ಬೆಂಗಳೂರು: 2025 ರ ವೇಳೆಗೆ ಸುಮಾರು 30 ಕಿಮೀ ಹಾಗೂ 2026 ರ ವೇಳೆಗೆ 175 ಕಿಮೀ ನೂತನ ಮೆಟ್ರೋ ಮಾರ್ಗಗಳನ್ನು ಸಾರ್ವಜನಿಕರ ಸೇವೆಗೆ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು.
ಮೆಟ್ರೋ ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ತುಮಕೂರು ರಸ್ತೆಯ ಮಾದಾವರ ( ಬೆಂಗಳೂರು ಅಂತರರಾಷ್ಟ್ರೀಯ ಮತ್ತು ಪ್ರದರ್ಶನ ಕೇಂದ್ರ)ದ ತನಕ ವಿಸ್ತರಣೆ ಮಾಡಿರುವ ನೂತನ ಮಾರ್ಗದಲ್ಲಿ ಪ್ರಾಯೋಗಿಕ ಮೆಟ್ರೋ ರೈಲು ಸಂಚಾರವನ್ನು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಬುಧವಾರ(ನ.06) ಪರಿಶೀಲನೆ ಮಾಡಿ ಮಾತನಾಡಿದರು.
ಈಗಾಗಲೇ 1,130 ಕೋಟಿ ರೂ. ವೆಚ್ಚದಲ್ಲಿ 21 ಹೊಸ ರೈಲುಗಳಿಗೆ ಹರಾಜು ಪ್ರಕ್ರಿಯೆ ನಡೆಸಿ ಹಣ ಕಟ್ಟಲಾಗಿದೆ. ಹೊಸ ರೈಲುಗಳು ಆದಷ್ಟು ಬೇಗ ಸೇವೆಗೆ ಲಭ್ಯವಾಗಲಿವೆ. ಮೆಟ್ರೋ ಮಾರ್ಗದ ಒಂದು ಹಾಗೂ ಎರಡನೇ ಹಂತಗಳನ್ನು ನಾವು ಪೂರ್ಣಗೊಳಿಸಿದ್ದು, ಮೂರನೇ ಹಂತಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದರು.
ಪಾದಚಾರಿ ಮೇಲ್ಸೇತುವೆ ನಿರ್ಮಾಣ
ಮಂಜುನಾಥ ನಗರ ನಿಲ್ದಾಣದಲ್ಲಿ ರಸ್ತೆ ದಾಟಲು ಪಾದಚಾರಿ ಮೇಲ್ಸೆತುವೆ ಅನುಕೂಲ ಮಾಡಿಕೊಡಲಾಗುತ್ತಿದೆ. ಯಶವಂತಪುರ ನಿಲ್ದಾಣದಲ್ಲಿ ಸಾರ್ವಜನಿಕರು ಯಾವುದೇ ಅಡಚಣೆಯಿಲ್ಲದೆ ಸಂಚರಿಸಲು ಭಾರತೀಯ ರೈಲ್ವೇ ಹಾಗೂ ನಮ್ಮ ಮೆಟ್ರೋ ಸಂಸ್ಥೆ ಪಾದಚಾರಿ ಮೇಲ್ಸೆತುವೆ ಸೇರಿದಂತೆ ಇತರೇ ಅನುಕೂಲಗಳನ್ನು ಮಾಡಲು ಜಂಟಿಯಾಗಿ ಒಪ್ಪಂದ ಮಾಡಿಕೊಂಡಿವೆ ಎಂದ ಅವರು, ಚಿಕ್ಕಬಿದರಕಲ್ಲು ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ ಸಂಸ್ಥೆಯೊಟ್ಟಿಗೆ ಸೇರಿ ಅಂಡರ್ ಪಾಸ್ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಮಾದಾವರ ಮೆಟ್ರೋ ನಿಲ್ದಾಣದ ಬಳಿಯೂ ಅಂಡರ್ ಪಾಸ್ ನಿರ್ಮಾಣಕ್ಕಾಗಿ ಎನ್ಎಚ್ ಸಂಸ್ಥೆಯವರ ಬಳಿ ಮಾತುಕತೆ ನಡೆಸಲಾಗುತ್ತಿದೆ ಎಂದರು.
ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬರುವವರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ವಾಹನ ನಿಲುಗಡೆ ಮಾಡಿ ಸಂಚಾರ ದಟ್ಟಣೆ ರಹಿತವಾಗಿ ನಗರ ಪ್ರದಕ್ಷಿಣೆ ಮಾಡಬಹುದು ಹಾಗೂ ಅವರ ಕೆಲಸಗಳನ್ನು ತ್ವರಿತವಾಗಿ ಮುಗಿಸಿಕೊಳ್ಳಬಹುದು ಎಂದು ಹೇಳಿದರು.
ಶೀಘ್ರ ಅಧಿಕೃತ ಉದ್ಘಾಟನೆ
“ನಾಗಸಂದ್ರದಿಂದ ಮೂರು ಕಿಮೀ ದೂರವಿರುವ ಮಾದಾವರದ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ವರೆಗೆ ವಿಸ್ತರಿತ ನೂತನ ಮಾರ್ಗವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಾಯೋಗಿಕವಾಗಿ ಉದ್ಘಾಟನೆ ಮಾಡಲಾಗಿದೆ. ನಾನು ಈ ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ ಈ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಯೋಜನೆಗೆ ಒಪ್ಪಿಗೆ ನೀಡಿದ್ದೆ. ಮುಂದಿನ ದಿನಗಳಲ್ಲಿ ಎಲ್ಲ ಸಂಸದರು ಹಾಗೂ ಇತರೇ ಜನಪ್ರತಿನಿಧಿಗಳನ್ನು ಆಹ್ವಾನಿಸಿ ವಿಸ್ತರಿತ ಮೆಟ್ರೋ ಮಾರ್ಗವನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರಸ್ತುತ ಮೆಟ್ರೋ ಹಸಿರು ಮಾರ್ಗವು 33.46 ಕಿಮೀ ಉದ್ದವಿದೆ. ನೇರಳೆ ಮಾರ್ಗ 40.5 ಕಿಮೀ ಉದ್ದವಿದೆ. ಈ ಮಹತ್ತರವಾದ ಕಾರ್ಯ ಸಾಕಾರಗೊಳ್ಳಲು ಸಹಕಾರ ನೀಡಿದ ಕೇಂದ್ರ ಸರ್ಕಾರಕ್ಕೆ ಹಾಗೂ ಕೈ ಜೋಡಿಸಿದ ಎಲ್ಲರಿಗೂ ಹಾಗೂ ವಿಶೇಷವಾಗಿ ಬೆಂಗಳೂರಿನ ಜನತೆಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.
ದೆಹಲಿ, ಮುಂಬೈ ಸೇರಿದಂತೆ ದೇಶದ ಇತರೆಡೆಗಳಲ್ಲಿ ಇರುವ ಮೆಟ್ರೋಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗಿಂತ ಬೆಂಗಳೂರಿನಲ್ಲಿರುವ 76.95 ಕಿಮೀ ಉದ್ದದ ಮೆಟ್ರೋ ಮಾರ್ಗದಲ್ಲಿ ಹೆಚ್ಚು ಪ್ರಯಾಣಿಕರು ಪ್ರತಿನಿತ್ಯ ಸಂಚರಿಸುತ್ತಿದ್ದಾರೆ. ನಮ್ಮ ಮೆಟ್ರೋಯಿಂದ ಬೆಂಗಳೂರಿನ ನಾಗರಿಕರಿಗೆ ಉತ್ತಮ ಸೇವೆ ದೊರೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಹೇಳಿದರು.