ಚಿಟ್ಟಿಗೆ ತಾಂತ್ರಿಕತೆಯೇ ಬಲ!

| ರಾಮಸುತ

ಬೆಂಗಳೂರು: ಅದೊಂದು ದಿನ ಇದ್ದಕ್ಕಿದ್ದಂತೆ ನಗರದ ಮೊಬೈಲ್ ಬಳಕೆದಾರರು ಅಚ್ಚರಿಪಡುವಂತಹ ಘಟನೆ ನಡೆಯುತ್ತದೆ. ಕಿಸೆಯೊಳಗೆ, ಕೈಯಲ್ಲಿ ಇದ್ದ ಮೊಬೈಲ್​ಗಳೆಲ್ಲ ಹಾರಿ ಆಕಾಶ ಸೇರುತ್ತವೆ. ಮೊಬೈಲ್ ಕಂಪನಿ ಮಾಲೀಕರು, ಟೆಲಿಕಾಂ ಮಿನಿಸ್ಟರ್ ಕೊಲೆಯಾಗುತ್ತದೆ. ಜನರೆಲ್ಲ ಬೆಚ್ಚಿ ಬೀಳುತ್ತಾರೆ. ಇಂತಹದ್ದೊಂದು ಕುತೂಹಲಕಾರಿ ಅಂಶದೊಂದಿಗೆ ‘2.0’ ಸಿನಿಮಾ ತೆರೆದುಕೊಳ್ಳುತ್ತದೆ. ಇದನ್ನು ಪರಿಹರಿಸುವಂತೆ ಡಾ. ವಸೀಗರನ್​ಗೆ (ರಜನಿಕಾಂತ್)ಕೋರಿಕೊಳ್ಳಲಾಗುತ್ತದೆ. ಆಗ ನೆರವಿಗೆ ರೋಬೋ ಚಿಟ್ಟಿ (ರಜನಿ)ಯನ್ನೇ ಕರೆತರಲಾಗುತ್ತದೆ. ಅವನಿಂದ ಈ ರಹಸ್ಯ ಭೇದಿಸೋಕೆ ಸಾಧ್ಯವೇ? ಹಾರಿ ಹೋದ ಮೊಬೈಲ್​ಗಳೆಲ್ಲ ಎಲ್ಲಿ ಹೋಗುತ್ತವೆ? ಅದರ ಹಿಂದಿರುವ ನಿಗೂಢ ಶಕ್ತಿ ಯಾವುದು ಎಂಬುದು ಚಿತ್ರದ ತಿರುಳು.

ಶಂಕರ್ ಸಿನಿಮಾಗಳಲ್ಲಿ ಪ್ರಮುಖವಾಗಿ ಇರುವ ಅಂಶಗಳೆಂದರೆ, ಅದ್ದೂರಿತನ ಮತ್ತು ಸಾಮಾಜಿಕ ಕಳಕಳಿ. ‘ಇಂಡಿಯನ್’, ‘ಮುದಲ್ವನ್’, ‘ಅನ್ನಿಯನ್’ವರೆಗೆ ಅವರ ಎಲ್ಲ ಸಿನಿಮಾಗಳಲ್ಲೂ ಸಮಾಜದಲ್ಲಿ ನಡೆಯುವ ಸಮಸ್ಯೆಯೊಂದರ ಕುರಿತು ಮತ್ತು ಅದನ್ನು ಬಗೆಹರಿಸುವ ಬಗ್ಗೆ ಬೆಳಕು ಚೆಲ್ಲುವುದು ಶಂಕರ್ ಸ್ಪೆಷಾಲಿಟಿ. ಅದು ‘2.0’ ಚಿತ್ರದಲ್ಲೂ ಮುಂದುವರಿದಿದೆ. ಮೊಬೈಲ್ ಟವರ್​ಗಳಿಂದ ಉಂಟಾಗುತ್ತಿರುವ ರೇಡಿಯೇಷನ್​ನಿಂದ ಪಕ್ಷಿಗಳಿಗೆ ಹಾನಿಯುಂಟಾಗುತ್ತಿದೆ. ಟವರ್​ಗಳು ಹೊರಸೂಸುವ ವಿಕಿರಣಗಳು ಪಕ್ಷಿ ಸಂಕುಲಕ್ಕೆ ಉಂಟು ಮಾಡುತ್ತಿರುವ ಹಾನಿ ಬಗ್ಗೆ ‘2.0’ ಮಾತನಾಡುತ್ತದೆ. ಅದಕ್ಕೆ ಶಂಕರ್ ತಮ್ಮದೇ ಶೈಲಿಯಲ್ಲೇ ಪರಿಹಾರ ನೀಡುತ್ತಾರೆ ಕೂಡ! ಸಿನಿಮಾದ ಆಶಯವೇನೋ ಚೆನ್ನಾಗಿದೆ. ಸಿನಿಮಾದ ಮೇಕಿಂಗ್ ಕೂಡ ಅದ್ಧೂರಿಯಾಗಿದೆ. ಆದರೆ, ಚಿತ್ರಕಥೆಯಲ್ಲಿನ ಗಟ್ಟಿತನದ ಕೊರತೆ ಎದ್ದು ಕಾಣುತ್ತದೆ. ವಿಎಫ್​ಎಕ್ಸ್, ಗ್ರಾಫಿಕ್ಸ್, ಸಿಜಿ ತಂತ್ರಗಳಿಗೆ ನೀಡಿರುವಷ್ಟು ಮಹತ್ವವನ್ನು ಕಥೆ, ಚಿತ್ರಕಥೆಗೆ ಶಂಕರ್ ನೀಡಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ಕ್ಲೈಮ್ಯಾಕ್ಸ್​ನಲ್ಲಿ ರಜನಿ ಅಭಿಮಾನಿಗಳನ್ನು ಮೆಚ್ಚಿಸುವ ಪ್ರಯತ್ನವನ್ನೂ ಮಾಡಲಾಗಿದೆ. ಬಹುಶಃ ಚಿಟ್ಟಿ 2.0 ಮತ್ತು ಕುಟ್ಟಿ 3.0 ಪಾತ್ರಗಳಿಗೆ ಜಾಸ್ತಿ ಸ್ಕ್ರೀನ್​ಸ್ಪೇಸ್ ಇದ್ದಿದ್ದರೆ, ಇನ್ನಷ್ಟು ಮನರಂಜನೆ ಪ್ರಾಪ್ತವಾಗುತ್ತಿತ್ತು. ಹಾಗಂತ, ತಾಂತ್ರಿಕತೆ ಕೌಶಲಗಳನ್ನು ನಿರ್ಲಕ್ಷಿಸುವಂತಿಲ್ಲ. ಇಡೀ ಸಿನಿಮಾ ನಿಂತಿರುವುದೇ ದೃಶ್ಯ ವೈಭವದ ಮೇಲೆ. ಅಕ್ಷಯ್ಕುಮಾರ್ ನಿಭಾಯಿಸಿರುವ ಪಕ್ಷಿ ರಾಜ ಹಾಗೂ ರೋಬೋ ಚಿಟ್ಟಿ 2.0 ಪಾತ್ರಗಳ ಮುಖಾಮುಖಿ ದೃಶ್ಯಗಳು ಮೈನವಿರೇಳಿಸುತ್ತವೆ. ಆರಂಭದಲ್ಲಿ ಬರುವ ಮೊಬೈಲ್ ಹಾರಿ ಹೋಗುವ, ಮೊಬೈಲ್​ಗಳಿಂದಲೇ ಕೊಲೆಯಾಗುವ ದೃಶ್ಯಗಳಲ್ಲಿ ಲಾಜಿಕ್ ಇಲ್ಲದಿದ್ದರೂ, ಇಷ್ಟವಾಗುತ್ತವೆ. 3ಡಿ ದೃಶ್ಯ ಮತ್ತು 4ಡಿ ಧ್ವನಿ ವಿನ್ಯಾಸದಿಂದ ಹೊಸ ರೀತಿಯ ಅನುಭವ ಪ್ರೇಕ್ಷಕನಿಗೆ ಗ್ಯಾರಂಟಿ ದಕ್ಕುತ್ತದೆ. ವಿಎಫ್​ಎಕ್ಸ್ ನಿರ್ವಹಣೆ ಮಾಡಿರುವ ಶ್ರೀನಿವಾಸ್, ಧ್ವನಿ ವಿನ್ಯಾಸಕ ರಸೂಲ್ ಪೂಕುಟ್ಟಿ, ಛಾಯಾಗ್ರಾಹಕ ನೀರವ್ ಶಾ, ಸಂಕಲನಕಾರ ಆಂಟನಿ ಕೆಲಸಗಳಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಹಾಡುಗಳಿಗೆ ಹೆಚ್ಚಿನ ಪ್ರಾಶಸ್ಱವಿಲ್ಲ. ಆದರೆ, ಹಿನ್ನೆಲೆ ಸಂಗೀತದಲ್ಲಿ ಎ.ಆರ್. ರಹಮಾನ್ ಗಮನ ಸೆಳೆಯುತ್ತಾರೆ. ಹಾಗಾಗಿ, ಈ ‘ಚಿಟ್ಟಿ 2.0’ ಬಿಗಿಯಾದ ಸ್ಕ್ರಿಪ್ಟ್​ಗಿಂತ ತಾಂತ್ರಿಕ ಬಲವನ್ನಷ್ಟೇ ನೆಚ್ಚಿಕೊಂಡಿದ್ದಾನೆ.

ವಸೀಗರನ್, ಚಿಟ್ಟಿ, ಚಿಟ್ಟಿ 2.0, ಕುಟ್ಟಿ 3.0 ಪಾತ್ರಗಳಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದು, ಕೊನೆಯ ಎರಡು ಪಾತ್ರಗಳ ಮೂಲಕ ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ಪಕ್ಷಿ ಶಾಸ್ತ್ರಜ್ಞನಾಗಿ ಬಣ್ಣ ಹಚ್ಚಿರುವ ಅಕ್ಷಯ್ ಫ್ಲಾಶ್​ಬ್ಯಾಕ್ ದೃಶ್ಯಗಳಲ್ಲಿ ಎಮೋಷನಲ್ ಆಗಿದ್ದರೆ, ದೈತ್ಯ ಪಕ್ಷಿಯಾಗಿ ಹೆದರಿಸುತ್ತಾರೆ. ಆಮಿ ಜಾಕ್ಸನ್​ಗೆ ಸೂಕ್ತವಾಗುವಂತಹ ರೋಬೋ ಪಾತ್ರ ಈ ಸಿನಿಮಾದಲ್ಲಿ ಸಿಕ್ಕಿರುವುದು ವಿಶೇಷ!