Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಭಾರಿ ಮಳೆಗೆ 2 ಬಲಿ

Sunday, 08.07.2018, 5:00 AM       No Comments

ಮಂಗಳೂರು: ಭಾರಿ ಮಳೆ ಕರಾವಳಿಯಲ್ಲಿ ಇಬ್ಬರ ಜೀವ ಬಲಿ ಪಡೆದಿದೆ.
ಪುತ್ತೂರು ತಾಲೂಕಿನ ಹೆಬ್ಬಾರಬೈಲು ಎಂಬಲ್ಲಿ ಶನಿವಾರ ಮುಂಜಾನೆ 1.30ಕ್ಕೆ ಮನೆ ಮೇಲೆ ಎತ್ತರದ ತಡೆಗೋಡೆ ಕುಸಿದು, ದಿ.ವಿಶ್ವನಾಥ ಸಾಲಿಯಾನ್ ಅವರ ಪತ್ನಿ ಪಾರ್ವತಿ (65)ಮತ್ತು ಮೊಮ್ಮಗ ವಿನುಶ್(13) ಸ್ಥಳದಲ್ಲೇ ಮೃತಪಟ್ಟರು.
ಬಂಟ್ವಾಳ ಕೆದಿಲ ಗ್ರಾಮದಲ್ಲಿ ಮನೆ ಮೇಲೆ ತಡೆಗೋಡೆ ಬಿದ್ದು ಪೂವಮ್ಮ ಎಂಬುವರು ಕಾಲು ಮುರಿತಕ್ಕೆ ಒಳಗಾಗಿದ್ದಾರೆ. ಪುತ್ತೂರಿನ ಶೇಖಮಲೆಯಲ್ಲಿ ಸುಂದರ ಎಂಬುವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಕೊಣಾಲುವಿನ ಸರೋಜಿನಿ ಎಂಬುವರ ಮನೆ ಕುಸಿದಿದೆ.
ದಿನಪೂರ್ತಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ತಗ್ಗುಪ್ರದೇಶಗಳು ಮುಳುಗಡೆಯಾಗಿದ್ದು, ನದಿಗಳು ತುಂಬಿ ಹರಿದವು. ಹಲವೆಡೆ ಮನೆಗಳ ಮೇಲೆ ಆವರಣಗೋಡೆ ಕುಸಿದಿವೆ. ಮುಲ್ಲರಪಟ್ಣದಲ್ಲಿ ತೂಗು ಸೇತುವೆಗೆ ಹೋಗುವ ತಾತ್ಕಾಲಿಕ ರಸ್ತೆ ಮುಳುಗಿ, ಸಾರ್ವಜನಿಕರಿಗೆ ತೊಂದರೆಯಾಯಿತು. ಸುರತ್ಕಲ್, ಶಿಬರೂರು, ಸೂರಿಂಜೆ ತಗ್ಗು ಪ್ರದೇಶಗಳು ಜಲಾವೃತವಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿ 18 ಮಂದಿಯನ್ನು ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಲಾವೃತವಾಗಿದೆ. ನೇತ್ರಾವತಿ ನದಿಯಲ್ಲಿ ನೀರು ಅಪಾಯದ ಮಟ್ಟಕ್ಕೆ ಸಮೀಪಿಸಿದ್ದರಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿತ್ತು.
ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಮಿತ್ತೂರು ಎಂಬಲ್ಲಿ ಮೂರು ಕಡೆ ರಸ್ತೆ ಬದಿಯ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದಿದೆ. ಇದರಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಏಕಮುಖವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಜಲಾವೃತಗೊಂಡಿದೆ. ಶಾಂಭವಿ ಮತ್ತು ನಂದಿನಿ ನದಿ ಉಕ್ಕಿ ಹರಿಯುತ್ತಿದೆ. ಐಕಳ ಗ್ರಾಪಂ ವ್ಯಾಪ್ತಿಯ 50 ಎಕರೆ ಕೃಷಿ ಭೂಮಿ ಮುಳುಗಡೆಯಾಗಿದೆ.
ಕಟೀಲು ನಂದಿನಿ ನದಿ ಉಕ್ಕಿ ಹರಿದು ಜಲಕದಕಟ್ಟೆ ಹಾಗೂ ದೇವರಗುಡ್ಡೆ ರಸ್ತೆ, ಅತ್ತೂರು ಬೈಲು ಮಹಾ ಗಣಪತಿ ಮಂದಿರ ಸಂಪರ್ಕ ರಸ್ತೆ ಕಡಿತಗೊಂಡಿದೆ.

ಉಡುಪಿಯಲ್ಲಿ 120 ಮಂದಿ ಸ್ಥಳಾಂತರ
ಉಡುಪಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರವ ಭಾರಿ ಮಳೆಗೆ ಜನ ಜೀವನ ಅಸ್ತವಸ್ತಗೊಂಡಿದೆ. ಉಡುಪಿ, ಕಾರ್ಕಳ, ಕುಂದಾಪುರ ಭಾಗದಲ್ಲಿ ನಿರಂತರವಾಗಿ ಧಾರಕಾರ ಮಳೆ ಸುರಿದು ತಗ್ಗು ಪ್ರದೇಶ ಸಂಪೂರ್ಣ ಜಲಾವೃತಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 120 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.
ಮಳೆಯಿಂದಾಗಿ ಜನರ ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಉಂಟಾಗಿದ್ದು, ನಗರ, ಗ್ರಾಮೀಣ ಭಾಗದ ತಗ್ಗು ಪ್ರದೇಶ ಜಲಾವೃತವಾಗಿದೆ. ಬ್ರಹ್ಮಾವರ ತಾಲೂಕಿನ ಬೈಕಾಡಿ, ಕಾಪು ತಾಲೂಕಿನ ಶಿರ್ವ ಪಣಿಯೂರು ಮತ್ತು ಉಡುಪಿ ತಾಲೂಕಿನ ಕೊಡಂಕೂರು, ಬೆಳ್ಳೆ, ಸೂಡ, ಕಟಪಾಡಿ ಭಾಗದ 120 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಮುಂಜಾಗರೂಕತಾ ಕ್ರಮವಾಗಿ ಜಿಲ್ಲೆಯ ಕೆಲ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ತಹಸೀಲ್ದಾರ್, ಹಿರಿಯ ಅಧಿಕಾರಿಗಳು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸುರಕ್ಷಾ ಕ್ರಮ ಕೈಗೊಳ್ಳುತ್ತಿದ್ದಾರೆ. ಉಡುಪಿಯ ಕಲ್ಸಂಕ, ತೆಂಕಪೇಟೆ, ಪಾರ್ಕಿಂಗ್ ಪ್ರದೇಶಗಳಲ್ಲಿ ನೀರು ತುಂಬಿ ಕೃತಕ ನೆರೆ ಸೃಷ್ಟಿಯಾಗಿದೆ. ಬೈಲೆಕೆರೆಯಲ್ಲಿ 10 ರಿಂದ 15 ಮನೆಗಳಿಗೆ ನೀರು ತುಂಬಿದೆ. ಆಚಾರ್ಯ ಮಾರ್ಗ ಜಲಾವೃತವಾಗಿದೆ. ಈ ಪ್ರದೇಶಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ರಘುಪತಿ ಭಟ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕರಾವಳಿಗೆ ಎನ್‌ಡಿಆರ್‌ಎಫ್ ಪಡೆ: ಮಳೆ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ವಿಶಾಖಪಟ್ಣಂನಿಂದ ರಾಷ್ಟ್ರೀಯ ವಿಕೋಪ ಸ್ಪಂದನಾ ಪಡೆ(ಎನ್‌ಡಿಆರ್‌ಎಫ್)ಆಗಮಿಸಲಿದೆ. ಬೇಕಾದ ಸಹಕಾರವನ್ನು ಜಿಲ್ಲಾಡಳಿತ ವತಿಯಿಂದ ಒದಗಿಸಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು. ಉಪ್ಪಿನಂಗಡಿ ಹಾಗೂ ಬಂಟ್ವಾಳದಲ್ಲಿ ಅಪಾಯದ ಮಟ್ಟದ ಸಮೀಪದಲ್ಲಿ ನದಿ ನೀರು ಪ್ರವಹಿಸುತ್ತಿದ್ದು, ಯಾವುದೇ ಹೊತ್ತಿನಲ್ಲಿ ನೆರೆ ಪರಿಸ್ಥಿತಿ ತಲೆದೋರಬಹುದು. ಎದುರಿಸಲು ಸಿದ್ಧರಾಗಿರಿ ಎಂದರು.
ಇನ್ನೊಂದೆಡೆ, ಶನಿವಾರ ರಾತ್ರಿ ಉಡುಪಿ ಜಿಲ್ಲೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ ಆಗಮಿಸಿದೆ. ಕಾರ್ಕಳ, ಕುಂದಾಪುರದಲ್ಲಿ ತಲಾ ಒಂದು ತಂಡ ಮತ್ತು ಕಾಪು, ಉಡುಪಿ ಭಾಗದಲ್ಲಿ ಒಂದು ಸನ್ನದ್ಧವಾಗಿ ಕಾರ್ಯನಿರ್ವಹಿಸಲಿದೆ. ನಿಟ್ಟೂರು, ಬೀಡಿನಗುಡ್ಡೆ, ಸೂಡ, ಬೆಳ್ಳೆ, ಶಾಲೆಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು, ಸಂತ್ರಸ್ತರಿಗೆ ಅಗತ್ಯ ಆಹಾರ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ವಿಜಯವಾಣಿಗೆ ತಿಳಿಸಿದ್ದಾರೆ.

