ಸಿಖ್ ಗಲಭೆಕೋರನಿಗೆ ಗಲ್ಲು

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ಸಿಖ್ ಹತ್ಯಾಕಾಂಡ ಪ್ರಕರಣದ ಅಪರಾಧಿಗಳಿಗೆ ಮಂಗಳವಾರ ಶಿಕ್ಷೆ ಪ್ರಕಟವಾಗಿದೆ. ಯಶ್​ಪಾಲ್ ಸಿಂಗ್(55)ಗೆ ಮರಣ ದಂಡನೆ ಹಾಗೂ ನರೇಶ್ ಶೆರಾವತ್(68)ಗೆ ಜೀವಿತಾವಧಿ ಜೈಲು ಶಿಕ್ಷೆ ನೀಡಲಾಗಿದೆ. ಜತೆಗೆ ಇಬ್ಬರಿಗೂ ತಲಾ 35 ಲಕ್ಷ ರೂ. ದಂಡವನ್ನು ಪಟಿಯಾಲ ವಿಶೇಷ ಕೋರ್ಟ್ ವಿಧಿಸಿದೆ.

1996ರಲ್ಲಿ ಕಿಶೋರಿ ಲಾಲ್ ಎನ್ನುವ ಮಾಂಸದ ವ್ಯಾಪಾರಿಗೆ ಗಲ್ಲು ಶಿಕ್ಷೆ ಪ್ರಕಟವಾಗಿತ್ತು. ಅದರೆ ಬಳಿಕ ಸುಪ್ರೀಂಕೋರ್ಟ್ ಆತನ ಶಿಕ್ಷೆಯನ್ನು ಜೀವಿತಾವಧಿ ಜೈಲು ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು. ಹೀಗಾಗಿ 1984ರ ಸಿಖ್ ಗಲಭೆಗೆ ಸಂಬಂಧಿಸಿದ ಎರಡನೇ ಪ್ರಮುಖ ಕೋರ್ಟ್ ಆದೇಶ ಇದಾಗಿದೆ. ವಿಶೇಷ ತನಿಖಾ ದಳದ ದೋಷಾರೋಪ ಪಟ್ಟಿ ಆಧರಿಸಿ ನರೇಶ್ ಶೆರಾವತ್ ಹಾಗೂ ಯಶ್​ಪಾಲ್​ಸಿಂಗ್​ರನ್ನು ದೋಷಿ ಎಂದು ನ.15ರಂದು ಕೋರ್ಟ್ ಹೇಳಿತ್ತು. 1984ರ ಗಲಭೆ ಸಂದರ್ಭದಲ್ಲಿ ಹರ್​ದೇವ್ ಸಿಂಗ್ ಹಾಗೂ ಅವತಾರ್​ಸಿಂಗ್​ರನ್ನು ಇವರು ಕೊಲೆ ಮಾಡಿದ್ದರು. ಪ್ರಕರಣದ ವಿಶೇಷವೆಂದರೆ ಮೂರೂವರೆ ದಶಕಗಳ ಬಳಿಕ ಸಾಕ್ಷಿ ಹೇಳಲೆಂದು ಸಂತ್ರಸ್ತನ ಸಹೋದರ ರತನ್​ಸಿಂಗ್ ಇಟಲಿಯಿಂದ ಬಂದಿದ್ದರು. ಅಪರಾಧಿಗಳ ಪತ್ತೆ ಹಾಗೂ ತನಿಖೆಗೆ ಇದು ಪ್ರಮುಖವಾಗಿತ್ತು.

650 ಪ್ರಕರಣ ದಾಖಲು: 1984ರಲ್ಲಿ ಸಿಖ್ ಹತ್ಯಾಕಾಂಡವಾದಾಗ ಒಟ್ಟು 650 ಪ್ರಕರಣಗಳು ದಾಖಲಾಗಿದ್ದವು. ಕೋರ್ಟ್​ನಲ್ಲಿ ಇನ್ನೂ 7 ಪ್ರಕರಣಗಳ ವಿಚಾರಣೆ ಬಾಕಿಯಿದೆ.