2 ವರ್ಷಗಳಲ್ಲಿ ಕಾವೇರಿ ನೀರು

ಕನಕಪುರ: ಎರಡು ವರ್ಷಗಳಲ್ಲಿ ತಾಲೂಕಿನ ಪ್ರತಿ ಮನೆಗೂ ಕಾವೇರಿ ನೀರು ನೀಡಲಾಗುವುದು ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು. ತುಂಗಣಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಭಾನುವಾರ ಭೂಮಿಪೂಜೆ ಹಾಗೂ ಕುಡಿಯುವ ನೀರಿನ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸಂಗಮದಿಂದ 300 ಕೋಟಿ ರೂ. ವೆಚ್ಚದಲ್ಲಿ ಉಯ್ಯಂಬಳ್ಳಿ , ಕೋಡಿಹಳ್ಳಿ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯ ಪ್ರತಿ ಮನೆಗಳಿಗೆ ಕಾವೇರಿ ನೀರು ನೀಡುವ ನಿಟ್ಟಿನಲ್ಲಿ ಪೈಪ್​ಲೈನ್ ಅಳವಡಿಕೆ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಜನರ ಆರೋಗ್ಯ ದೃಷ್ಟಿಯಿಂದ ತುಂಗಣಿ ಗ್ರಾಪಂ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸುವ ಮೊದಲ ಹಂತವಾಗಿ 8 ಗ್ರಾಮಗಳಿಗೆ 3.5 ಲಕ್ಷ ರೂ. ನೀರಿನ ಘಟಕಗಳನ್ನು ಸ್ಥಾಪಿಸಿ ಲೋಕಾರ್ಪಣೆ ಮಾಡಲಾಗಿದೆ ಎಂದರು.

ಭವಿಷ್ಯದಲ್ಲಿ ತುಂಗಣಿ ಗ್ರಾಮ ನಗರಸಭೆ ವ್ಯಾಪ್ತಿಗೆ ಸೇರುವ ಸಾಧ್ಯತೆಯಿದ್ದು, ಈ ಭಾಗದ ಅಭಿವೃದ್ಧಿ ತ್ವರಿತವಾಗಿ ಸಾಗಿದೆ. ಅಲ್ಲದೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿ ಜಿಲ್ಲೆಯ ಎಲ್ಲ ಶಾಸಕರ ಸಹಕಾರದೊಂದಿಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ತುಂಗಣಿ ಪಂಚಾಯಿತಿ ವ್ಯಾಪ್ತಿಯ ವರಗೇರಹಳ್ಳಿ, ಅರಳಾಳುಸಂದ್ರ, ತೊಪ್ಪಗಾನಹಳ್ಳಿ, ಕುರಿಗೌಡನದೊಡ್ಡಿ, ಗ್ರಾಮಗಳಲ್ಲಿ 1.70 ಕೋಟಿ ರೂ.ಗಳ ರಸ್ತೆ ಮತ್ತು ಚರಂಡಿ ಕಾಮಗಾರಿ, ತುಂಗಣಿ, ರಾಯಸಂದ್ರ, ತೊಪ್ಪಗನಹಳ್ಳಿ, ಕುರಿಗೌಡನದೊಡ್ಡಿ, ಗೋಪಸಂದ್ರ, ವರಗೇರಹಳ್ಳಿ, ಅರಳಾಳುಸಂದ್ರ, ರಾಂಪುರ ಗ್ರಾಮಗಳಲ್ಲಿ ಕಿರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಂಸದರು ಉದ್ಘಾಟಿಸಿದ್ದಾರೆ ಹೇಳಿದರು.

ಜಿಪಂ ಅಧ್ಯಕ್ಷ ಎಂ.ಎನ್. ನಾಗರಾಜು, ತಾಪಂ ಅಧ್ಯಕ್ಷ ಧನಂಜಯ್ಯ, ಜಿಪಂ ಸದಸ್ಯರಾದ ಉಷಾರವಿ, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕಿ ಸುಕನ್ಯಾ ರಂಗಸ್ವಾಮಿ, ರೈತಸೇವಾ ಸಹಕಾರ ಬ್ಯಾಂಕಿನ ಅಧ್ಯಕ್ಷ ಮುದ್ದೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಭೂಮಿ ಬೆಲೆ ಗಗನಕ್ಕೆ: 3,500 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ತುಂಗಣಿ ಆಸುಪಾಸಿನಲ್ಲಿ ಹಾದು ಹೋಗಲಿದೆ. ಇದರ ಪಕ್ಕದಲ್ಲೇ ಎಕ್ಸ್​ಪ್ರೆಸ್ ಕಾರಿಡಾರ್ ಕೂಡ ಬರಲಿದೆ. ನಗರ ಪ್ರದೇಶದಿಂದ ಈ ರಸ್ತೆಗಳು 5 ಕಿ.ಮೀ. ದೂರದಲ್ಲಿದೆ. ತುಂಗಣಿ ಅಭಿವೃದ್ಧಿ ಪಥದಲ್ಲಿ ಸಾಗಲಿದೆ. ರೈತರು ಜಮೀನು ಮಾರಾಟ ಮಾಡದಂತೆ ಕರೆ ನೀಡಿದರು. ಈಗಾಗಲೇ ತುಂಗಣಿ ವ್ಯಾಪ್ತಿಯಲ್ಲಿ ಜಮೀನಿನ ಬೆಲೆ ಗಗನಕ್ಕೇರಿದೆ, ಭೂಸ್ವಾಧೀನದಿಂದಲೂ ರೈತರಿಗೆ ಕೋಟ್ಯಂತರ ಹಣ ಬಂದಿದೆ. ಇದನ್ನು ಆಸ್ತಿ ಖರೀದಿಸುವ ಮೂಲಕ ಜೀವನಮಟ್ಟ ಸುಧಾರಿಸಿಕೊಳ್ಳಿ ಎಂದು ಸುರೇಶ್ ಹೇಳಿದರು.