ಮಳಿಗೆಯಿಂದ 18 ಟಿ.ವಿ, ನಗದು ಕಳವು

ಬೆಳ್ಮಣ್:  ನಂದಳಿಕೆ ಕ್ರಾಸ್ ಬಳಿಯ ಗುಡ್‌ವಿಲ್ ಎಂಟರ್‌ಪ್ರೈಸಸ್ ಮಳಿಗೆ ಶಟರ್ ಮುರಿದು ಒಳನುಗ್ಗಿದ ಕಳ್ಳರು ಸೋಮವಾರ ತಡರಾತ್ರಿ ಸುಮಾರು 18 ಟಿ.ವಿ ಹಾಗೂ 3 ಸಾವಿರ ರೂ. ನಗದು ದೋಚಿದ್ದಾರೆ.
ಶ್ರೀಧರ್ ಎಂಬುವರ ಮಾಲೀಕತ್ವದ ಈ ಅಂಗಡಿಯ ಮೇಲಿನ ಮಹಡಿಯಲ್ಲೇ ಅವರ ಮನೆಯಿದ್ದರೂ, ಕಳ್ಳತನ ಮಾಹಿತಿ ಬೆಳಗ್ಗೆಯಷ್ಟೇ ಅರಿವಿಗೆ ಬಂದಿದೆ.

ಕ್ಯಾಮರಾ ತಿರುಗಿಸಿ ಹಾರ್ಡ್ ಡಿಸ್ಕ್ ಕದ್ದೊಯ್ದರು: ಘಟನೆ ಬೆಳಗ್ಗಿನ ಜಾವ ಸುಮಾರು 3-4 ಗಂಟೆ ಹೊತ್ತಿಗೆ ನಡೆದಿದೆ ಎನ್ನಲಾಗಿದ್ದು, ಅಂಗಡಿ ಹೊರಗೆ ಹಾಗೂ ಒಳಗೆ ಅಳವಡಿಸಿದ್ದ ಸಿಸಿ ಕ್ಯಾಮರಾ ಪಾಯಿಂಟ್‌ಗಳನ್ನು ಕಳ್ಳರು ತಿರುಗಿಸಿದ್ದಾರೆ. ಅಲ್ಲದೆ ಅಂಗಡಿ ಒಳಗಿದ್ದ ಸಿಸಿ ಕ್ಯಾಮರಾ ಹಾರ್ಡ್ ಡಿಸ್ಕ್ ಕದ್ದೊಯ್ದಿದ್ದಾರೆ. ಅಂಗಡಿ ಮೇಲಿನ ಮಹಡಿಯಲ್ಲಿ ನಂದಳಿಕೆ ಗ್ರಾಮ ಪಂಚಾಯಿತಿ ಆಡಳಿತ ಕಚೇರಿಯಿದ್ದು, ಅದರ ಸಿಸಿ ಕ್ಯಾಮರಾಗೆ ಪಂಚಾಯಿತಿ ಬೋರ್ಡ್ ಅಡ್ಡವಾಗಿರುವುದು ಕಳ್ಳರಿಗೆ ಅನುಕೂಲವಾಗಿದೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಎಸ್‌ಪಿ ಕೃಷ್ಣಕಾಂತ್, ವೃತ್ತ ನಿರೀಕ್ಷಕ ಹಾಲಮೂರ್ತಿ, ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ನಾಸಿರ್ ಹುಸೇನ್, ಉಡುಪಿ ಡಿಸಿಐಬಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ.