ಒಂದೇ ವಾರದಲ್ಲಿ ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಬರೆದ 2.0 ಸಿನಿಮಾದ ಗಳಿಕೆ ಎಷ್ಟು ಗೊತ್ತಾ?

ಮುಂಬೈ: ರಜನೀಕಾಂತ್​ ಅಭಿನಯದ ಬಹುಕೋಟಿ ವೆಚ್ಚದ 2.0 ಸಿನಿಮಾ ಬಿಡುಗಡೆಯಾದ ಏಳು ದಿನಗಳಲ್ಲಿ ವಿಶ್ವದಾದ್ಯಂತ ಭರ್ಜರಿ ಗಳಿಕೆ ಮಾಡಿದ್ದು, 500 ಕೋಟಿ ರೂ. ಕ್ಲಬ್​ಗೆ ಸೇರಿದೆ.

ಬಿಡುಗಡೆಗೆ ಮೊದಲೇ ಬಹುನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ 2.0 ನ.29ರಂದು ಬಿಡುಗಡೆಯಾಗಿತ್ತು. ಬಾಹುಬಲಿ (ಮೊದಲನೇ ಭಾಗ) ಚಲನಚಿತ್ರ ತನ್ನ ಇಡೀ ಪ್ರದರ್ಶನದಲ್ಲಿ ಗಳಿಸಿದಷ್ಟನ್ನು ಒಂದೇ ವಾರದಲ್ಲಿ ಸಂಪಾದಿಸಿ ಬಾಹುಬಲಿ ದಾಖಲೆ ಮುರಿದಿತ್ತು. 2.0 ಸದ್ಯ ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ 12 ನೇ ಸ್ಥಾನ ಪಡೆದುಕೊಂಡಿದೆ.

ದಂಗಲ್​, ಟೈಗರ್​ ಜಿಂದಾ ಹೈ, ಪದ್ಮಾವತ್​, ಸಂಜು, ಸುಲ್ತಾನ್​ ಸಿನಿಮಾಗಳು ವಿಶ್ವದಾದ್ಯಂತ ಪ್ರದರ್ಶನಗೊಂಡು ಗಳಿಸಿದ್ದ ಮೊತ್ತವನ್ನೂ 2.0 ಚಿತ್ರ ಮೀರಿಸಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಟ್ರೇಡ್​ ವಿಶ್ಲೇಷಕ ರಮೇಶ್​ ಬಾಲಾ ಅವರು 2.0 ಸಿನಿಮಾದ ಜಗತ್ತಿನಾದ್ಯಂತ ಪ್ರದರ್ಶನ, ಗಳಿಕೆ ಬಗ್ಗೆ ಟ್ವೀಟ್ ಮಾಡಿದ್ದು, ಮೊದಲವಾರದಲ್ಲೇ 500 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದಿದ್ದಾರೆ.