ನಾಗಮಂಗಲ : ಪಟ್ಟಣದ ಮಹಾಲಕ್ಷ್ಮೀ ಬಡಾವಣೆಯ ಮನೆಯೊಂದರಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಮನೆಯ ಬಾಗಿಲು ಮೀಟಿ ಲಕ್ಷಾಂತರ ರೂ. ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಇಲ್ಲಿನ ನಿವಾಸಿ ಬಿ.ಪಿ.ಪುಟ್ಟರಾಜು ಅವರ ಮನೆಯಲ್ಲಿ ಕಳ್ಳತನವಾಗಿದ್ದು, ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಟ್ಟರಾಜು ಎಲ್‌ಐಸಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು ಮನೆಯಲ್ಲಿ 2.7 ಲಕ್ಷ ರೂ. ಹಣವನ್ನು ಬೀರುವಿನಲ್ಲಿಟ್ಟಿದ್ದರು. ಕಾರ್ಯಕ್ರಮದ ನಿಮಿತ್ತ ಪುಟ್ಟರಾಜು ಕುಟುಂಬ ಸಮೇತ ಶನಿವಾರ ಬೆಂಗಳೂರಿಗೆ ತೆರಳಿದ್ದು, ಭಾನುವಾರ ರಾತ್ರಿ ಬೆಂಗಳೂರಿನಿಂದ ಹಿಂದಿರುಗಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಬಾಗಿಲು ಒಡೆದು ಬೀರುವಿನಲ್ಲಿದ್ದ 2.7 ಲಕ್ಷ ರೂ. ಹಣವನ್ನು ಕದ್ದೋಯ್ದಿದ್ದಿದ್ದಾರೆ. ವಿಚಾರ ತಿಳಿದು ಪಟ್ಟಣ ಪೊಲೀಸ್ ಠಾಣೆ ಪಿಎಸ್ಸೈ ಅನ್ನಪೂರ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬಿಸಿದ್ದಾರೆ.
