ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಯುಎಎಸ್-ಬಿ) ಹಾಗೂ ಆಸ್ಟ್ರೇಲಿಯಾದ ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾನಿಯದ ಸಹಯೋಗದೊಂದಿಗೆ ಏಕಕಾಲದಲ್ಲಿ ಉಭಯ ಪದವಿಗಳನ್ನು ನೀಡುವ ವಿನೂತನ ಪ್ರಯತ್ನಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಎರಡೂ ವಿವಿಗಳ ಮುಖ್ಯಸ್ಥರ ಸಮ್ಮುಖದಲ್ಲಿ ಹೊಸ ಪ್ರಸ್ತಾಪಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ಯುಎಎಸ್-ಬಿ ಕುಲಪತಿ ಡಾ. ಎಸ್.ವಿ.ಸುರೇಶ, ಒಡಂಬಡಿಕೆಯಿಂದಾಗಿ ನಮ್ಮ ವಿವಿಯ ವಿದ್ಯಾರ್ಥಿಗಳು ಗಡಿಯಾಚೆಗಿನ ಸೌಲಭ್ಯಗಳನ್ನು ಏಕಕಾಲದಲ್ಲಿ ಎರಡು ಸ್ನಾತಕ ಪದವಿಗಳನ್ನು ಹಾಗೂ ಸಂಪನ್ಮೂಲಗಳ ಬಳಕೆಗೆ ಅನುಕೂಲಕರವಾಗಲಿದೆ. ಎರಡೂ ಶಿಕ್ಷಣ ಸಂಸ್ಥೆಗಳು ಒಡಗೂಡಿ ಸಂಯೋಜಕ ಕಾರ್ಯಕ್ರಮದ ಮೂಲಕ ಶ್ಯೆಕ್ಷಣಿಕ ಉತ್ಕೃಷ್ಟತೆ, ಪ್ರಾಯೋಗಿಕ ತರಬೇತಿ ಹಾಗೂ ಜಾಗತಿಕ ದೃಷ್ಟಿಕೋನ ನೀಡುವುದರ ಜೊತೆಗೆ ಎರಡೂ ವಿವಿಗಳು ಪದವಿಗಳನ್ನು ನೀಡುತ್ತವೆ ಎಂದು ತಿಳಿಸಿದರು.
ವೆಸ್ಟರ್ನ್ ಸಿಡ್ನಿ ವಿವಿಯ ಉಪ-ಕುಲಪತಿ, ಸಂಶೋಧನೆ ಮತ್ತು ಉದ್ಯಮ ವಿಭಾಗದ ಉಪಾಧ್ಯಕ್ಷೆ ಪ್ರೊ. ಡೆಬೊರಾ ಸ್ವೀನಿ ಮಾತನಾಡಿ, ಆಸ್ಟ್ರೇಲಿಯದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎರಡೂ ದೇಶದಲ್ಲೇ ಇದು ಪ್ರಪ್ರಥಮ ಪ್ರಯತ್ನವಾಗಿದೆ. ಇದರ ಪ್ರಯೋಜನವನ್ನು ಭಾರತ-ಆಸ್ಟ್ರೇಲಿಯಾದ ವಿದ್ಯಾರ್ಥಿಗಳು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಇಂತಹ ಪ್ರಯತ್ನದಿಂದ ಎರಡೂ ದೇಶಗಳ ನಡುವೆ ಸುಮಧುರ ಬಾಂಧವ್ಯ ಏರ್ಪಡಲು ಹಾಗೂ ಪರಸ್ವರ ವಿಚಾರ ವಿನಿಮಯಕ್ಕೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.