ಮಟ್ಟುಗುಳ್ಳ ಗದ್ದೆ ಮುಳುಗಡೆ: ಜಿಲ್ಲೆಯಲ್ಲಿ ಎರಡು ದಿನಗಳ ನಿರಂತರ ಮಳೆಗೆ ಕಟಪಾಡಿ ಸಮೀಪದ ಮಟ್ಟುಗುಳ್ಳ ಗದ್ದೆ ಸಂಪೂರ್ಣ ಮುಳುಗಿದ್ದು, 15 ವರ್ಷದ ನಂತರ ಇಂಥ ನೆರೆಗೆ ಊರು ಸಾಕ್ಷಿಯಾಗಿದೆ.
ನೀರಿನ ಮಟ್ಟ ನಿರಂತರ ಏರಿಕೆಯಾಗುತ್ತಿದ್ದು, ಕಡಲ ತೀರದ ರಸ್ತೆಗೆ ನೆರೆ ನೀರು ಆವರಿಸಿದ ಕಾರಣ ಮಟ್ಟು ಪಡುಕೆರೆ ಸಂಪರ್ಕ ಕಡಿತಗೊಂಡಿದೆ. ತಗ್ಗುಪ್ರದೇಶದ ನೂರೈವತ್ತು ಮನೆಗಳು ಮುಳುಗುವ ಭೀತಿ ಇದ್ದು, ರಾತ್ರಿ ಇನ್ನಷ್ಟು ಮನೆಗಳಿಗೆ ಅಪಾಯ ಸಂಭವಿಸುವ ಹಿನ್ನೆಲೆಯಲ್ಲಿ ಕಟಪಾಡಿ ಮತ್ತಿತರ ಕಡೆ ವಾಸಿಸುವ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ನೆರೆಪೀಡಿತರನ್ನು ಸ್ಥಳಾಂತರಿಸಲು ಗ್ರಾಪಂನ 1 ದೋಣೆ ಹಾಗೂ 3 ಖಾಸಗಿ ದೋಣಿಗಳು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಮಟ್ಟುಗುಳ್ಳ ಬೆಳೆಯುವ ಸೀಸನ್ ಮುಗಿದಿರುವ ಕಾರಣ ರೈತರಿಗೆ ಹೆಚ್ಚಿನ ನಷ್ಟ ಸಂಭವಿಸಿಲ್ಲ.

