ಡಿ.5ರಿಂದ ಪ್ಯಾನ್ ಕಡ್ಡಾಯ

ನವದೆಹಲಿ: ಹೊಸ ವರ್ಷಕ್ಕೆ ಮುನ್ನವೇ ದೇಶದಲ್ಲಿ ವಾರ್ಷಿಕ 2.5 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣಕಾಸು ವಹಿವಾಟಿಗೆ ಪ್ಯಾನ್ ಕಾರ್ಡ್ (ಶಾಶ್ವತ ಸಂಖ್ಯೆ) ಕಡ್ಡಾಯವಾಗಲಿದೆ. ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ನಿಯಮಗಳಿಗೆ ಹಲವು ತಿದ್ದುಪಡಿ ತಂದಿದ್ದು, ಡಿ.5ರಿಂದಲೇ ಇದು ಜಾರಿಯಾಗಲಿದೆ. ಪರಿಷ್ಕೃತ ನಿಯಮದ ಪ್ರಕಾರ ಪ್ರಕಾರ ವಾರ್ಷಿಕ 2.5 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ಹೊಂದಿರುವ ಸಂಸ್ಥೆಗಳು, ಒಂದು ವಿತ್ತೀಯ ವರ್ಷದಲ್ಲಿ ವೈಯಕ್ತಿಕವಾಗಿ 2.5 ಲಕ್ಷ ರೂ. ವಹಿವಾಟು ಮಾಡುವ ವ್ಯಕ್ತಿಗಳು 2019ರ ಮೇ 31ರೊಳಗೆ ಪ್ಯಾನ್ ಪಡೆಯುವುದು ಕಡ್ಡಾಯ. ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಈ ಸಂಬಂಧ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದ್ದು, ಯಾವುದೇ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ನಿರ್ದೇಶಕ, ಪಾಲುದಾರ, ಟ್ರಸ್ಟಿ, ಬರಹಗಾರ, ಸಂಸ್ಥಾಪಕ, ಕರ್ತೃ, ಮುಖ್ಯ ಕಾರ್ಯಕಾರಿ ಅಧಿಕಾರಿ, ಪ್ರಧಾನ ಅಧಿಕಾರಿ ಅಥವಾ ಪದಾಧಿಕಾರಿ ಯಾರೇ ಆಗಿದ್ದರೂ ಪ್ಯಾನ್​ಕಾರ್ಡ್ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಒಂದು ವರ್ಷದಲ್ಲಿ ಒಟ್ಟು ಮಾರಾಟ, ವಹಿವಾಟು ಅಥವಾ ನಿವ್ವಳ ಆದಾಯ 5 ಲಕ್ಷ ರೂ. ಮೀರದಿದ್ದರೂ ಅಂತಹ ಸಂಸ್ಥೆಗಳು ಕಡ್ಡಾಯವಾಗಿ ಪ್ಯಾನ್​ಕಾರ್ಡ್ ಪಡೆಯಬೇಕಾಗುತ್ತದೆ. ಇದರಿಂದ ತೆರಿಗೆ ವಂಚನೆ ತಡೆಗಟ್ಟುವ ಜತೆಗೆ, ನೇರ ತೆರಿಗೆಗಳ ಸಂಗ್ರಹವನ್ನು ಹೆಚ್ಚಿಸಲು ಆದಾಯ ತೆರಿಗೆ ಇಲಾಖೆಗೆ ಅನುಕೂಲವಾಗಲಿದೆ. ತಾಯಿ ಒಂಟಿಪಾಲಕರಾಗಿರುವ ಮಕ್ಕಳು ಪ್ಯಾನ್​ಕಾರ್ಡ್ ಪಡೆಯುವಾಗ ಕಡ್ಡಾಯವಾಗಿ ತಂದೆಯ ಹೆಸರು ನಮೂದಿಸಬೇಕು ಎಂಬ ನಿಯಮವನ್ನು ಸಡಿಲಿಸಲಾಗಿದೆ.