ದೆಹಲಿ ಹೋಟೆಲ್​ ಅಗ್ನಿ ಅವಘಡದಲ್ಲಿ ಮೃತಪಟ್ಟರ ಸಂಖ್ಯೆ 17ಕ್ಕೆ ಏರಿಕೆ: ಪ್ರಧಾನಿ ಸಂತಾಪ

ನವದೆಹಲಿ: ರಾಷ್ಟ್ರ ರಾಜಧಾನಿಯ ಹೋಟೆಲ್ ಒಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಯಾಗಿದ್ದು, 35 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕರೋಲ್​ ಬಾಘ್ ಪ್ರದೇಶಲ್ಲಿರುವ ಹೋಟೆಲ್​ ಅರಪಿತ್​​ ಪ್ಯಾಲೇಸ್​ಗೆ ಮುಂಜಾನೆ 4.35ಕ್ಕೆ ಬೆಂಕಿ ತಗುಲಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮಹಿಳೆ ಹಾಗೂ ಒಂದು ಮಗು ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಹೋಟೆಲ್​ ಕಿಟಕಿಯಿಂದ ಜಿಗಿಯಲು ಹೋಗಿ ಮೃತಪಟ್ಟಿದ್ದಾರೆ.

ಗಾಯಗೊಂಡಿರುವ 35 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅಗ್ನಿ ಅವಘಡ ಸಂಭವಿಸುವ ವೇಳೆ ಸುಮಾರು 65 ಮಂದಿ ಹೋಟೆಲ್​​ನಲ್ಲಿ ಮಲಗಿದ್ದರು. ಮೃತಪಟ್ಟವರಲ್ಲಿ ಹೆಚ್ಚು ಮಂದಿ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ​

ಅಗ್ನಿಶಾಮಕ ಠಾಣೆಗೆ ಮುಂಜಾನೆ 4.30 ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿರುವುದಾಗಿ ಕರೆ ಬಂತು. ಮೊದಲಿಗೆ ಹೋಟೆಲ್​ನ 4ನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ನಂತರ 2ನೇ ಮಹಡಿಯವರೆಗೂ ವ್ಯಾಪಿಸಿತು. ಆದರೆ, ನೆಲಮಹಡಿಗೆ ಯಾವುದೇ ಹಾನಿಯಾಗಿಲ್ಲ ಎಂದು ದೆಹಲಿಯ ಅಗ್ನಿಶಾಮಕ ಸೇವೆಗಳ ನಿರ್ದೇಶಕ ಜಿ.ಸಿ.ಮಿಶ್ರಾ ಅವರು ತಿಳಿಸಿದ್ದಾರೆ. ​

ಮುಂಜಾನೆ ಆರಂಭವಾದ ಬೆಂಕಿ ಮೇಲಿನ ಮಹಡಿಯ 40 ಕೋಣೆಗಳಲ್ಲಿ ದಟ್ಟ ಹೊಗೆ ಹಾಗೂ ಬೆಂಕಿಯಿಂದ ಸುಮಾರು 7 ಗಂಟೆಯವರೆಗೂ ಒಂದೇ ಸಮನೆ ಉರಿದಿದೆ. ನಮಗೆ ಕರೆ ಬಂದ ತಕ್ಷಣ ಸ್ಥಳಕ್ಕೆ 20 ಅಗ್ನಿಶಾಮಕ ವಾಹನಗಳು ತೆರಳಿದವು. ಅಷ್ಟರಲ್ಲಾಗಲೇ ಬೆಂಕಿ ಎಲ್ಲೆಡೆ ಆವರಿಸಿದ್ದರಿಂದ ನಮ್ಮ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು ಎಂದು ಮಿಶ್ರಾ ತಿಳಿಸಿದ್ದಾರೆ.

ಹೋಟೆಲ್​ ಕಾರಿಡಾರ್​ನಲ್ಲಿ ಮರದ ಹಲಗೆ ಇದ್ದುದ್ದರಿಂದ ಒಳಗೆ ಸಿಲುಕಿಕೊಂಡಿದ್ದವರು ಅದನ್ನು ಬಳಸಲು ಸಾಧ್ಯವಾಗಿರಲಿಲ್ಲ. ಈ ವೇಳೆ ಇಬ್ಬರು ವ್ಯಕ್ತಿಗಳು ಕಟ್ಟಡದಿಂದ ಜಿಗಿದು ಮೃತಪಟ್ಟಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿ ವಿಪಿನ್​ ಕೆಂಟಾಲ್​ ತಿಳಿಸಿದ್ದಾರೆ.

