ಕಾಣೆಯಾಗಿ 18 ವರ್ಷಗಳ ಬಳಿಕ ಫ್ರೀಜರ್​ನಲ್ಲಿ ಮಹಿಳೆಯ ಶವ ಪತ್ತೆ

ಝಾಗ್ರೇಬ್​: ಕ್ರೊವೇಷಿಯಾದ ಮಹಿಳೆ ಕ್ರೂಸ್​ ಹಡಗಿನಲ್ಲಿ ಉದ್ಯೋಗ ಮಾಡಿಕೊಂಡು, ಪ್ಯಾರಿಸ್​ನಲ್ಲಿ ಬದುಕು ಕಟ್ಟಿಕೊಳ್ಳುವುದಾಗಿ ಹೇಳಿ 2000ನೇ ಸಾಲಿನಲ್ಲಿ ಮನೆಯಿಂದ ಹೊರಟಿದ್ದಳು. ಆದರೆ, ವರ್ಷಗಳು ಉರುಳಿದರೂ ಆಕೆಯಿಂದ ಯಾವುದೇ ಮಾಹಿತಿ ಬಂದಿರಲಿಲ್ಲ. ಇದರಿಂದ ಬೇಸತ್ತ ಮನೆಯವರು 2005ರಲ್ಲಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿ ಸುಮ್ಮನಾಗಿದ್ದರು.

ಆದರೆ, 18 ವರ್ಷಗಳ ಬಳಿಕ ಮಹಿಳೆಯೊಬ್ಬರ ಮನೆಯಲ್ಲಿದ್ದ ಫ್ರೀಜರ್​ನಲ್ಲಿ ಆ ಮಹಿಳೆ ಶವವಾಗಿ ಪತ್ತೆಯಾಗಿದ್ದಾಳೆ! ಜಾಸ್ಮಿನ್​ ಡಾಮ್ನಿಕ್​ ಶವವಾಗಿ ಪತ್ತೆಯಾದಾಕೆ. 2000ದಲ್ಲಿ ತನ್ನ 23ನೇ ವಯಸ್ಸಿನಲ್ಲಿ ಜಾಸ್ಮಿನ್​ ಝಾಗ್ರೇಬ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದರೆ ಇದ್ದಕಿದ್ದಂತೆ ಪ್ಯಾರಿಸ್​ನಲ್ಲಿ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿ ಅಲ್ಲಿಗೆ ತೆರಳುತ್ತಿರುವುದಾಗಿ ತಂದೆಗೆ ತಿಳಿಸಿದ್ದಳು. ನಂತರದಲ್ಲಿ ಜಾಸ್ಮಿನ್​ ಜೀವಂತವಾಗಿರುವ ಬಗ್ಗೆ ಅವರ ಕುಟುಂಬದವರಿಗೆ ಮಾಹಿತಿಯೇ ಇರಲಿಲ್ಲ.

ಇವತ್ತು, ನಾಳೆ ಬರಬಹುದೆಂದು 5 ವರ್ಷ ಕಾದು, ಕೊನೆಗೆ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಜಾಸ್ಮಿನ್​ ತಂದೆ ಕಾಣೆಯಾಗಿರುವ ದೂರು ದಾಖಲಿಸಿದ್ದರು. 2011ರಲ್ಲಿ ಅವರು ಮೃತಪಟ್ಟಿದ್ದರು. ಆದರೆ ಈಗ ಜಾಸ್ಮಿನ್​ ಸಹೋದರಿ ಎನ್ನಲಾದ 45 ವರ್ಷದ ಮಲಾ ಸ್ಯುಬೋಟಿಕಾ ಎಂಬಾಕೆಗೆ ಸೇರಿದ ಮನೆಯಲ್ಲಿದ್ದ ಫ್ರೀಜರ್​ನಲ್ಲಿ ಜಾಸ್ಮಿನ್​ ಶವ ಪತ್ತೆಯಾಗಿದೆ. ಈಕೆ ಕೊಲೆಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಜತೆಗೆ ಮಲಾ ಸ್ಯುಬೋಟಿಕಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. (ಏಜೆನ್ಸೀಸ್​)