ನೋಟು ಅಮಾನ್ಯೀಕರಣಕ್ಕೆ 2 ವರ್ಷ

ನವದೆಹಲಿ: ದೇಶದಲ್ಲಿ ಸಂಚಲನ ಮೂಡಿಸಿದ್ದ ನೋಟು ಅಮಾನ್ಯೀಕರಣ ಘೋಷಣೆಗೆ ಇಂದಿಗೆ 2 ವರ್ಷ. ನ.8ರಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಈ ನಿರ್ಧಾರ ಘೋಷಿಸಿದರು. ಮಧ್ಯರಾತ್ರಿ 12 (ನ.9)ಕ್ಕೆ ಈ ಘೋಷಣೆ ಜಾರಿಯಾಗಿ 500 ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳು ಮಾನ್ಯತೆ ಕಳೆದುಕೊಂಡವು. ಕಪು್ಪಹಣ ಹಾವಳಿ ತಡೆ, ಭ್ರಷ್ಟಾಚಾರಕ್ಕೆ ನಿಯಂತ್ರಣ, ತೆರಿಗೆ ಹಾಗೂ ಡಿಜಿಟಲ್ ಪಾವತಿ ಹೆಚ್ಚಳ ಉದ್ದೇಶದಿಂದ ಕೇಂದ್ರ ಈ ಮಧ್ಯರಾತ್ರಿ ಸರ್ಜರಿ ನಡೆಸಿತ್ತು. ಭಾರತೀಯ ಮಾರುಕಟ್ಟೆಯಲ್ಲಿ 500 ಹಾಗೂ 1 ಸಾವಿರ ರೂ. ಮುಖಬೆಲೆಯ 15.41 ಲಕ್ಷ ಕೋಟಿ ರೂ. ಮೊತ್ತದ ನೋಟುಗಳಿದ್ದವು. ಈ ಪೈಕಿ 15.31 ಲಕ್ಷ ಕೋಟಿ ರೂ. ಹಿಂತಿರುಗಿ ಆರ್​ಬಿಐಗೆ ಬಂದಿತ್ತು. ನೋಟು ಅಮಾನ್ಯೀಕರಣ ಬಳಿಕ ಆದಾಯ ತೆರಿಗೆ 3.8 ಲಕ್ಷ ಕೋಟಿ ರೂ.ಗಳಿಂದ 6.86 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಳಗೊಂಡರೆ, ಡಿಜಿಟಲ್ ಪಾವತಿ ಪ್ರಮಾಣ ಶೇ.2.5ರಿಂದ ಶೇ.7.5ಕ್ಕೆ ಏರಿಕೆಯಾಯಿತು. ಹಾಗೆಯೇ 2.5 ಲಕ್ಷಕ್ಕೂ ಅಧಿಕ ಬೇನಾಮಿ ಕಂಪನಿಗಳ ಮಾಹಿತಿ ಸಿಕ್ಕಿತು. ಇದರ ಜತೆಗೆ ಬ್ಯಾಂಕಿಂಗ್ ವಲಯಕ್ಕೆ ಹಣ ಬಂದಿರುವುದರಿಂದ ಹಣದ ಮೂಲ ಹುಡುಕುವುದು ಸುಲಭ ಎನ್ನುವುದು ಕೇಂದ್ರ ಸರ್ಕಾರದ ವಾದವಾಗಿದೆ. ಕಾಂಗ್ರೆಸ್ ಪ್ರತಿಭಟನೆ: ಕಪು್ಪಹಣ ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ನೋಟು ಅಮಾನ್ಯೀಕರಣ ಸಹಕಾರ ನೀಡಲಿಲ್ಲ ಎಂದು ವಿರೋಧಿಸುತ್ತಿರುವ ಕಾಂಗ್ರೆಸ್, ಆರ್​ಬಿಐ ಕಚೇರಿಗಳೆದುರು ನ.9ರಂದು ಪ್ರತಿಭಟಿಸಲು ನಿರ್ಧರಿಸಿದೆ.