ಜಯಲಲಿತಾ ಆರೋಗ್ಯದ ಬಗ್ಗೆ ಇಬ್ಬರು ಅಧಿಕಾರಿಗಳು ಸುಳ್ಳು ಹೇಳಿದ್ದರು: ತಮಿಳುನಾಡು ಸಚಿವರಿಂದ ಆರೋಪ

ಚೆನ್ನೈ: ಅಪೋಲೊ ಆಸ್ಪತ್ರೆಯಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಚಿಕಿತ್ಸೆ ಪಡೆಯುತ್ತಿದ್ದಾಗ ಇಬ್ಬರು ಹಿರಿಯ ಅಧಿಕಾರಿಗಳು ಅವರ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದರು ಎಂದು ತಮಿಳುನಾಡಿನ ಕಾನೂನು ಸಚಿವ ಸಿ.ವಿ.ಷಣ್ಮುಗಂ ಆರೋಪಿಸಿದ್ದಾರೆ.

ವಿಲ್ಲಾಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 2016ರಲ್ಲಿ ಅಮ್ಮಾ ಅವರ 75 ದಿನಗಳ ಆಸ್ಪತ್ರೆವಾಸದ ವೇಳೆ ಸರಿಯಾದ ಚಿಕಿತ್ಸೆ ನೀಡಿದ್ದರೆ ಅವರು ಬದುಕುಳಿಯುತ್ತಿದ್ದರು ಎಂದರು.

ಅಂದಿನ ಆರೋಗ್ಯ ಪ್ರಧಾನ ಕಾರ್ಯದರ್ಶಿ ಜೆ.ರಾಧಾಕೃಷ್ಣನ್​ ಅವರು ಜಯಲಲಿತಾ ಅವರನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯಲು ಅನುಮತಿ ನೀಡಿರಲಿಲ್ಲ. ಆರೋಗ್ಯ ಇಲಾಖೆ ಮಾಜಿ ಕಾರ್ಯದರ್ಶಿ ಪಿ.ರಾಮ ಮೋಹನ ರಾವ್​ ತನಿಖಾ ಆಯೋಗಕ್ಕೆ ತದ್ವಿರುದ್ಧ ಹೇಳಿಕೆ ದಾಖಲಿಸಿದ್ದಾರೆ ಎಂದರು.

ವೈದ್ಯರ ಘನತೆಯನ್ನು ಉಳಿಸಿಕೊಳ್ಳುವುದಕ್ಕಿಂತಲೂ ರೋಗಿಯ ಜೀವ ಉಳಿಸಿಕೊಳ್ಳುವುದು ಮುಖ್ಯವಾಗುತ್ತದೆ. ಎಷ್ಟೋ ಬಾರಿ ಜಯಲಲಿತಾ ಅವರನ್ನು ಚಿಕಿತ್ಸೆಗೆಂದು ವಿದೇಶಕ್ಕೆ ಕರೆದೊಯ್ಯುವ ಸಲಹೆ ನೀಡಲಾಗಿತ್ತು. ಕೇಂದ್ರ ಸರ್ಕಾರ ಕೂಡ ಏರ್​ ಆ್ಯಂಬುಲೆನ್ಸ್​ ಸೇವೆ ಒದಗಿಸುವ ಭರವಸೆ ನೀಡಿತ್ತು. ಆದರೆ ಇವೆಲ್ಲವನ್ನೂ ನಿರಾಕರಿಸಲಾಗಿತ್ತು. ಹಾಗಾಗಿ ರಾಧಾಕೃಷ್ಣನ್​ ಹಿನ್ನೆಲೆ ಕುರಿತು ತನಿಖೆ ನಡೆಯಬೇಕು ಎಂದರು.

ಜಯಲಲಿತಾ ಅವರ ಸಾವಿಗೂ ಹಿಂದಿನ ಘಟನಾವಳಿಗಳನ್ನು ತನಿಖೆ ಮಾಡಲು ಈ ಮೊದಲು ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್​ ಎ. ಆರುಮುಘಸ್ವಾಮಿ ಸಮಿತಿ ಜತೆಗೆ ವಿಶೇಷ ಪೊಲೀಸ್​ ತಂಡವೊಂದನ್ನು ರಚಿಸಿ ಪ್ರತ್ಯೇಕ ತನಿಖೆ ನಡೆಸುವಂತೆ ಕಾನೂನು ಸಚಿವರು ಒತ್ತಾಯಿಸಿದ್ದಾರೆ. (ಏಜೆನ್ಸೀಸ್)