ತೀರ್ಥಹಳ್ಳಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಉಗ್ರರ ನೆಲೆಗಳನ್ನು ಧ್ವಂಸ ಮಾಡಿರುವ ಹಿನ್ನೆಲೆಯಲ್ಲಿ ಭಾರತೀಯ ಸೈನ್ಯದ ನೈತಿಕ ಬಲ ಹೆಚ್ಚಿಸುವ ಸಲುವಾಗಿ ನಾಗರಿಕ ವೇದಿಕೆಯಿಂದ ಮೇ 20ರಂದು ಬೆಳಗ್ಗೆ 10ಕ್ಕೆ ಪಟ್ಟಣದ ಎಪಿಎಂಸಿ ಯಾರ್ಡ್‌ನಿಂದ ಕುಶಾವತಿವರೆಗೆ ವಿಜಯ ಸಿಂಧೂರ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಭಯೋತ್ಪಾದನೆ ಇಡೀ ವಿಶ್ವಕ್ಕೆ ಕಂಟಕವಾಗಿದೆ. ಮನುಕುಲದ ವಿರೋಧಿಗಳಾದ ಪಾಕಿಸ್ತಾನ ಪ್ರೇರಿತ ಉಗ್ರರಿಂದ ನಡೆದ ಅಮಾಯಕ ಪ್ರವಾಸಿಗರ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆದೇಶದಂತೆ ಭಾರತೀಯ ಸೇನೆ ನಡೆಸಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆ ಪಾಕಿಸ್ತಾನದ ಜಂಘಾಬಲವನ್ನೇ ಅಡಗಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಾಕ್ ಮಿಲಿಟರಿ ದಾಳಿಯನ್ನು ಸಮರ್ಥವಾಗಿ ಎದುರಿಸಿರುವ ನಮ್ಮ ಸೇನೆ ಭಾರತದಲ್ಲಿ ಹೆಚ್ಚು ಸಾವು, ನೋವು ಸಂಭವಿಸಿದಂತೆ ವಿರೋಧಿಗಳಿಗೆ ಪ್ರತ್ಯುತ್ತರ ನೀಡಿದೆ. ಯುದ್ಧ ನಡೆಯುವುದು ಕೇವಲ ಎರಡು ದೇಶಗಳ ನಡುವೆ ಮಾತ್ರವಲ್ಲ. ಪರೋಕ್ಷವಾಗಿ ಬೇರೆ ರಾಷ್ಟ್ರಗಳು ನೆರವು ನೀಡುವುದು ಸಾಮಾನ್ಯ. ಪಾಕಿಸ್ತಾನಕ್ಕೆ ಟರ್ಕಿ ದೇಶವನ್ನು ಹೊರತುಪಡಿಸಿ ಬೇರ‌್ಯಾವುದೇ ರಾಷ್ಟ್ರದ ನೆರವು ಇರಲಿಲ್ಲ. ಭಾರತ ಪರಿಸ್ಥಿತಿಯನ್ನು ನಿರ್ವಹಿಸಿದ ಕ್ರಮಕ್ಕೆ ಇಡೀ ಜಗತ್ತು ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.
ಈ ಬಾರಿ ಯುದ್ಧದಲ್ಲಿ ಭಾರತೀಯ ಸೇನೆ ಸ್ವದೇಶಿ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇವುಗಳಿಗೆ ಬೇಡಿಕೆ ಹೆಚ್ಚುವ ಸಾಧ್ಯತೆಯಿದೆ. ಯೋಧರ ಸಾಹಸ ಮತ್ತು ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವ ಈ ಶೋಭಾಯಾತ್ರೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಕುವೆಂಪು ಪ್ರತಿಷ್ಠಾನದ ಖಜಾಂಚಿ ಡಿ.ಎಂ.ಮನುದೇವ್, ನಿವೃತ್ತ ಯೋಧರು ಸುದ್ದಿಗೋಷ್ಠಿಯಲ್ಲಿದ್ದರು.