ಸದ್ಯ ಬೆಂಕಿಯನ್ನು ನಂದಿಸಲಾಗಿದ್ದು, ಸ್ಥಳವನ್ನು ತಂಪುಗೊಳಿಸುವಿಕೆ ಕಾರ್ಯಾಚರಣೆ ನಡೆಯುತ್ತಿದೆ. ಹೋಟೆಲ್​ನಲ್ಲಿ ಯಾರಾದರೂ ಸಿಲುಕಿಕೊಂಡಿರುವ ಬಗ್ಗೆ ತಿಳಿಯಲು ಶೋಧ ಕಾರ್ಯ ಮುಂದುವರಿದಿದೆ.

ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಆದರೆ, ಶಾರ್ಟ್​ ಸರ್ಕಿಟ್​ನಿಂದಾಗಿ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಘಟನೆ ಸಂಬಂಧ ತನಿಖೆಗೆ ದೆಹಲಿ ಸರ್ಕಾರ ಆದೇಶಿಸಿದೆ.

ಪ್ರಧಾನಿ ಸಂತಾಪ
ಅಗ್ನಿ ಅವಘಡದಲ್ಲಿ ಮೃತಪಟ್ಟ ಕುಟುಂಬದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದು, ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಆಪ್ ಸಂಭ್ರಮ ರದ್ದು: ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆ ಆಮ್ ಆದ್ಮಿ ಪಕ್ಷ ಸೋಮವಾರ ಸಂಭ್ರಮಾಚರಣೆ ಹಮ್ಮಿಕೊಂಡಿತ್ತು. ಆದರೆ, ಘಟನೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ರದ್ದುಗೊಂಡಿತು. ಐಆರ್​ಎಸ್ ಅಧಿಕಾರಿ ಜಿಗಿದು ಸಾವು: ಹೋಟೆಲ್ ಕಟ್ಟಡದಿಂದ ಇಬ್ಬರು ವ್ಯಕ್ತಿಗಳು ಕೆಳಕ್ಕೆ ಜಿಗಿದು ಮೃತಪಟ್ಟಿದ್ದಾರೆ. ಆ ಪೈಕಿ ಮೃತ ಸುರೇಶ್ ಕುಮಾರ್, ಭಾರತೀಯ ಕಂದಾಯ ಸೇವೆ ಅಧಿಕಾರಿಯಾಗಿದ್ದರು. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ. ಅವರು ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.

ಎನ್​ಒಸಿ ಇರಲಿಲ್ಲ!

ಅಗ್ನಿ ಅವಘಡ ಸುರಕ್ಷತೆಗೆ ಅಗತ್ಯ ಕ್ರಮಗಳ ಕುರಿತು ಪರಿಶೀಲನೆ ನಡೆಸಿ ಸ್ಥಳೀಯ ಅಧಿಕಾರಿಗಳು ನೀಡಬೇಕಿದ್ದ ನಿರಾಕ್ಷೇಪಣಾ ಪತ್ರವನ್ನು (ಎನ್​ಒಸಿ) ಹೋಟೆಲ್ ಪಡೆದಿರಲಿಲ್ಲ .2014 , 2017ರಲ್ಲಿ ಮಾತ್ರ ಎನ್​ಒಸಿ ಪಡೆಯಲಾಗಿದೆ. ನಂತರದ ದಿನಗಳಲ್ಲಿ ಅಧಿಕಾರಿಗಳು ಹೋಟೆಲ್​ನ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸಿಯೂ ಇಲ್ಲ, ಹೋಟೆಲ್ ಮಾಲೀಕರು ಕೂಡ ಆ ಗೋಜಿಗೆ ಹೋಗಿರಲಿಲ್ಲ ಎಂದು ಬಹಿರಂಗವಾಗಿದೆ.

ತುರ್ತು ನಿರ್ಗಮನ ದಾರಿಯನ್ನು ನಾವು ಗಮನಿಸಿದೆವು. ಅಲ್ಲಿ ಅಕ್ರಮವೇ ಎದ್ದು ಕಾಣುತ್ತಿದೆ. ತುಂಬಾ ಕಿರಿದಾದ ದಾರಿ ಇದೆ. ಬಹುತೇಕ ಜನರು ಅಪಾಯಕಾರಿ ಅನಿಲದಿಂದ ಉಸಿರುಗಟ್ಟಿ ಸತ್ತಿದ್ದಾರೆ.

| ಕೆ.ಜೆ. ಆಲ್ಪೋನ್ಸ್ ಕೇಂದ್ರ ಸಚಿವ