ಒಂದು ಹುಡುಗಿಗಾಗಿ ಸಜೀವ ದಹನಗೊಂಡ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು

ಹೈದರಾಬಾದ್​: ಒಬ್ಬರಿಗೊಬ್ಬರು ಬೆಂಕಿ ಹಚ್ಚಿಕೊಂಡು ಹತ್ತನೇ ತರಗತಿಯ ವಿದ್ಯಾರ್ಥಿಗಳಿಬ್ಬರು ಸಜೀವ ದಹನವಾಗಿರುವ ಘಟನೆ ತೆಲಂಗಾಣದ ಜಗ್ತಿಯಾಲ್​ ಪಟ್ಟಣದಲ್ಲಿ ಭಾನುವಾರ ನಡೆದಿದೆ. ಒಂದೇ ಹುಡುಗಿಗಾಗಿ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ.

ಮೃತ ವಿದ್ಯಾರ್ಥಿಗಳಿಬ್ಬರು 16 ವರ್ಷದೊಳಗಿನವರಾಗಿದ್ದು, ಭಾನುವಾರ ರಾತ್ರಿ ಮದ್ಯ ಸೇವನೆ ನಂತರ ಪರಸ್ಪರ ಬೆಂಕಿ ಹಂಚಿಕೊಂಡಿದ್ದಾರೆ. ಕೆ. ಮಹೇಂದರ್​ ಎಂಬಾತ ಸ್ಥಳದಲ್ಲೇ ಸಾವಿಗೀಡಾದರೆ, ಬೆಂಕಿಯಲ್ಲಿ ಬೆಂದು ಗಂಭೀರವಾಗಿ ಗಾಯಗೊಂಡಿದ್ದ ರವಿ ತೇಜ ಎಂಬಾತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಘಟನಾ ಸ್ಥಳದಲ್ಲಿ ಮತ್ತೊಬ್ಬ ಹುಡುಗನಿದ್ದ ಎಂಬ ಮೃತರ ಕುಟುಂಬದವರ ಹೇಳಿಕೆ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ನೀಡಿದ್ದು, ಕಟುಂಬದವರ ಹೇಳಿಕೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ತನಿಖಾಧಿಕಾರಿಗಳು ಘಟನಾ ಸ್ಥಳದಲ್ಲಿ ಬಿಯರ್​ ಬಾಟಲ್​ ಹಾಗೂ ಮೊಬೈಲ್​ ಫೋನ್ಸ್​ ಅನ್ನು ಪತ್ತೆ ಹಚ್ಚಿದ್ದಾರೆ.

ಮೃತರಿಬ್ಬರು ಮಿಷನರಿ ಶಾಲೆಯ ವಿದ್ಯಾರ್ಥಿಗಳಾಗಿದ್ದು, ತಮ್ಮದೇ ಶಾಲೆಯಲ್ಲಿ ಓದುತ್ತಿದ್ದ ಹುಡುಗಿಯನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ತನಿಖಾಧಿಕಾರಿಗಳು ಮೃತರ ಮೊಬೈಲ್​ ಫೋನ್​ ಅನ್ನು ಪರಿಶೀಲಿಸಿದ್ದು, ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಶಂಕಿಸಿದ್ದಾರೆ. ಆದರೂ, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್​​)