ಸಿಖ್‌ ವಿರೋಧಿ ದಂಗೆ: 186 ಪ್ರಕರಣಗಳ ತನಿಖೆಗೆ ಇಬ್ಬರು ಸದಸ್ಯರ ಎಸ್‌ಐಟಿಗೆ ಸುಪ್ರೀಂ ಅಸ್ತು

ನವದೆಹಲಿ: ದೆಹಲಿಯ 1984ರ ಸಿಖ್​ ವಿರೋಧಿ ಗಲಭೆಯ 186 ಪ್ರಕರಣಗಳ ತನಿಖೆಯನ್ನು ಮುಂದುವರಿಸಲು ಇಬ್ಬರು ಸದಸ್ಯರ ವಿಶೇಷ ತನಿಖಾ ತಂಡದ ತನಿಖೆಗೆ ಕೇಂದ್ರ ಸರ್ಕಾರದ ಸಲಹೆಯನ್ನು ಸುಪ್ರೀಂ ಕೋರ್ಟ್‌ ಅಂಗೀಕರಿಸಿದೆ.

ಸುಪ್ರೀಂ ಕೋರ್ಟ್‌ ಜನವರಿ 11 ರಂದು ನೀಡಿದ ತೀರ್ಪನ್ನು ಮಾರ್ಪಡಿಸಿ ಕೇಂದ್ರ ಸರ್ಕಾರ ನೀಡಿದ ಶಿಫಾರಸುಗಳನ್ನು ಅಂಗೀಕರಿಸಿರುವ ಕೋರ್ಟ್‌, ತನಿಖೆಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ.

ಜನವರಿ 11 ರಂದು ಸುಪ್ರೀಂ ಕೋರ್ಟ್‌, ನೋಂದಾಯಿತ ಪ್ರಕರಣಗಳ ತನಿಖೆಗೆಂದು ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು ನೇಮಕ ಮಾಡಿತ್ತು.

1984ರ ನವೆಂಬರ್‌ನಲ್ಲಿ ದೆಹಲಿಯ ತ್ರಿಲೋಕ್‌ಪುರಿಯಲ್ಲಿ ಹೇರಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಮನೆಗಳನ್ನು ಸುಟ್ಟು ಹಾಕಿದ್ದ ಸಂಬಂಧ 100ಕ್ಕೂ ಅಧಿಕ ಜನರನ್ನು ಬಂಧಿಸಲಾಗಿತ್ತು. ಅದರಲ್ಲಿ 88 ಜನರು ದೋಷಿ ಎಂದು 1996ರಲ್ಲಿ ದೆಹಲಿ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು. ಆ 88 ಜನರಲ್ಲಿ ಕೆಲವರು ಈಗಾಗಲೇ ಮೃತಪಟ್ಟಿದ್ದು, ಉಳಿದವರ ಶಿಕ್ಷೆಯನ್ನು ಪ್ರಶ್ನಿಸಿ ದೆಹಲಿ ಹೈ ಕೋರ್ಟ್​ ಮೊರೆ ಹೋಗಲಾಗಿತ್ತು. ಬಳಿಕ ಹೈಕೋರ್ಟ್ ಕೂಡ 88 ಜನರ ವಿರುದ್ಧ ನೀಡಿದ್ದ ಶಿಕ್ಷೆಯನ್ನು ಎತ್ತಿಹಿಡಿದಿತ್ತು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಭದ್ರತಾಪಡೆಯನ್ನು ಹತ್ಯೆ ಮಾಡಿದ ನಂತರ ದೇಶಾದ್ಯಂತ ಉಂಟಾದ ಭಾರಿ ಗಲಭೆಯಲ್ಲಿ ಸುಮಾರು 2,800 ಸಿಖ್ಖರು ಕೊಲ್ಲಲ್ಪಟ್ಟರು. ಅದರಲ್ಲಿ ದೆಹಲಿಯೊಂದರಲ್ಲಿಯೇ ನಡೆದ ಗಲಭೆಯಲ್ಲಿ 2,100 ಜನರು ಜೀವ ಕಳೆದುಕೊಂಡಿದ್ದರು. (ಏಜೆನ್ಸೀಸ್)