ರಾಷ್ಟ್ರಪತಿ ಗೌರವ ಸ್ವೀಕರಿಸಿದ್ದ ಸಿಬಿಎಸ್​ಇ ಟಾಪರ್​​ ಮೇಲೆ ಸಾಮೂಹಿಕ ಅತ್ಯಾಚಾರ!

ರೇವಾರಿ(ಹರಿಯಾಣ): ಸಿಬಿಎಸ್​ಇಯಲ್ಲಿ ಟಾಪರ್​ ಆಗಿದ್ದ 19 ವರ್ಷದ ಯುವತಿಯನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಹರಿಯಾಣದ ಮಹೇಂದರ್​ಗಡ ಜಿಲ್ಲೆಯ ಕನಿನಾದಲ್ಲಿ ಬುಧವಾರ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಯುವತಿಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಂಪು ಪಾನೀಯದಲ್ಲಿ ಮತ್ತು ಬರುವ ಮಾತ್ರೆಗಳನ್ನು ಬೆರಸಿ ನಂತರ ಅದನ್ನು ಯುವತಿಗೆ ಬಲವಂತವಾಗಿ ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.

ಘಟನೆ ನಡೆದ ಬಳಿಕ ಸಂತ್ರಸ್ತೆಯನ್ನು ಆರೋಪಿಗಳು ಕನಿನಾದ ಬಸ್​ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾರೆ. ನಂತರ ಯುವತಿ ಸ್ಥಳೀಯ ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದರಿಂದ ಝೀರೊ ಎಫ್​ಐಆರ್​ ದಾಖಲಿಸಿಕೊಂಡೆವು. ನಂತರ ಘಟನೆ ನಡೆದ ಸ್ಥಳ ಮಹೇಂದರ್​ಗಡ ಪೊಲೀಸ್​ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಯಿತು. ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮಹಿಳಾ ಪೊಲೀಸ್​ ಪ್ರಕರಣದ ಕುರಿತು ವಿವರ ನೀಡಿದರು.

ವಿದ್ಯಾಭ್ಯಾಸದಲ್ಲಿ ಸದಾ ಮುಂದಿದ್ದ ಈ ಯುವತಿ ಸಿಬಿಎಸ್​ಇಯಲ್ಲಿ ಟಾಪರ್​ ಆದಾಗ ರಾಷ್ಟ್ರಪತಿಗಳು ಸನ್ಮಾನ ಮಾಡಿದ್ದರು.

ಏನಿದು ಝೀರೊ ಎಫ್​ಐಆರ್​?
ಘಟನಾ ಸ್ಥಳ ಅಥವಾ ವ್ಯಾಪ್ತಿಯೆನ್ನದೆ ಯಾವ ಪೊಲೀಸ್​ ಠಾಣೆಯಲ್ಲಾದರೂ ಝೀರೊ ಎಫ್​ಐಆರ್​ ದಾಖಲಿಸಿಕೊಳ್ಳಬಹುದು. ನಂತರ ಸಂಬಂಧಪಟ್ಟ ಪೊಲೀಸ್​ ಠಾಣೆಗೆ ಪ್ರಕರಣವನ್ನು ವರ್ಗಾಯಿಸುವುದಕ್ಕೆ ಝೀರೋ ಎಫ್​ಐಆರ್​ ಎನ್ನಲಾಗುತ್ತದೆ. (ಏಜೆನ್ಸೀಸ್)