ಡ್ರಗ್ಸ್​ ನೀಡಿ ಬುಡಕಟ್ಟು ಬಾಲಕಿಯರ ಮೇಲೆ ಶಾಲಾ ಅಧಿಕಾರಿಗಳಿಂದಲೇ ಅತ್ಯಾಚಾರ: ಮಹಿಳಾ ಸಿಬ್ಬಂದಿ ಕುಮ್ಮಕ್ಕು

ಮುಂಬೈ: ಮಹಾರಾಷ್ಟ್ರದ ಚಂದಾಪುರ ಜಿಲ್ಲೆಯಲ್ಲಿರುವ ಬುಡಕಟ್ಟು ಮಕ್ಕಳ ವಸತಿ ಶಾಲೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಶಾಲೆಯ ಇಬ್ಬರು ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ಹಾಸ್ಟೆಲ್​​ ಸೂಪರಿಂಟೆಂಡೆಂಟ್​ ಛಬಾನ್​ ಪಚಾರೆ ಮತ್ತು ಡೆಪ್ಯುಟಿ ಸೂಪರಿಂಟೆಂಡೆಂಟ್ ನರೇಂದ್ರ ವಿರುಟ್ಕರ್​ ವಿರುದ್ಧ ಆರೋಪ ಕೇಳಿಬಂದಿದ್ದು, ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ. ಅಲ್ಲದೆ, ಹಾಸ್ಟೆಲ್​ ವಾರ್ಡನ್​ ಕಲ್ಪನಾ ಹಾಗೂ ಸಹಾಯಕಿ ಲತಾ ಕಣಕೆ ಅವರನ್ನೂ ಕೂಡ ಲೈಂಗಿಕ ಕಿರುಕುಳಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ.

ಶಾಲೆಯು ಚಂದಾಪುರ ಜಿಲ್ಲೆಯ ರಾಜುರ ತೆಹಸಿಲ್​ ಪ್ರದೇಶದಲ್ಲಿದ್ದು, ಕಾಂಗ್ರೆಸ್​ನ ಮಾಜಿ ಶಾಸಕ ಹಾಗೂ ಖಾಸಗಿ ಸಂಸ್ಥೆಯಿಂದ ನಡೆಸಲ್ಪಟ್ಟಿದೆ.

ಸಂತ್ರಸ್ತ ಬಾಲಕಿಯರಿಬ್ಬರು ಒಂಬತ್ತು ಹಾಗೂ ಹತ್ತು ವರ್ಷ ವಯೋಮಾನದವರಾಗಿದ್ದು, ಪದೇ ಪದೆ ಪ್ರಜ್ಞೆಯಿಲ್ಲದ ಬೀಳುತ್ತಿದ್ದ ಅವರನ್ನು ಏ. 6 ರಂದು ಚಂದ್ರಾಪುರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಪರೀಕ್ಷೆ ಮಾಡಿದ ಬಳಿಕ ಹೆಚ್ಚಿನ ಪ್ರಮಾಣದ ಡ್ರಗ್ಸ್​ ನೀಡಿ ಅವರ ಮೇಲೆ ಅತ್ಯಾಚಾರ ಎಸಗಿರುವುದು ಪತ್ತೆಯಾಗಿತ್ತು. ಇದರಿಂದ ಎಚ್ಚೆತ್ತ ವೈದ್ಯಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳಾದ ಪಚಾರೆ ಮತ್ತು ವಿರುಟ್ಕರ್​ ಅವರನ್ನು ಕಳೆದ ಭಾನುವಾರ ಬಂಧಿಸಲಾಗಿದ್ದು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 376(ಅತ್ಯಾಚಾರ), ಪೊಕ್ಸೋ ಕಾಯಿದೆ ಹಾಗೂ ಎಸ್​ಸಿ-ಎಸ್ಟಿ ಕಾಯಿದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಏ. 20ರ ವರೆಗೆ ಆರೋಪಿಗಳು ಪೊಲೀಸ್​ ಕಸ್ಟಡಿಯಲ್ಲಿರುವಂತೆ ಕೋರ್ಟ್ ಆದೇಶಿಸಿದೆ.

ಪೊಲೀಸರ ಕಾರ್ಯಾಚರಣೆ ವೇಳೆ ಅನೇಕ ಕಾಂಡೋಮ್​ಗಳು ಹಾಗೂ ವೈಯಾಗ್ರ ಮಾತ್ರೆಗಳು ಹಾಸ್ಟೆಲ್​ನ ಸೂಪರಿಂಟೆಂಡೆಂಟ್​ ಕಚೇರಿಯಲ್ಲಿ ದೊರೆತಿದ್ದು, ಘಟನೆಯ ಪೂರ್ಣ ತನಿಖೆಗೆ ರಾಜ್ಯದ ಹಣಕಾಸು ಸಚಿವ ಸುಧೀರ್​ ಮುಂಗಂತಿವಾರ್​ ಆದೇಶಿಸಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಶಾಲೆಗೆ ಸರ್ಕಾರದ ಅಂಗೀಕಾರವನ್ನು ಹಿಂತೆಗೆದುಕೊಂಡಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)