ್ಲಿ ಆರಂಭಿಸಲಾಗಿತ್ತು. ಸುಮಾರು 2 ಕೋಟಿ ರೂ. ವೆಚ್ಚದ ಕಾಮಗಾರಿ ಕೆಲ ಕಾರಣಗಳಿಂದ ಕುಂಟುತ್ತ ಸಾಗಿತ್ತು. ಆರಂಭದಲ್ಲಿ ಕಾಮಗಾರಿ ಚುರುಕಾಗಿ ನಡೆದರೂ ನಂತರದ ವರ್ಷಗಳಲ್ಲಿ ಆಮೆಗತಿಯಲ್ಲಿ ಸಾಗಿತ್ತು. ಇದರಿಂದ ಕಾಮಗಾರಿಯ ವೆಚ್ಚ ಏರುತ್ತಲೇ ಇತ್ತು. ಅಂತಿಮವಾಗಿ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದ್ದು, ಸೇತುವೆ ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ ಛತ್ರದ ಬೀದಿ ಕಡೆಗೆ ಹೋಗುವ ರಸ್ತೆ ನಿರ್ವಣಕ್ಕೆ ಸಂಬಂಧಿಸಿದಂತೆ ಕೆಲ ಜಮೀನು ಮಾಲೀಕರು ತಕರಾರು ಎತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಛತ್ರದ ಬೀದಿಯಿಂದ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಿರಿದಾಗಿದ್ದು, ಕಾಲುದಾರಿಯಷ್ಟು ಸ್ಥಳಾವಕಾಶವಿದೆ. ಸೇತುವೆಯಿಂದ ಇಳಿಜಾರು ರಸ್ತೆ ನಿರ್ವಣಕ್ಕೆ ಕನಿಷ್ಠ 20 ಅಡಿ ಅಗಲ ಜಾಗದ ಅಗತ್ಯವಿದೆ. ಆದರೆ ರಸ್ತೆಯ ಇಕ್ಕೆಲದಲ್ಲಿರುವ ಜಮೀನು ಮಾಲೀಕರು ರಸ್ತೆ ನಿರ್ವಣಕ್ಕೆ ಅಡ್ಡಿಪಡಿಸಿ, ಆ ಜಾಗ ತಮ್ಮದೆಂದು ತಕರಾರು ತೆಗೆದಿದ್ದಾರೆ. ಹಾಗಾಗಿ ರಸ್ತೆಯಾಗದ ಹೊರತು ಸೇತುವೆ ಉದ್ಘಾಟಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ವಣವಾಗಿದೆ.

ಈ ಸೇತುವೆ ಉದ್ಘಾಟನೆಯಾದರೆ ರೈಲು ನಿಲ್ದಾಣ ರಸ್ತೆಯಲ್ಲಿನ ಸಂಚಾರದಟ್ಟಣೆ ಕೊಂಚಮಟ್ಟಿಗೆ ಕಡಿಮೆಯಾಗಲಿದೆ. ಈ ರಸ್ತೆ ಕಿರಿದಾಗಿದ್ದು, ಸದಾ ಸಂಚಾರದಟ್ಟಣೆಯಿಂದ ಕೂಡಿರುತ್ತದೆ. ಅಲ್ಲದೆ ರಸ್ತೆ ವಿಸ್ತರಣೆಗೆ ಅವಕಾಶ ಇಲ್ಲ. ಕೈಗಾರಿಕಾ ಪ್ರದೇಶದಲ್ಲಿ ನಿರ್ವಣವಾದ ಸೇತುವೆ ಆ ಭಾಗದ ಸಂಚಾರಕ್ಕೆ ಪರ್ಯಾಯ ಮಾರ್ಗ ಒದಗಿಸುತ್ತದೆ. ಆದ್ದರಿಂದ ಕೆಲವರು ಎತ್ತಿರುವ ತಕರಾರನ್ನು ನಗರಸಭೆ ಆಯುಕ್ತರು ಇತ್ಯರ್ಥಗೊಳಿಸಿ, ಸೇತುವೆ ಲೋಕಾರ್ಪಣೆಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರಾದ ಉಮೇಶ್, ಸೈಯದ್ ಮತ್ತಿತರರ ಒತ್ತಾಯವಾಗಿದೆ.

ಸೇತುವೆ ಮುಂದಿನ ಇಳಿಜಾರು ರಸ್ತೆ ನಿರ್ವಣಕ್ಕೆ ಸ್ಥಳೀಯರು ಅಡ್ಡಿಪಡಿಸಿದ್ದರಿಂದ ಉದ್ಘಾಟನೆಗೆ ತೊಂದರೆಯಾಗಿದೆ. ಕಂದಾಯ ಇಲಾಖೆಯಿಂದ ಸರ್ವೆ ಮಾಡಿಸಿ, ಅಗತ್ಯವಿರುವ ಜಾಗವನ್ನು ಪಡೆಯಲು ಸಿದ್ಧತೆ ನಡೆದಿದೆ. ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದೆ. ಒಂದು ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ, ಸೇತುವೆ ಲೋಕಾರ್ಪಣೆ ಮಾಡಲಾಗುವುದು.

| ಬಿ. ಶುಭಾ, ನಗರಸಭೆ ಆಯುಕ್ತೆ, ರಾಮನಗರ

Leave a Reply

Your email address will not be published. Required fields are marked *