18ರಿಂದ ರಾಜ್ಯಮಟ್ಟದ ಮುಕ್ತ ಅಂಧರ ಕ್ರಿಕೆಟ್

ಬೆಳಗಾವಿ: ಜ.18ರಿಂದ 20ರವರೆಗೆ ನಗರದಲ್ಲಿ ನಾಲ್ಕನೇ ಅಂಧರ ರಾಜ್ಯಮಟ್ಟದ ಮುಕ್ತ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ ಎಂದು ಸಮರ್ಥನಂ ಅಂಗವಿಕಲರ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಅರುಣಕುಮಾರ ಜಿ. ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯ ಉದ್ಘಾಟನೆ ಪಂದ್ಯ ನಗರದ ಸರ್ದಾರ್ ಮೈದಾನದಲ್ಲಿ ಜ.18ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ. ಪೊಲೀಸ್ ಪರೇಡ್ ಮೈದಾನ ಸೇರಿ ಒಟ್ಟು ನಾಲ್ಕು ಮೈದಾನಗಳಲ್ಲಿ 44 ಪಂದ್ಯಗಳು ಜರುಗಲಿವೆ ಎಂದರು.

ಈಗಾಲೇ 20ಕ್ಕೂ ಅಧಿಕ ತಂಡಗಳು ಹೆಸರು ನೋಂದಾಯಿಸಿದ್ದು, ಪ್ರತಿ ತಂಡಕ್ಕೆ ಉಳಿದುಕೊಳ್ಳಲು ವ್ಯವಸ್ಥೆ ಹಾಗೂ ಊಟೋಪಚಾರದ ಜತೆಗೆ ಅಗತ್ಯ ವಸ್ತುಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ತಂಡಕ್ಕೆ ಸುಮಾರು 50 ಸಾವಿರ ರೂ.ಖರ್ಚಾಗಲಿದೆ ಎಂದು ಅಂದಾಜಿಸಲಾಗಿದ್ದು, ನಗರದಲ್ಲಿನ ಪಂಚಾಮೃತ, ನಿಯಾಜ್ ಹಾಗೂ ಉದಯಭವನ ಸೇರಿ ಹಲವು ಹೋಟೆಲ್‌ನವರು ಎಲ್ಲ ಆಟಗಾರಿಗೆ ಒಂದು ಹೊತ್ತಿನ ಊಟ ನೀಡಲು ಮುಂದೆ ಬಂದಿದ್ದಾರೆ ಎಂದರು.

ಇಡೀ ಪಂದ್ಯಾವಳಿ ಜರುಗಲು ಸುಮಾರು 10 ಲಕ್ಷ ರೂ.ಖರ್ಚಾಗಲಿದೆ. ಇನ್ನಿತರ ಸಂಘ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಕೈಲಾದ ಮಟ್ಟಿಗೆ ಧನ ಸಹಾಯ ಮಾಡಿದರೆ ಅಂಧ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.

ಸಮರ್ಥನಂ ಸಂಸ್ಥೆಯ ವ್ಯವಸ್ಥಾಪಕರನ್ನು ದೂರವಾಣಿ 0831-2445153 ಅಥವಾ 9480809598 ಮೂಲಕ ಸಂಪರ್ಕಿಸುವಂತೆ ಮನವಿ ಮಾಡಿದರು. ಬಸಪ್ಪ ಗುಡ್ಡಗೋಳ ಹಾಗೂ ಪ್ರಾದೇಶಿಕ ವ್ಯವಸ್ಥಾಪಕ ರೇವಣಸಿದ್ದಯ್ಯ ಸಾಲಿಮಠ ಇದ್ದರು.