ರಾಹುಲ್​ ಶತಕದಾಟ, ಕುಲದೀಪ್​ ಯಾದವ್​ ಬೌಲಿಂಗ್​ ದಾಳಿಗೆ ನಲುಗಿದ ಇಂಗ್ಲೆಂಡ್​

ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್​ನಲ್ಲಿ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಎಂಟು ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ದಾಖಲಿಸಿದೆ.

ಮೊದಲು ಬ್ಯಾಟಿಂಗ್​ ಮಾಡಿದ ಇಂಗ್ಲೆಂಡ್​ ತಂಡವನ್ನು ಭಾರತ ಕುಲದೀಪ್​ ಯಾದವ್​ (5 ವಿಕೆಟ್​) ಅವರ ಪ್ರಕರ ಬೌಲಿಂಗ್​ ದಾಳಿಯ ಮೂಲಕ 159 ರನ್‌ಗಳಿಗೆ ಕಟ್ಟಿ ಹಾಕಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ್ದ ಭಾರತ ತಂಡ ಆರಂಭದಲ್ಲಿ ಶಿಖರ್​ ಧವನ್​ ಅವರ ವಿಕೆಟ್​ ಕಳೆದುಕೊಳ್ಳುವ ಮೂಲಕ ಆಘಾತ ಅನುಭವಿಸಿತಾದರೂ, ಕೆಎಲ್ ರಾಹುಲ್ (101*) ಅವರ ಸಮಯೋಚಿತ ಆಟದ ನೆರವಿನಿಂದ ಯಶಸ್ವಿಯಾಗಿ ಗೆಲುವಿನ ಗುರಿ ಮುಟ್ಟಿತು.

ಧವನ್​ ಹೊರತಾಗಿಯೂ ಕನ್ನಡಿಗ ರಾಹುಲ್ ಭಾರತಕ್ಕೆ ಉತ್ತಮ ಆರಂಭವೊದಗಿಸಿಕೊಟ್ಟರು. ಇವರಿಗೆ ರೋಹಿತ್ ಶರ್ಮಾ ಅವರಿಂದ ಉತ್ತಮ ಸಾಥ್​ ದೊರೆಯಿತು. ಹೀಗಿರುವಾಗಲೇ 32 ರನ್ ಗಳಿಸಿದ್ದ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದರು. ಹೀಗಿದ್ದರೂ, ಉತ್ತಮ ಆಟ ಮುಂದುವರಿಸಿದ ರಾಹುಲ್​ ಕೇವಲ 53 ಎಸೆತಗಳಲ್ಲೇ ಶತಕ ಸಾಧನೆ ಮಾಡುವ ಮೂಲಕ ಭಾರತವನ್ನು ಗೆಲ್ಲಿಸಿದರು. ಅಂತಿಮವಾಗಿ ಭಾರತ 18.2 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಇಂಗ್ಲೆಂಡ್​ ಪರ ಜೆಸಿ ಬಟ್ಲರ್​ 69 (46), ಜೆಜೆ ರಾಯ್​ 30 (20) ಹೊರತು ಪಡಿಸಿದರೆ ಯಾರಿಂದಲೂ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ.

ಇನ್ನು ಭಾರತದ ಪರ ಬೌಲಿಂಗ್​ ಮಾಡಿದ ಕುಲದೀಪ್​ ಯಾದವ್​ ಐದು ವಿಕೆಟ್​ಗಳನ್ನು ಕಸಿಯುವ ಮೂಲಕ ಪಂದ್ಯದ ಗೆಲುವಿಗೆ ರಾಹುಲ್​ ಅವರಷ್ಟೇ ಪ್ರಧಾನ ಪಾತ್ರ ವಹಿಸಿದರು. ಇನ್ನುಳಿದಂತೆ ಯಾದವ್​ 2, ಪಾಂಡ್ಯ 1 ವಿಕೆಟ್​ ಪಡೆದರು.

ಇಂಗ್ಲೆಂಡ್​ ಪರ ವೆಲ್ಲೀ, ರಶೀದ್​ ತಲಾ ಒಂದೊಂದು ವಿಕೆಟ್​ಗಳನ್ನಷ್ಟೇ ಪಡೆಯಲಷ್ಟೇ ಶಕ್ತರಾದರು.