ಪಾಲಿಕೆ ಉಪ ಚುನಾವಣೆ 17 ಅಭ್ಯರ್ಥಿಗಳು ಕಣದಲ್ಲಿ

ಬೆಂಗಳೂರು: ಬಿಬಿಎಂಪಿಯ ಎರಡು ವಾರ್ಡ್​ಗಳಿಗೆ ಮೇ 29ರಂದು ನಡೆಯಲಿರುವ ಉಪಚುನಾವಣೆಗೆ ಅಂತಿಮವಾಗಿ 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕಾವೇರಿಪುರ ವಾರ್ಡ್​ನ ಸದಸ್ಯರಾಗಿದ್ದ ರಮೀಳಾ ಉಮಾಶಂಕರ್ ಹಾಗೂ ಸಗಾಯಿಪುರ ವಾರ್ಡ್​ನ ಸದಸ್ಯರಾಗಿದ್ದ ಏಳುಮಲೈ ನಿಧನರಾದ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಸಗಾಯಿಪುರ ವಾರ್ಡ್​ನಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಮಾತ್ರವಲ್ಲದೆ 11 ಪಕ್ಷೇತರರು ಕಣದಲ್ಲಿದ್ದಾರೆ. ಕಾವೇರಿಪುರ ವಾರ್ಡ್​ನಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಇಬ್ಬರು ಪಕ್ಷೇತರರಿದ್ದಾರೆ.

ಬಿಬಿಎಂಪಿಯಲ್ಲಿ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ತಲಾ ಒಂದೊಂದು ವಾರ್ಡ್​ನಲ್ಲಿ ಸ್ಪರ್ಧಿಸಿವೆ. ಆದರೆ, ಎರಡೂ ಕಡೆಗಳಲ್ಲಿ ಬಂಡಾಯದ ಭೀತಿ ಎದುರಾಗಿದೆ. ಸಗಾಯಿಪುರದಲ್ಲಿ ಏಳುಮಲೈ ಕುಟುಂಬದಲ್ಲೇ ಅಪಸ್ವರ ಕೇಳಿಬಂದಿದೆ. ಇನ್ನು ಜೆಡಿಎಸ್​ನಿಂದ ಟಿಕೆಟ್ ಬಯಸಿದ್ದ ಮಾರಿಮುತ್ತು ಪಕ್ಷೇತರರಾಗಿ ಸ್ಪರ್ಧೆಗಿಳಿದಿದ್ದಾರೆ. ಇದೇ ಪರಿಸ್ಥಿತಿ ಕಾವೇರಿಪುರ ವಾರ್ಡ್​ನಲ್ಲೂ ಇದೆ. ಇಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸುಶೀಲಾ ಸ್ಪರ್ಧಿಸಿದ್ದಾರೆ. ಈ ವಾರ್ಡ್​ಗೆ

ತಮ್ಮ ಕುಟುಂಬದವರು ಇಲ್ಲವೇ ಸಂಬಂಧಿಗಳಿಗೆ ಟಿಕೆಟ್ ಕೊಡಿಸಬೇಕು ಎಂದು ಉಮಾಶಂಕರ್ ಪ್ರಯತ್ನಿಸಿದ್ದರು. ಇದಕ್ಕೆ ಜೆಡಿಎಸ್ ನಾಯಕರು ಒಪ್ಪಲಿಲ್ಲ. ಇದರಿಂದ ಉಮಾಶಂಕರ್ ಅಸಮಾಧಾನಗೊಂಡಿದ್ದಾರೆ. ಎರಡೂ ಕಡೆಗಳಲ್ಲಿ ಆಯಾ ಪಕ್ಷಗಳಲ್ಲೇ ಅಸಮಾಧಾನವಿರುವುದರಿಂದ ಇದರ ಲಾಭ ಪಡೆದುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಸಗಾಯಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜೇಯೆರೀಮ್ ಕಾವೇರಿಪುರದಲ್ಲಿ ಪಲ್ಲವಿ ಕಣದಲ್ಲಿದ್ದಾರೆ.

Leave a Reply

Your email address will not be published. Required fields are marked *