ಬೆಂಗಳೂರು: ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ನಡೆದ ದಾಳಿ ಪ್ರಕರಣ ರದ್ದುಗೊಳಿಸುವ ರಾಜ್ಯ ಸರ್ಕಾರದ ನಿರ್ಣಯ ಹೊತ್ತಿ ಉರಿಯುತ್ತಿದೆ. ಬಿಜೆಪಿ ಇದನ್ನೇ ಅಸವನ್ನಾಗಿಸಿಕೊಂಡು ಹೋರಾಟಕ್ಕಿಳಿದಿದೆ. ಇದಕ್ಕೆ ತಿರುಗೇಟು ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿಯವರು ಸತ್ಯ ಹರಿಶ್ಚಂದ್ರರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಅವರ ಅಧಿಕಾರವಧಿಯಲ್ಲಿ ಕೋಮು ದ್ವೇಷದ 182 ಪ್ರರಕಣ ವಾಪಸ್ ಪಡೆದಿದ್ದಾರೆ ಎಂದು ತಿರುಗೇಟು ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು 385 ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದರು. ಇದರಲ್ಲಿ 182 ಪ್ರಕರಣಗಳು ಕೋಮು ದ್ವೇಷ ಸೇರಿದಂತೆ ಅನೈತಿಕ ಪೊಲೀಸ್ ಗಿರಿ, ಪಬ್ ದಾಳಿ ಸೇರಿದಂತೆ ಈ ರೀತಿಯ ಪ್ರಕರಣಗಳನ್ನು ವಾಪಸ್ ಪಡೆದಿದ್ದಾರೆ. ಇದರಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಆರೋಪಿಗಳ ಮೇಲಿನ ಪ್ರಕರಣಗಳು ಇಲ್ಲವಾಗಿದೆ. 2022 ರಲ್ಲಿ 62 ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗುತ್ತದೆ. ಸಿ.ಟಿ.ರವಿ, ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ, ಹಾಲಪ್ಪ ಆಚಾರ್, ಸುಮಲತಾ ಅಂಬರೀಶ್, ಜೆ.ಸಿ.ಮಾಧುಸ್ವಾಮಿ ಅವರು ಇದರ ಫಲಾನುಭವಿಗಳು ಎಂದು ಟಾಂಗ್ ಕೊಟ್ಟರು.
ಕೇಸ್ ವಾಪಸ್ ಪಡೆದಿದ್ದು ಬಿಜೆಪಿ
ಶ್ರೀರಾಮ ಸೇನೆ, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಸದಸ್ಯರೇ ಇದರ ಲಾಭ ಪಡೆದಿದ್ದಾರೆ. 2018-20 ರ ಸಾಲಿನಲ್ಲಿ 127 ಕೇಸ್‌ಗಳನ್ನು ಬಿಜೆಪಿ ಹಿಂದಕ್ಕೆ ಪಡೆದಿದೆ. ಇದರ ಫಲಾನುಭವಿಗಳು ಪಿಎ್ಐ, ಎಸ್‌ಡಿಪಿಐ ಅವರ ಮೇಲಿದ್ದ ಕೇಸ್ ಗಳನ್ನೂ ಹಿಂದಕ್ಕೆ ಪಡೆಯಲಾಗಿದೆ.
ನಾನು ಗೃಹ ಸಚಿವ ಆಗಿದ್ದಾಗ ನಡೆದ ಪರೇಸ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಏನೇನೋ ಮಾಡಿದರು. ನಂತರ ಎನ್‌ಐಎ ತನಿಖಾ ತಂಡ ಆತನ ಸಾವನ್ನು ಆಕಸ್ಮಿಕ ಎಂದು ಹೇಳಿತು ಎಂದರು.
ಹೆಣದ ಮೇಲಿನ ರಾಜಕೀಯ ಪುಸ್ತಕ ಮರುಮುದ್ರಣ
ಬಿಜೆಪಿಯವರು ಹೆಣ ಬಿದ್ದರೆ ಸಾಕು ರಣಹದ್ದುಗಳಂತೆ ಕಾಯುತ್ತಿರುತ್ತಾರೆ. ಬಿಜೆಪಿಯವರ ಹೆಣದ ಮೇಲಿನ ರಾಜಕೀಯದ ಬಗ್ಗೆ ಪುಸ್ತಕವಿದ್ದು ಅದನ್ನು ಮತ್ತೊಮ್ಮೆ ಮುದ್ರಿಸಲಾಗುವುದು ಎಂದು ಹೇಳಿದರು.
ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ ಕಲಂ 321 ರ ಅಡಿ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಎ್ ಐಆರ್ ದಾಖಲಾಗಿದ್ದರೂ ವಾಪಸ್ ಪಡೆಯುವ ಅಧಿಕಾರ ದೇಶದ ಎಲ್ಲ ರಾಜ್ಯ ಸರ್ಕಾರಗಳಿಗಿದೆ. ಗೃಹ ಇಲಾಖೆಗೆ ಕೇಸಿಗೆ ಸಂಬಂಧಪಟ್ಟವರು ವಾಪಸ್ ಪಡೆಯಬೇಕು ಎಂದು ಮನವಿ ಸಲ್ಲಿಸಿರುತ್ತಾರೆ. ಇದರ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅನೇಕ ಬಾರಿ ದುರುದ್ದೇಶಪೂರಿತವಾಗಿ ಕೇಸ್ ದಾಖಲಿಸಲಾಗಿರುತ್ತದೆ. ರೈತ ಪರ, ಭಾಷೆ, ಜಲವಿವಾದ ಸೇರಿದಂತೆ ಅನೇಕ ಸಂಘಟನೆಗಳು ಹೋರಾಟ ನಡೆಸಿರುತ್ತವೆ ಅವುಗಳನ್ನು ಮರುಪರಿಶೀಲಿಸಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡರು.
ಸುಳ್ಳು ಹೇಳುವವರೇ ಬಿಜೆಪಿ ವಕ್ತಾರರು
ಬಿಜೆಪಿಯಲ್ಲಿ ಸುಳ್ಳು ಹೇಳುವವರನ್ನೇ ವಕ್ತಾರನ್ನಾಗಿ ಮಾಡಿಕೊಂಡಿದ್ದಾರೆ. ಬಿಜೆಪಿಯವರ ಸುಳ್ಳುಗಳನ್ನು ಜನರು ನಂಬಬಾರದು ಎಂದು ಸತ್ಯವನ್ನು ತಿಳಿಸುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸಾರ್ವಜನಿಕ ಹಿತಾಸಕ್ತಿ ಗಮನಿಸಿ ವಾಪಸ್
ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮಾತನಾಡಿ, ಹಳೇ ಹುಬ್ಬಳಿ ಗಲಭೆ ಪ್ರಕರಣ ಹಿಂಪಡೆಯಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ಡಿ.ಬಿ.ಛಲವಾದಿ ಅವರು ರಾಜ್ಯ ಸರ್ಕಾರಕ್ಕೆ ಮನವಿ ಕೊಟ್ಟ ಆಧಾರದ ಮೇಲೆ ಅದನ್ನು ಗೃಹ ಇಲಾಖೆಗೆ ಕಳುಹಿಸಲಾಗಿತ್ತು. ಅವರು ಉಪ ಸಮಿತಿಗೆ ಕಳುಹಿಸಿದ್ದರು. ಈ ಸಮಿತಿಯ ವರದಿ ಅಧಾರದ ಮೇಲೆ ಪ್ರಕರಣ ಹಿಂಪಡೆಯಲಾಗಿದೆ. ಸಿಆರ್‌ಪಿಸಿ ಕಲಂ 321 ರಲ್ಲಿ ಸಾರ್ವಜನಿಕ ಹಿತಾಸಕ್ತಿ ಗಮನಿಸಿ ಕೇಸ್ ವಾಪಸ್ ಪಡೆಯಲು ಅವಕಾಶವಿದೆ ಎಂದರು.
ಬಿಜೆಪಿ ಜನರನ್ನು ದಿಕ್ಕು ತಪ್ಪಿಸುತ್ತಿದೆ
ಕೋಮುದ್ವೇಷ ಹರಡುವಿಕೆ, ದ್ವೇಷ ಭಾಷಣ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುವಂತಹ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವುದು ಬಿಜೆಪಿ. ಸೆಪ್ಟೆಂಬರ್ 2022 ರಲ್ಲಿ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿ ಅವರು, ಕೇಸ್ ವಾಪಸ್ ಪಡೆಯುವುದು ಎಲ್ಲ ಸರ್ಕಾರಗಳು ಮಾಡುವ ಕೆಲಸ ಎಂದಿದ್ದರು. ರಾಜಕೀಯ ಕಾರಣಕ್ಕೆ ಹುಬ್ಬಳ್ಳಿ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಜೋಶಿ ಹತಾಶ ಹೇಳಿಕೆ:
ಸುಳ್ಳಿನ ಸರಮಾಲೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯೂ ಸಹ ಸೇರಿಕೊಂಡು ಹತಾಶೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ರಮೇಶ್‌ಬಾಬು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ನಾರಾಯಣ ಸ್ವಾಮಿ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಎಸ್.ಮನೋಹರ್ ಉಪಸ್ಥಿತರಿದ್ದರು.