ಅವಳಿನಗರದಲ್ಲಿ 17 ಸಾವಿರ ಅಕ್ರಮ ಪ್ಲಾಟ್

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸುಮಾರು 1400 ಎಕರೆ ಪ್ರದೇಶದಲ್ಲಿ 17 ಸಾವಿರ ಅಕ್ರಮ ಪ್ಲಾಟ್​ಗಳು ನಿರ್ವಣವಾಗಿವೆ! ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೇ ಇಂಥಹದ್ದೊಂದು ಆರೋಪ ಮಾಡಿದ್ದಾರೆ.

ಈ ಅನಧಿಕೃತ ಪ್ಲಾಟ್​ಗಳ ವಿರುದ್ಧ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಲಿಂಗರಾಜ ಪಾಟೀಲ, ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ನಾನು ಪ್ರಾಧಿಕಾರದ ಅಧ್ಯಕ್ಷನಾಗಿದ್ದ ವೇಳೆ ಹೆಸ್ಕಾಂ, ಪಾಲಿಕೆ, ಕಂದಾಯ ಇಲಾಖೆ ಹಾಗೂ ಪ್ರಾಧಿಕಾರದ ಅಧಿಕಾರಿಗಳನ್ನೊಳಗೊಂಡ ಟಾಸ್ಕ್ ಫೋರ್ಸ್ ಸಮಿತಿ ರಚಿಸಿ ಅಕ್ರಮ ಪ್ಲಾಟ್, ನಿವೇಶನಗಳ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಿದ್ದೆವು. ಪ್ರಸ್ತುತ ಟಾಸ್ಕ್ ಫೋರ್ಸ್ ಸಮಿತಿ ರಚನೆಯಾಗಿಲ್ಲ. ಹೀಗಾಗಿ ಅಧಿಕಾರಿಗಳ ಸಮನ್ವಯದ ಕೊರತೆಯಿಂದಾಗಿ ಹೂಗಾರ್ ಪ್ಲಾಟ್​ನಂತಹ ಅಕ್ರಮ ಪ್ಲಾಟ್​ಗಳು ತಲೆ ಎತ್ತುತ್ತಿವೆ ಎಂದರು.

ಒಂದು ವರ್ಷವಾದರೂ ಪ್ರಾಧಿಕಾರಕ್ಕೆ ಅಧ್ಯಕ್ಷರ ನೇಮಕವಾಗಿಲ್ಲ. ಜಿಲ್ಲಾಧಿಕಾರಿಯೇ ಅಧ್ಯಕ್ಷರಾಗಿರುತ್ತಾರೆ. ಆದರೆ, ಈಗಿನ ಜಿಲ್ಲಾಧಿಕಾರಿ ತಿಂಗಳಿಗೊಮ್ಮೆಯೂ ಸಭೆ ನಡೆಸುತ್ತಿಲ್ಲ. ಟಾಸ್ಕ್ ಪೋರ್ಸ್ ರಚಿಸುತ್ತಿಲ್ಲ ಎಂದು ಆರೋಪಿಸಿದರು.

17 ಸಾವಿರ ಅನಧಿಕೃತ ಪ್ಲಾಟ್​ಗಳಲ್ಲಿ 9 ಸಾವಿರ ಮನೆಗಳು ನಿರ್ವಣವಾಗಿವೆ. ಇನ್ನು ಮುಂದೆಯಾದರೂ ಜಿಲ್ಲಾಧಿಕಾರಿ ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ಮುಗ್ಧ ಜನರಿಗಾಗುವ ಅನ್ಯಾಯ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಹು-ಧಾ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ, ವೀರೇಶ ಸಂಗಳದ ಉಪಸ್ಥಿತರಿದ್ದರು.

ನಾನು ಅಧ್ಯಕ್ಷನಾಗಿದ್ದ ವೇಳೆ ಅಕ್ರಮ ಪ್ಲಾಟ್ ಕಂಡುಬಂದಲ್ಲಿ ಲೇಔಟ್​ಗೆ ಹೋಗಿ ಕಲ್ಲುಗಳನ್ನು ಕಿತ್ತು ಕ್ರಮ ಕೈಗೊಳ್ಳುತ್ತಿದ್ದೆವು. ಈಗ ಅವಳಿನಗರದಲ್ಲಿರುವ ಅನಧಿಕೃತ ಪ್ಲಾಟ್​ಗಳ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದೆ. ಆದರೂ ಕ್ರಮ ಜರುಗಿಸುತ್ತಿಲ್ಲ. ಹುಬ್ಬಳಿಯ ಬೆಂಗೇರಿ, ಗೋಪನಕೊಪ್ಪ, ನೇಕಾರನಗರ, ಹಳೇ ಹುಬ್ಬಳ್ಳಿ ಭಾಗ, ಅಮರಗೋಳ ಹಾಗೂ ಧಾರವಾಡದಲ್ಲಿ ಸವದತ್ತಿ ರಸ್ತೆ, ಅತ್ತಿಕೊಳ್ಳ ಇತರೆಡೆ ಅನಧಿಕೃತ ಪ್ಲಾಟ್​ಗಳು ನಿರ್ವಣವಾಗಿವೆ. ಜಿಲ್ಲಾಡಳಿತ ಕ್ರಮ ಕೈಗೊಂಡು ಜನರಿಗೆ ಆಗುವ ಅನ್ಯಾಯ ತಡೆಗಟ್ಟಲಿ. ಅಕ್ರಮ- ಸಕ್ರಮ ಯೋಜನೆ ಆದಷ್ಟು ಬೇಗ ಜಾರಿಗೊಳಿಸಲಿ.

– ಲಿಂಗರಾಜ ಪಾಟೀಲ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

ಅನಧಿಕೃತವಾಗಿದ್ದ ಹೂಗಾರ್ ಪ್ಲಾಟ್​ಗಳನ್ನು ಪಾಲಿಕೆ ಮಾಜಿ ಸದಸ್ಯ ಹೂವಪ್ಪ ದಾಯಗೋಡಿ ಅವರು ಮಾರಾಟ ಮಾಡಿದ್ದರು ಎಂದು ತಿಳಿದು ಬಂದಿದೆ. ಆದರೆ, ಹೂವಪ್ಪ ಬಿಜೆಪಿ ಸೇರಿಲ್ಲ. ಬಿಜೆಪಿ ಸದಸ್ಯತ್ವವನ್ನೂ ಹೊಂದಿಲ್ಲ. ಬಿಜೆಪಿ ಸದಸ್ಯರು ಯಾರೇ ಇಂತಹ ಅಕ್ರಮದಲ್ಲಿ ತೊಡಗಿದ್ದು ಕಂಡು ಬಂದರೆ ಅಂಥವರಿಗೆ ಮುಂದೆ ಬರುವ ಪಾಲಿಕೆ ಚುನಾವಣೆಯ ಟಿಕೆಟ್ ನೀಡುವುದಿಲ್ಲ.

– ನಾಗೇಶ ಕಲಬುರ್ಗಿ, ಹುಧಾ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ

Leave a Reply

Your email address will not be published. Required fields are marked *