ಪ್ರಯಾಗ್ರಾಜ್: ಮಾಘಿ ಪೂರ್ಣಿಮೆಯ ಅಮೃತಸ್ನಾನದ ಹಿನ್ನೆಲೆಯಲ್ಲಿ ಮಹಾಕುಂಭ ಮೇಳಕ್ಕೆ ಕೋಟ್ಯಂತರ ಜನರು ಭೇಟಿ ನೀಡಿದ್ದು, ಸುಮಾರು 2 ಕೋಟಿಗೂ ಹೆಚ್ಚು ಜನರು ಪುಣ್ಯಸ್ನಾನ ಮಾಡಿದ್ದಾರೆ.
ಮಾಘಿ ಪೂರ್ಣಿಮೆಯ ಹಿನ್ನೆಲೆಯಲ್ಲಿ ನಾಲ್ಕನೇ ಅಮೃತ ಸ್ನಾನದ ಅವಧಿ ಬುಧವಾರ ಬೆಳಗಿನ ಜಾವ 4 ಗಂಟೆಗೆ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರವೇ ಕೋಟ್ಯಂತರ ಜನರು ಪ್ರಯಾಗ್ರಾಜ್ಗೆ ಆಗಮಿಸಿದ್ದರು. ಭಕ್ತರು ಬೆಳಗ್ಗೆಯೇ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಇದೇ ವೇಳೆ ಕಳೆದ ಒಂದು ತಿಂಗಳಿಂದ ವ್ರತಾಚರಣೆಯಲ್ಲಿದ್ದ ಕಲ್ಪವಾಸಿಗಳು ಪುಣ್ಯಸ್ನಾನ ಮಾಡಿ ವ್ರತವನ್ನು ಮುಕ್ತಾಯಗೊಳಿಸಿ ಕುಂಭ ಮೇಳದಿಂದ ತೆರಳಿದರು. ಮಾಘಿ ಪೂರ್ಣಿಮೆಯಂದು 2 ಕೋಟಿಗೂ ಹೆಚ್ಚು ಜನರು ಪುಣ್ಯ ಸ್ನಾನ ಮಾಡಿದ್ದು ಈ ಮೂಲಕ ಇದುವರೆಗೆ ಕುಂಭ ಮೇಳದಲ್ಲಿ 47 ಕೋಟಿ ಜನರು ಪುಣ್ಯಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಮುನ್ನೆಚ್ಚರಿಕೆ ಕ್ರಮ: ಮೌನಿ ಅಮಾವಾಸ್ಯೆಯಂದು ಕಾಲ್ತುಳಿತ ಸಂಭವಿಸಿದ್ದ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ಅವಘಡ ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬೆಳಗಿನ ಜಾವದಿಂದ ಕುಂಭ ಮೇಳದ ವ್ಯವಸ್ಥೆಗಳ ಮೇಲ ನಿಗಾ ವಹಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಭಕ್ತಾದಿಗಳ ಸುರಕ್ಷತೆಗಾಗಿ ಉತ್ತರ ಪ್ರದೇಶ ಸರ್ಕಾರ ಆಪರೇಷನ್ ಚತುರ್ಭಜಕ್ಕೆ ಚಾಲನೆ ನೀಡಿದೆ. ಜತೆಗೆ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ (ಐಸಿಸಿಸಿ) ಸ್ಥಾಪಿಸಿ 2750 ಹೈ ಟೆಕ್ ಕ್ಯಾಮರಾ, ಡ್ರೋನ್ ಮತ್ತು ಆಂಟಿ ಡ್ರೋನ್ ವ್ಯವಸ್ಥೆ ಮೂಲಕ ಕುಂಭ ಮೇಳದ ಮೇಲೆ ನಿಗಾ ವಹಿಸಲಾಗಿತ್ತು. ಕುಂಭ ಮೇಳಕ್ಕೆ ಹೆಚ್ಚಿನ ಜನರು ಆಗಮಿಸಿದ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಪ್ರಯಾಗ್ ರಾಜ್ ನ ಹಲವೆಡೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಜನರನ್ನು ಮಹಾಕುಂಭ ನಗರಕ್ಕೆ ಕರೆದೊಯ್ಯಲು 1200 ಬಸ್ ನಿಯೋಜಿಸಲಾಗಿತ್ತು. ಫೆ.26ರಂದು ಕೊನೆಯ ಅಮೃತಸ್ನಾನ ನಡೆಯಲಿದ್ದು, ಅಂದು ಮಹಾಕುಂಭ ಮೇಳ ಕೊನೆ ಗೊಳ್ಳಲಿದೆ.