ಶಿರಸಿ, ಬಾಂದಾರು, ನೀರು, ಸಮಸ್ಯೆ, Sirsi, Water, Problem, Dam

2 ಕಡೆ ಸಿದ್ಧಗೊಳ್ಳುತ್ತಿದೆ ಬಾಂದಾರು

ಶಿರಸಿ: ಶಿರಸಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗತೊಡಗಿದೆ. ಸಮರ್ಪಕ ನೀರು ಸರಬರಾಜು ಮತ್ತು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾರಿಗದ್ದೆ ಮತ್ತು ಕೆಂಗ್ರೆಯಲ್ಲಿ ಬಾಂದಾರು ನಿರ್ವಣಕ್ಕೆ ನಗರಸಭೆ ಮುಂದಾಗಿದೆ.

ಸದ್ಯ ನಗರದ ಜನಸಂಖ್ಯೆ 80 ಸಾವಿರದಷ್ಟಿದೆ. ವರ್ಷದಿಂದ ವರ್ಷಕ್ಕೆ ನೀರಿನ ಬೇಡಿಕೆ ಹೆಚ್ಚುತ್ತಿದೆ. ಸದ್ಯದ ಸ್ಥಿತಿಯಲ್ಲಿ ನಗರಕ್ಕೆ ಪ್ರತಿ ದಿನ 4.5 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕೆಂಗ್ರೆ ಹೊಳೆ ಮತ್ತು ಮಾರಿಗದ್ದೆಯಿಂದ ಪಂಪ್ ಮಾಡಿ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಬೇಸಿಗೆ ಸಮೀಪಿಸುತ್ತಿದ್ದಂತೆ ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತದೆ. ಈ ವೇಳೆ ತಾತ್ಕಾಲಿಕ ಒಡ್ಡು ನಿರ್ವಿುಸಿ ನೀರು ಸಂಗ್ರಹಿಸಿ ಪೂರೈಸಲಾಗುತ್ತಿದೆ. ಉಸುಕು ಚೀಲಗಳನ್ನು ಅಡ್ಡ ಇಟ್ಟು ನಿರ್ವಿುಸುತ್ತಿದ್ದ ಈ ಒಡ್ಡಿಗೆ ನಗರಸಭೆ ಪ್ರತಿ ವರ್ಷ ಲಕ್ಷಾಂತರ ರೂ. ವ್ಯಯಿಸುತ್ತಿದೆ.

ಇದೀಗ ನಗರೋತ್ಥಾನ ಯೋಜನೆಯಡಿ ಬಾಂದಾರು ನಿರ್ವಣಕ್ಕೆ ನಗರಸಭೆ ಮುಂದಾಗಿದೆ. ಕೆಂಗ್ರೆಯಲ್ಲಿ ಜಾಕ್​ವೆಲ್ ಮತ್ತು ಬಾಂದಾರು, ಮಾರಿಗದ್ದೆಯಲ್ಲಿ ಬಾಂದಾರು ಸೇರಿ ಒಟ್ಟು 1.8 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಂಡಿದೆ. ಏಪ್ರಿಲ್ ಅಂತ್ಯದ ವೇಳೆ ಬಾಂದಾರು ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಹೊಸ ಪಂಪ್​ಗಳಿಗೆ ಪ್ರಸ್ತಾವನೆ: ನಗರಕ್ಕೆ ನೀರು ಸರಬರಾಜು ಮಾಡುವ ಪಂಪ್​ಗಳು ಅಂದಾಜು 10-11 ವರ್ಷಗಳಷ್ಟು ಹಳೆಯದಾಗಿದ್ದು, ಪದೇ ಪದೆ ಕೈ ಕೊಡುತ್ತಿವೆ. ಮಾರಿಗದ್ದೆಯಲ್ಲಿ ಮೂರು ಪಂಪ್​ಗಳಿದ್ದು, ಎರಡು ನಿರಂತರ ಕಾರ್ಯನಿರ್ವಹಿಸುತ್ತವೆ. ಇದೀಗ ಹೊಸ ಪಂಪ್​ಗಳನ್ನು ಅಳವಡಿಕೆ ಮತ್ತು ಒಡೆದ ಪೈಪ್​ಗಳನ್ನು ಬದಲಿಸಿ ನೀರಿನ ಸೋರಿಕೆ ತಡೆಗಟ್ಟಲು ಸರ್ಕಾರಕ್ಕೆ 50 ಲಕ್ಷ ರೂ. ಪ್ರಸ್ತಾವನೆಯನ್ನು ನಗರಸಭೆ ಸಲ್ಲಿಸಿದೆ.

ಎಬಿಸಿ ಕೇಬಲ್ ಅಳವಡಿಕೆ ನನೆಗುದಿಗೆ: ನಗರದ ಹೆಸ್ಕಾಂ ಕಚೇರಿಯಿಂದ ಮಾರಿಗದ್ದೆ ಮತ್ತು ಕೆಂಗ್ರೆ ಪಂಪ್​ಹೌಸ್​ಗೆ ಅಂದಾಜು 20 ಕಿಮೀನಷ್ಟು ಪ್ರತ್ಯೇಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಮಳೆಗಾಲದಲ್ಲಿ ಕಂಬ ಬೀಳುವುದು ಇಲ್ಲವೇ ಕಂಬದ ಮೇಲೆ ಪದೇಪದೆ ಮರ ಬೀಳುವುದು, ಇನ್ಸುಲೇಟರ್ ಸಮಸ್ಯೆ ಸಾಮಾನ್ಯವಾಗಿದೆ. ಹೀಗಾಗಿ, ನಿರಂತರ ವಿದ್ಯುತ್​ಗಾಗಿ ಎಬಿಸಿ ಕೇಬಲ್ ಅಳವಡಿಸುವ ಬಗ್ಗೆ ನಗರಸಭೆ ನಿರಂತರ ಯತ್ನ ನಡೆಸಿದೆ. ಈ ಕುರಿತು 4 ವರ್ಷಗಳ ಹಿಂದೆಯೇ ಹೆಸ್ಕಾಂಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ನಡುವೆ ಮಾರಿಗದ್ದೆ ಮತ್ತು ಕೆಂಗ್ರೆಯಲ್ಲಿ ಜನರೇಟರ್ ಅಳವಡಿಸಿ ವಿದ್ಯುತ್ ಸಮಸ್ಯೆ ಬಗೆಹರಿಸುವ ನಗರಸಭೆ ಪ್ರಯತ್ನ ಫಲ ನೀಡಿಲ್ಲ.

ಮಾರಿಗದ್ದೆ ಮತ್ತು ಕೆಂಗ್ರೆಯಲ್ಲಿ ಈಗಾಗಲೇ ನೀರು ಹರಿವಿನ ಪ್ರಮಾಣ ಕ್ಷೀಣಿಸಿದೆ. ಮಾರ್ಚ್​ನಲ್ಲಿ ಮಳೆಯಾಗದಿದ್ದರೆ ಈ ವರ್ಷವೂ ತಾತ್ಕಾಲಿಕ ಒಡ್ಡು ನಿರ್ವಿುಸಬೇಕಾಗಬಹುದು. | ಬಿ. ಅಶ್ವಿನಿ, ನಗರಸಭೆ ಪೌರಾಯುಕ್ತೆ