More

  17 ವರ್ಷದ ನಂತರ ಕಳ್ಳನ ಬಂಧನ

  ಬಸವಕಲ್ಯಾಣ: ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ೧೭ ವರ್ಷದಿಂದ ತಲೆಮರಿಸಿಕೊಂಡ ಆರೋಪಿಯನ್ನು ಗ್ರಾಮೀಣ ಠಾಣೆ ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹುಮನಾಬಾದ್ ಡಿವೈಎಸ್‌ಪಿ ಮಾರ್ಗದರ್ಶನದಲ್ಲಿ ಮಂಠಾಳ ಸಿಪಿಐ ಕೃಷ್ಣಕುಮಾರ ನೇತೃತ್ವದಲ್ಲಿ ಸಿಬ್ಬಂದಿ ತಂಡ ದಾಳಿ ನಡೆಸಿ ಆರೋಪಿ ನಾರಾಯಣನನ್ನು ಬಂಧಿಸಿದ್ದಾರೆ.

  ೨೦೦೬ ಜೂನ್ ೨೧ ರಂದು ಗುಂಡಪ್ಪ ಎಂಬುವವರು ಪತ್ನಿ ಹಾಗೂ ಮಗನೊಂದಿಗೆ ದ್ವಿಚಕ್ರ ವಾಹನದ ಮೇಲೆ ರಾಜೇಶ್ವರ ಗ್ರಾಮದಿಂದ ಇಸ್ಲಾಂಪುರಕ್ಕೆ ತೆರಳುವಾಗ ನಾಲ್ವರು ಅಪರಿಚಿತರು ಕಲ್ಲಿನಿಂದ ಹೊಡೆದು, ಐದು ತೊಲೆ ಚಿನ್ನ, ೨,೭೦೦ ನಗದು ಹಾಗೂ ನೋಕಿಯಾ ಮೊಬೈಲ್ ಸೇರಿ ಒಟ್ಟು ೪೪,೭೦೦ ರೂ. ಮೌಲ್ಯದ ವಸ್ತು ದೋಚಿಕೊಂಡು ಪರಾರಿಯಾಗಿದ್ದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  ಈ ಕುರಿತು ಬೀದರ್ ತಾಲೂಕಿನ ಅಲಿಯಂಬರ ತಾಂಡಾ ನಿವಾಸಿಗಳಾದ ತುಳಸಿರಾಮ ರಾಠೋಡ್, ವಿಠಲ ರಾಠೋಡ್ ಹಾಗೂ ಭಾಲ್ಕಿ ತಾಲೂಕಿನ ಹಾಲಹಳ್ಳಿ ತಾಂಡಾದ ಮನೋಹರ ಜಾಧವ್‌ರನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಅಲಿಯಂಬರ ತಾಂಡಾ ನಿವಾಸಿ ನಾರಾಯಣನನ್ನು ೧೭ ವರ್ಷದ ನಂತರ ಬಂಧಿಸಲಾಗಿದೆ.

  ನಾರಾಯಣ ವಿರುದ್ಧ ೨೦೦೭ರ ಜುಲೈ ೧೫ರಂದು ನಾಪತ್ತೆ ಅಡಿ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪಣೆ ಪತ್ರ ಸಲ್ಲಿಸಲಾಗಿತ್ತು. ನ್ಯಾಯಾಲಯದಿಂದ ಹಲವು ಬಾರಿ ವಾರೆಂಟ್ ಸ್ವೀಕೃತವಾದರೂ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಿಸಿಕೊಂಡಿದ್ದ. ಹೀಗಾಗಿ ನ್ಯಾಯಾಲಯ ೨೦೨೦ ಫೆಬ್ರವರಿ ೨೭ರಂದು ಎಲ್‌ಪಿಆರ್ ಅಂತ ಆದೇಶ ಮಾಡಿತ್ತು. ತಲೆಮರಿಸಿಕೊಂಡ ಆರೋಪಿ ನಾರಾಯಣ ಹೈದರಾಬಾದ್‌ನಲ್ಲಿ ಇರುವುದನ್ನು ಪತ್ತೆ ಹಚ್ಚಿ ಮಂಗಳವಾರ ಆತನಿಂದ ಐದು ಗ್ರಾಮ್ ಬಂಗಾರದ ಝಮಕಾಗಳು ಜಪ್ತಿ ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಪೊಲೀಸ್ ಸಿಬ್ಬಂದಿ ಸಂತೋಷ, ಸತೀಷ, ಬಲವಂತ ರೆಡ್ಡಿ, ಅನೀಲ, ಪ್ರತಾಪ, ದಯಾನಂದ ರೆಡ್ಡಿ, ಸಚೀನ್ ಭಾಗವಹಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts