ಶಬರಿಮಲೆ ದೇಗುಲಕ್ಕೆ ಪ್ರವೇಶಿಸಿದ್ದ ಮಹಿಳೆಯರಿಬ್ಬರಿಗೆ ಪೊಲೀಸ್​ ಭದ್ರತೆ ನೀಡುವಂತೆ ಸುಪ್ರೀಂ ಆದೇಶ

ನವದೆಹಲಿ: ತೀವ್ರ ವಿರೋಧದ ನಡುವೆಯೇ ಶಬರಿಮಲೆ ದೇಗುಲ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ್ದ ಇಬ್ಬರು ಮಹಿಳೆಯರಿಗೆ ಬಿಗಿ ಪೊಲೀಸ್​ ಭದ್ರತೆ ನೀಡುವಂತೆ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ಕೇರಳ ಸರ್ಕಾರಕ್ಕೆ ಶುಕ್ರವಾರ ಆದೇಶಿಸಿದ್ದಾರೆ.

ಬಿಂದು ಅಮ್ಮಣಿ (40) ಮತ್ತು ಕನಕದುರ್ಗ (39) ನಮಗೆ ಜೀವ ಬೆದರಿಕೆ ಇದೆ ಎಂದು ನಿನ್ನೆ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಮಹಿಳೆಯರಿಗೆ ದಿನದ 24 ಗಂಟೆಯೂ ಭದ್ರತೆ ನೀಡಬೇಕು ಎಂದು ಆದೇಶಿಸಿದೆ.

ನಾವು ನ್ಯಾಯಾಂಗದ ಮೇಲಿಟ್ಟಿದ್ದ ನಂಬಿಕೆ ಇಮ್ಮಡಿಗೊಂಡಿದೆ. ಸಮಾಜದ ಕೆಲ ವರ್ಗಗಳು ನಾವೇನೋ ಅಪರಾಧ ಮಾಡಿದ್ದೇವೆ ಎಂಬಂತೆ ನಮ್ಮನ್ನು ನೋಡುತ್ತಿರುವಾಗ ನ್ಯಾಯಾಂಗ ನಮಗೆ ರಕ್ಷಣೆ ಒದಗಿಸಿದೆ. ದೇಶದ ಉನ್ನತ ನ್ಯಾಯಾಲಯ ಅನುಮತಿ ನೀಡಿದ ಮೇಲೆಯೇ ನಾವು ದೇಗುಲಕ್ಕೆ ಪ್ರವೇಶ ನೀಡಿದೆವು. ಇಂದು ನಮಗೆ ನೀಡಿರುವ ರಕ್ಷಣೆ ಮತ್ತಷ್ಟು ಮಹಿಳೆಯರು ದೇವಾಲಯಕ್ಕೆ ಭೇಟಿ ನೀಡಲು ಉತ್ತೇಜನ ನೀಡುತ್ತದೆ ಎಂದು ಅಮ್ಮಣಿ ತಿಳಿಸಿದ್ದಾರೆ.

ನಾವು ದೇಗುಲಕ್ಕೆ ಪ್ರವೇಶ ಪಡೆದ ನಂತರ ಅನಿವಾರ್ಯವಾಗಿ ತಲೆ ಮರೆಸಿಕೊಳ್ಳಬೇಕಾಗಿತ್ತು. ಈಗ ಎಲ್ಲರಂತೆ ಸಾಮಾನ್ಯ ಜೀವನ ನಡೆಸಬಹುದಾಗಿದೆ. ನಮಗೆ ಅನೇಕರು ಜೀವ ಬೆದರಿಕೆ ಒಡ್ಡಿದ್ದಾರೆ. ನಮ್ಮ ಮಕ್ಕಳು ಮತ್ತು ಸಂಬಂಧಿಗಳೂ ಭಯದಲ್ಲಿದ್ದಾರೆ ಎಂದರು. (ಏಜೆನ್ಸೀಸ್​)