ಗುತ್ತಲ: ತುಂಗಾ ಹಾಗೂ ಭದ್ರಾ ಜಲಾಯಶದಿಂದ ಅಪಾರ ಪ್ರಮಾಣದ ನೀರು ಬಿಟ್ಟಿರುವ ಕಾರಣ ತುಂಗಭದ್ರಾ ನದಿ ಹರಿವು ಒಂದೇ ದಿನದಲ್ಲಿ 2 ಮೀಟರ್ಗೂ ಅಧಿಕ ಏರಿಕೆಯಾಗಿದ್ದು, ನದಿದಂಡೆ ಗ್ರಾಮಗಳ ಜಮೀನುಗಳು ಬಹುತೇಕ ಜಲಾವೃತವಾಗುತ್ತಿವೆ.
ಮಳೆ ಹಾಗೂ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿರುವ ಪರಿಣಾಮ ಬುಧವಾರ ತುಂಗಭದ್ರಾ ನದಿ ನೀರಿನ ಮಟ್ಟ ಸಂಜೆ 6.83 ಮೀಟರ್ ದಾಖಲಾಗಿದೆ. ಗುರುವಾರ ಸಂಜೆ ವೇಳೆಗೆ 8 ಮೀಟರ್ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿಯುವ ಮೂಲಕ 2007, 2017 ಹಾಗೂ 2019ರ ದಾಖಲೆ ಮೀರಿ ಮುರಿಯುವ ಸಾಧ್ಯತೆ ಇದೆ.
ತುಂಗಭದ್ರಾ ನದಿಯು ಅಪಾಯದ ಮಟ್ಟದ ಸಮೀಪ ಹರಿಯುತ್ತಿರುವ ಪರಿಣಾಮ ತುಂಗಭದ್ರಾ ಹಾಗೂ ವರದಾ ನದಿಗಳ ಸಂಗಮ ಸ್ಥಳದ ಹತ್ತಿರವಿರುವ ಗುಯಿಲಗುಂದಿ ಗ್ರಾಮ ಮುಳುಗಡೆ ಭೀತಿಯಲ್ಲಿದೆ. ಗ್ರಾಮದ ಅನೇಕ ಜಮೀನುಗಳು ಬುಧವಾರ ನೀರಿನಿಂದ ಕೂಡಿದೆ. ಗುರುವಾರದ ವೇಳೆಗೆ ಗುಯಿಲಗುಂದಿಮೇವುಂಡಿ ಮಾರ್ಗ ಮಧ್ಯ ಇರುವ ಹಳ್ಳವು ತುಂಬಿ ಹರಿದು ಈ ಮಾರ್ಗದ ಸಂಪರ್ಕ ಕಡಿತವಾಗುವ ಲಕ್ಷಣವಿದೆ.
ಎರಡು ದಿನ ತುಂಗಭದ್ರಾ ನದಿಯ ನೀರಿನ ಮಟ್ಟ ಇಳಿದರೆ, ಮತ್ತೆರಡು ದಿನ ಹೆಚ್ಚಾಗುತ್ತಿದೆ. ನದಿದಂಡೆಯ ಗ್ರಾಮಗಳು ಹಾಗೂ ಜಮೀನುಗಳಲ್ಲಿ ನೀರು ಹರಿದು ಬರುವುದು ನಂತರ ಇಳಿಕೆಯಾಗುತ್ತಿರುವುದು ಆತಂಕವನ್ನುಂಟು ಮಾಡಿದೆ. ಭದ್ರಾ ಹಾಗೂ ತುಂಗಾ ಜಲಾಶಗಳು ಭರ್ತಿಯಾಗಿದ್ದು ಅಲ್ಲಿಯ ಹೆಚ್ಚುವರಿ ನೀರು ಹಾಗೂ ಆ ಜಲಾಶಯಗಳ ಒಳಹರಿವಿನ ಆಧಾರದ ಮೇಲೆ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ.