ಲಂಡನ್​ ದೂತವಾಸದ ಎದುರು ಕಾಶ್ಮೀರಿ-ಖಲಿಸ್ತಾನ್​ ಪರ ಹಾಗೂ ಪ್ರಧಾನಿ ಮೋದಿ ಪರ ಪ್ರತಿಭಟನಾಕಾರರ ನಡುವೆ ಜಟಾಪಟಿ

ಲಂಡನ್​: ಇಲ್ಲಿನ ಭಾರತದ ದೂತವಾಸದ ಎದುರು ಶನಿವಾರ ಪ್ರತಿಭಟನೆ ನಡೆಸಿದ್ದ ಎರಡು ಗುಂಪುಗಳ ನಡುವೆ ಜಟಾಪಟಿ ಏರ್ಪಟ್ಟಿದೆ. ಶಾಂತಿ ಕದಡಲು ಯತ್ನಿಸಿದ ಆರೋಪದಲ್ಲಿ ಒಬ್ಬ ವ್ಯಕ್ತಿಯನ್ನು ಸ್ಕಾಟ್ಲೆಂಡ್​ ಯಾರ್ಡ್​ ಪೊಲೀಸರು ಬಂಧಿಸಿದ್ದಾರೆ.

ಕಾಶ್ಮೀರ ಮತ್ತು ಖಲಿಸ್ತಾನ ಪರವಾದಿಗಳ ಸಂಘಟನೆ ಓವರ್​ಸೀಸ್​ ಪಾಕಿಸ್ತಾನೀಸ್​ ವೆಲ್ಫೇರ್​ ಕೌನ್ಸಿಲ್​ (ಒಪಿಡಬ್ಲ್ಯೂಸಿ) ಮತ್ತು ಸಿಖ್ಸ್​ ಫಾರ್​ ಜಸ್ಟಿಸ್​ ಮತ್ತು ಫೆಂಡ್ಸ್​ ಆಫ್​ ಇಂಡಿಯಾ ಸೊಸೈಟಿ ಎಂಬ ಸಂಸ್ಥೆಯ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಪರ ದೂತವಾಸದ ಎದುರು ಶನಿವಾರ ಪ್ರತಿಭಟನೆಗೆ ಮುಂದಾಗಿದ್ದವು. ಒಂದು ಗುಂಪು ಭಾರತದ ವಿರುದ್ಧ ಹಾಗೂ ಇನ್ನೊಂದು ಗುಂಪು ಭಾರತದ ಪರ ಘೋಷಣೆ ಕೂಗಲಾರಂಭಿಸಿದ ಸಂದರ್ಭದಲ್ಲಿ ಜಟಾಪಟಿ ಏರ್ಪಟ್ಟಿತು ಎನ್ನಲಾಗಿದೆ.

ತಕ್ಷಣವೇ ಮಧ್ಯಪ್ರವೇಶಿಸಿದ ಸ್ಕಾಟ್ಲೆಂಡ್​ ಯಾರ್ಡ್​ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದರು. ಶಾಂತಿ ಕದಡಿದ ಆರೋಪದಲ್ಲಿ ಆತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)