17 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಗೆ ಸಿದ್ಧತೆ

ಶಿವಮೊಗ್ಗ: ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಏ. 29 ಮತ್ತು 30ರಂದು ಜಿಲ್ಲೆಯ 17 ಕೇಂದ್ರಗಳಲ್ಲಿ ನಡೆಯಲಿದ್ದು ಪಾರದರ್ಶಕ ಹಾಗೂ ಸುಗಮವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಡಿಸಿ ಕೆ.ಎ.ದಯಾನಂದ ಅಧಿಕಾರಿಗಳಿಗೆ ಸೂಚಿಸಿದರು.

ಸಿಇಟಿ ಪರೀಕ್ಷಾ ಸಿದ್ಧತೆ ಬಗ್ಗೆ ಗುರುವಾರ ಪೂರ್ವಭಾವಿ ಸಭೆ ನಡೆಸಿದ ಅವರು, ಶಿವಮೊಗ್ಗದಲ್ಲಿ 12, ಭದ್ರಾವತಿಯಲ್ಲಿ 3 ಹಾಗೂ ಸಾಗರದಲ್ಲಿ 2 ಪರೀಕ್ಷಾ ಕೇಂದ್ರಗಳಿವೆ. 6,807 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆಗಳ ಬಂಡಲ್​ಗಳನ್ನು ಪರೀಕ್ಷಾ ಕೇಂದ್ರಗಳಿಗೆ ವಿತರಿಸಲು ಹಾಗೂ ಪರೀಕ್ಷಾ ನಂತರ ಒಎಂಆರ್​ಗಳನ್ನು ಖಜಾನೆಯಲ್ಲಿ ಇರಿಸಲು ನಾಲ್ವರ ತ್ರಿಸದಸ್ಯ ಸಮಿತಿ ರಚಿಸಲಾಗಿದೆ ಎಂದರು.

ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ವೀಕ್ಷಕರನ್ನು ನೇಮಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿ ಅಥವಾ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರೂ ಪರೀಕ್ಷಾ ಕೇಂದ್ರದ ಆವರಣ ಪ್ರವೇಶಿಸದಂತೆ ಮೇಲ್ವಿಚಾರಕರು ಹಾಗೂ ಪೊಲೀಸ್ ಸಿಬ್ಬಂದಿ ಎಚ್ಚರಿಕೆ ವಹಿಸಬೇಕು. ಯಾವುದೆ ಅವ್ಯವಹಾರ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದರು.

ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಸೂಕ್ತ ತರಬೇತಿಯೊಂದಿಗೆ ಯಾವುದೆ ಗೊಂದಲ, ಅನುಮಾನಕ್ಕೆ ಅವಕಾಶವಾಗದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಪರೀಕ್ಷಾರ್ಥಿಗಳಿಗೆ ಅಗತ್ಯವಿರುವ ಆಸನ ವ್ಯವಸ್ಥೆ ಇನ್ನಿತರ ಮೂಲಸೌಕರ್ಯಗಳನ್ನು ಕಲ್ಪಿಸುವುದು ಅವರ ಜವಾಬ್ದಾರಿ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮೊಬೈಲ್, ಪುಸ್ತಕ, ಬ್ಯಾಗ್, ಪರ್ಸ್, ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು, ಸ್ಮಾರ್ಟ್ ವಾಚ್​ಗಳನ್ನು ತರುವಂತಿಲ್ಲ. ಒಂದು ವೇಳೆ ಇಂತಹ ವಸ್ತುಗಳನ್ನು ತಂದಿದ್ದರೆ ಅವರದ್ದೇ ಜವಾಬ್ದಾರಿ ಮೇರೆಗೆ ಪರೀಕ್ಷಾ ಕೇಂದ್ರದಲ್ಲಿನ ಒಂದು ಖಾಲಿ ಕೊಠಡಿಯಲ್ಲಿ ಇಡಲು ಅವಕಾಶ ನೀಡಬೇಕು ಎಂದು ಡಿಸಿ ತಿಳಿಸಿದರು.

ಎಡಿಸಿ ಪೂರ್ಣಿಮಾ, ಡಿಡಿಪಿಯು ಇಮ್ತಿಯಾಜ್ ಅಹ್ಮದ್, ಜಿಲ್ಲಾ ಖಜಾನಾಧಿಕಾರಿ ಪಡಿಯಪ್ಪ, ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.