ಕಂಟ್ರೋಲ್ ರೂಂ: ತೀವ್ರ ಮಳೆ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ತಾಲೂಕುಗಳಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಸಾರ್ವಜನಿಕರು ನೆರವಿಗೆ ಆಯಾ ತಾಲೂಕಿನ ಕಂಟ್ರೋಲ್ ರೂಂ ದೂರವಾಣಿ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಉಡುಪಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಂ: 0820-2574802, ಉಡುಪಿ: 0820-2520417, ಬ್ರಹ್ಮಾವರ: 0820-2560494, ಕಾಪು: 0820-2591444, ಕುಂದಾಪುರ: 08254-230357, ಬೈಂದೂರು: 08254-251657, ಕಾರ್ಕಳ: 08258-230201.

ಬಪ್ಪನಾಡು ದೇಗುಲಕ್ಕೆ ನುಗ್ಗಿದ ನೀರು
ಮೂಲ್ಕಿ: ತೀವ್ರ ಮಳೆಯಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶನಿವಾರ ಜಲಾವೃತಗೊಂಡಿತು. ದೇವಸ್ಥಾನದ ಪೂರ್ವಭಾಗದ ಗದ್ದೆಗಳಲ್ಲಿ ನೀರು ತುಂಬಿ ಪ್ರಾಂಗಣಗಳಲ್ಲಿ ಹರಿದಿದೆ. ಇದರಿಂದ ದೈನಂದಿನ ಪೂಜಾ ಪುನಸ್ಕಾರಗಳಿಗೆ ಯಾವುದೇ ತೊಂದರೆಯಾಗದಿದ್ದರೂ, ಹವನ ಸಾಧ್ಯವಾಗುವುದಿಲ್ಲ. ಪೂರ್ವನಿಗದಿಯಂತೆ ಜುಲೈ 8ರಂದು ಕ್ಷೇತ್ರದಲ್ಲಿ ಅತಿವೃಷ್ಟಿ ನಿವಾರಣೆಗೆ ಸೀಯಾಳ ಅಭಿಷೇಕ ನೆರವೇರಲಿದೆ.

ಮಂಗಳೂರು-ಉಡುಪಿ ಏಕಮುಖ ಸಂಚಾರ
ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳು ಕಲ್ಸಂಕ ಬಳಿ ಕಾಮಿನಿ ಹೊಳೆ ತುಂಬಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ. ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುವ ವಾಹನಗಳನ್ನು ಕಾರ್ಕಳ ಮಾರ್ಗವಾಗಿ ಬಿಡಲಾಗುತ್ತಿದ್ದು, ಉಡುಪಿಯಿಂದ ಮಂಗಳೂರಿಗೆ ಬರುವ ವಾಹನಗಳಿಗೆ ಮಾತ್ರ ಎರ್ಮಾಳು ಮೂಲಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಭಾರಿ ವಾಹನಗಳ ಸಂಚಾರವನ್ನು ಈ ಮಾರ್ಗದಲ್ಲಿ ತಡೆಹಿಡಿಯಲಾಗಿದೆ. ಎರ್ಮಾಳು – ಕಲ್ಸಂಕ ಬಳಿ ಕಾಮಿನಿ ಹೊಳೆಗೆ ಇನ್ನೊಂದು ಸೇತುವೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಗಾಗಿ ನದಿಗೆ ಹಾಕಲಾಗಿದ್ದು ಮಣ್ಣು ನೆರೆ ನೀರಿಗೆ ಕೊಚ್ಚಿಹೋಗುತ್ತಿದೆ.

Leave a Reply

Your email address will not be published. Required fields are marked *

Back To Top