20ರಿಂದ 7 ದಿನ ವೈವಿಧ್ಯಮಯ ಕಾರ್ಯಕ್ರಮ

ಧಾರವಾಡ: ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ 130ನೇ ಸಂಸ್ಥಾಪನಾ ದಿನದ ಅಂಗವಾಗಿ ಜು. 20ರಿಂದ 26ರವರೆಗೆ ನೃತ್ಯ, ನಾಟಕ, ಹಾಸ್ಯ, ಜಾನಪದ, ಸಂಗೀತ, ಮಕ್ಕಳ ಸಾಂಸ್ಕೃತಿಕ ಸಂಜೆ ಹಾಗೂ ಸಂಘದ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಹೇಳಿದರು.

ಸಂಘದಲ್ಲಿ ಗುರುವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರು 7 ದಿನಗಳ ಕಾರ್ಯಕ್ರಮಗಳ ಮಾಹಿತಿ ನೀಡಿದರು.

20ರಂದು ಬೆಳಗ್ಗೆ 9.30ಕ್ಕೆ ರಾ.ಹ. ದೇಶಪಾಂಡೆ ಪುತ್ಥಳಿಗೆ ಗೌರವಾರ್ಪಣೆ, ಸಂಜೆ 5.30ಕ್ಕೆ ಹಿರಿಯ ನಟ ದೊಡ್ಡಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಘದ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸುವರು. ನಂತರ ರವೀಂದ್ರನಾಥ ಟ್ಯಾಗೋರ್ ರಚಿತ ‘ಚಿತ್ರಾ’ ನಾಟಕವನ್ನು ಉಡುಪಿಯ ನೃತ್ಯ ನಿಕೇತನ ತಂಡ ಪ್ರಸ್ತುತಪಡಿಸಲಿದೆ ಎಂದರು.

21ರಂದು ಸಂಜೆ 5.30ಕ್ಕೆ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎಂ.ಎಸ್. ಶಿವಪ್ರಸಾದ ವಹಿಸುವರು. ಗಾಯಕ ಡಾ. ಅಪ್ಪಗೆರೆ ತಿಮ್ಮರಾಜು, ಹುಬ್ಬಳ್ಳಿಯ ಹಿರಿಯ ನೃತ್ಯ ಕಲಾವಿದೆ ಸುಜಾತಾ ರಾಜಗೋಪಾಲ ಅಧ್ಯಕ್ಷತೆ ವಹಿಸುವರು. ನಂತರ ನಡೆಯುವ ನೃತ್ಯ ಸಂಜೆಯಲ್ಲಿ ನರಗುಂದದ ಜೈ ಕಿಸಾನ್ ಸಾಂಸ್ಕೃತಿಕ ಮತ್ತು ಜನಪದ ಕಲಾ ಸಂಘ ಹಾಗೂ ಹುಬ್ಬಳ್ಳಿಯ ವಿದುಷಿ ಸುಹಾಸಿನಿ ನಾರಾಯಣಕರ ತಂಡ ನೃತ್ಯ ಪ್ರಸ್ತುತಪಡಿಸಲಿದೆ ಎಂದರು.

22ರಂದು ಸಂಜೆ ಬಾಗಲಕೋಟೆಯ ‘ಚಪಾತಿ ಪಾಂಡು’ ಖ್ಯಾತಿಯ ಎಸ್.ಪಿ. ಹೊಸಪೇಟಿ, ಚಿಕ್ಕೋಡಿಯ ಎಸ್.ಆರ್. ಡೋಂಗ್ರೆ, ಧಾರವಾಡದ ಬಾಲ ಹಾಸ್ಯ ಕಲಾವಿದ ಸಂದೀಪರಾಜ ಹಿರೇವೆಂಕನಗೌಡರ ಅವರಿಂದ ಹಾಸ್ಯಸಂಜೆ ಕಾರ್ಯಕ್ರಮ ಜರುಗುವುದು. 23ರಂದು ಬಿಗ್ ಬಾಸ್ ಖ್ಯಾತಿಯ ಮೈಸೂರಿನ ಸುಮಾ ರಾಜ್​ಕುಮಾರ ಅವರಿಂದ ಮಾತನಾಡುವ ಗೊಂಬೆ, ಧಾರವಾಡದ ಮಧುರಾ ಹಿರೇಮಠ ಅವರಿಂದ ಸುಗಮ ಸಂಗೀತ ಜರುಗುವುದು. 24ರಂದು ಕಾರವಾರದ ಪುರುಷೋತ್ತಮ ಗೌಡ ತಂಡದಿಂದ ಹಾಲಕ್ಕಿ ಗೌಡರ ಗುಮಟೆ ಪಾಂಗ್ ನೃತ್ಯ, ಹುಬ್ಬಳ್ಳಿಯ ನಾಟ್ಯ ಭೈರವ ನೃತ್ಯ- ಸಾಂಸ್ಕೃತಿಕ ಸಂಸ್ಥೆಯಿಂದ ಜಾನಪದ ನೃತ್ಯ ವೈಭವ ಜರುಗುವುದು. 25ರಂದು ನಗರದ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಜರುಗುವುದು. 26ರಂದು ಧಾರವಾಡದ ಗಾಯತ್ರಿ ಟೊಣಪಿ ಹಾಗೂ ವೀಣಾ ಬಡಿಗೇರ ಅವರಿಂದ ಸಂಗೀತ ಕಾರ್ಯಕ್ರಮ ಜರುಗುವುದು ಎಂದು ಉಡಿಕೇರಿ ತಿಳಿಸಿದರು.

ಸಂಘದ ಪದಾಧಿಕಾರಿಗಳಾದ ಶಿವಣ್ಣ ಬೆಲ್ಲದ, ಕೃಷ್ಣ ಜೋಶಿ, ಎಸ್.ಎಸ್. ಶಿವಳ್ಳಿ, ವಿಶ್ವೇಶ್ವರಿ ಹಿರೇಮಠ, ಸತೀಶ ತುರಮರಿ, ಚೈತ್ರಾ ನಾಗಮ್ಮನವರ, ಶಾಂತೇಶ ಗಾಮನಗಟ್ಟಿ, ಶಿವಾನಂದ ಭಾವಿಕಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *