ಅಳುವುದನ್ನ ಕೇಳಲಾಗದೆ ಒಂದು ತಿಂಗಳ ಕಂದಮ್ಮನನ್ನೇ ಕೊಂದ ತಾಯಿ

ವಾಷಿಂಗ್ಟನ್​: ಹೆತ್ತ ಮಗುವನ್ನು ಹೇಗೆ ಕೊಲ್ಲುವುದು ಎಂಬುದನ್ನು ಗೂಗಲ್​ನಲ್ಲಿ ಹುಡುಕಾಟ ನಡೆಸಿದ 19 ವರ್ಷದ ತಾಯಿಯೊಬ್ಬಳು ತನ್ನ ಒಂದು ತಿಂಗಳ ಮಗುವನ್ನು ಕೊಂದಿರುವ ಘಟನೆ ವಾಷಿಂಗ್ಟನ್​ ಪೋಸ್ಟ್​ನ ಲಿಂಡ್ಸೆ ಬೆವರ್ನಲ್ಲಿ ನಡೆದಿದೆ.

ಈ ಕುರಿತು ಫಾಲ್​ವೆಲ್​ ಎಂಬ ಯುವತಿ, ‘ಬೇಗ ಸಾಯಿಸುವುದು ಹೇಗೆ?’, ‘ಮಗುವನ್ನು ನೀರಿನಲ್ಲಿ ಮುಳುಗಿಸಿ ಸಾಯಿಸುವುದಕ್ಕೆ ಎಷ್ಟು ಸಮಯ ಬೇಕು?’, ‘ಮಗುವನ್ನು ಕೊಲ್ಲುವ ಐದು ಬಗೆಯ ಪಾಲಕರು’, ‘ಪಾಲಕರು ಮಗುವನ್ನು ಕೊಲ್ಲುವುದಕ್ಕೆ ಕಾರಣವೇನು?’ ಎಂಬೆಲ್ಲ ವಿಷಯಗಳ ಬಗ್ಗೆ ಗೂಗಲ್​ನಲ್ಲಿ ಹುಡುಕಾಟ ನಡೆಸಿದ್ದಾಳೆ.

ಮಗುವನ್ನು ಬಾತ್​ಟಬ್​ನಲ್ಲಿ ಮುಳುಗಿಸಿ ಕೊಂದ ನಂತರ ಪೊಲೀಸರಿಗೆ ಕರೆ ಮಾಡಿ ನನ್ನ ಮಗುವನ್ನು ಯಾರೋ ಅಪಹರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾಳೆ. ಆದರೆ ತನಿಖೆ ವೇಳೆ ಈಕೆಯ ಬಣ್ಣ ಬಯಲಾಗಿದ್ದು, ಫಾಲ್​ವೆಲ್​ ಮನೆಯಲ್ಲಿನ ಡಫೆಲ್​ ಬ್ಯಾಗ್​ವೊಂದರಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.

ಈ ಕುರಿತು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, “ತನ್ನ ಮಗು ಅಳುವುದನ್ನು ಕೇಳಿಸಿಕೊಳ್ಳಲಾಗದೆ ಅವನನ್ನು ಕೊಂದಿರುವುದಾಗಿ ಫಾಲ್​ವೆಲ್​ ವಿಚಾರಣೆ ವೇಳೆ ಹೇಳಿಕೊಂಡಿದ್ದಾಳೆ. ಆಕೆಯನ್ನು ಬಂಧಿಸಿ ಮಗುವನ್ನು ಕೊಂದ ಆರೋಪದ ಮೇಲೆ ದೂರು ದಾಖಲಿಸಿಕೊಂಡಿದ್ದೇವೆ” ಎಂದರು.

ಮೃತ ರೈನರ್​ ಸದಾ ನಗುಮೊಗದಿಂದ ಶಾಂತವಾಗಿರುತ್ತಿದ್ದ. ನಾನು ಕೂಡ ಆತನ ಜತೆ ರಾತ್ರಿ ವೇಳೆ ಸಮಯ ಕಳೆದಿದ್ದೇನೆ. ನನ್ನ ಜತೆಗಿದ್ದಾಗ ಆತ ಚೆನ್ನಾಗಿಯೇ ಇದ್ದ. ಅವನಿಂದ ನನಗೆ ಯಾವುದೇ ಕಿರಿಕಿರಿ ಆಗುತ್ತಿರಲಿಲ್ಲ. ನನ್ನ ಮಗುವನ್ನು ಕೊಂದಿರುವ ಆಕೆಗೆ ಕಠಿಣ ಶಿಕ್ಷೆ ನೀಡಿ. ಏನೂ ಅರಿಯದ ಕಂದಮ್ಮನನ್ನು ಕೊಂದ ಪಾಪಪ್ರಜ್ಞೆ ಅವಳಿಗೆ ತಿಳಿಯಬೇಕು ಎಂದು ಮೃತ ಮಗುವಿನ ತಂದೆ ಎರಿಕ್​ ನ್ಯಾಯಾಲಯದ ಎದುರು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)