ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಕರ್ನಾಟಕ ಕೋಟಾದ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಗೋಲ್‍ಮಾಲ್ ನಡೆದಿರುವುದು ಸಿಬಿಐ ತನಿಖೆಯಲ್ಲಿ ದೃಢಪಟ್ಟಿದೆ. ಕರ್ನಾಟಕದಲ್ಲಿ ವಾಸವಿರುವಂತೆ ನಕಲಿ ದಾಖಲೆ ಸಲ್ಲಿಸಿ 163 ಅಭ್ಯರ್ಥಿಗಳು ಹುದ್ದೆ ಗಿಟ್ಟಿಸಿದ್ದಾರೆಂದು ಸಿಬಿಐ ವಿಶೇಷ ಕೋರ್ಟ್ಗೆ ತನಿಖಾಧಿಕಾರಿಗಳು ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಹೀಗಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 163 ಪೇದೆಗಳಿಗೆ ಕೆಲಸ ಕಳೆದುಕೊಳ್ಳುವ ಜತೆಗೆ ಜೈಲಿಗೂ ಹೋಗುವ ಆತಂಕ ಶುರುವಾಗಿದೆ.
2016ರಲ್ಲಿ ನಡೆದ ಬಿಎಸ್ಎಫ್ ಪೇದೆಗಳ ಹುದ್ದೆ ನೇಮಕಾತಿಯಲ್ಲಿ ಈ ಅಕ್ರಮ ನಡೆದಿದೆ. 3 ವರ್ಷಗಳ ಸುದೀರ್ಘ ತನಿಖೆ ಪೂರ್ಣಗೊಳಿಸಿರುವ ಸಿಬಿಐ, ಬಿಎಸ್ಎಫ್ ತರಬೇತಿ ವಿಭಾಗದ ಪೇದೆ ಚಂದ್ರಶೇಖರ್, ವಿದ್ಯಾರಣ್ಯಪುರ ಗುಡ್ವಿಲ್ ಕೋಚಿಂಗ್ ಸೆಂಟರ್ ಮಾಲೀಕ ಸತ್ಯ ಪ್ರಕಾಶ್ ಸಿಂಗ್, ಬೆಂಗಳೂರು ಉತ್ತರ ವಿಭಾಗದ ತಹಸೀಲ್ದಾರ್ ಕಚೇರಿ ನೌಕರ ವಿ.ಕೆ.ಕಿರಣ್ ಕುಮಾರ್, ಖಾಸಗಿ ವ್ಯಕ್ತಿ ಸುರೇಂದ್ರ ಕಟೋಚ್ ಸೇರಿ 167 ಮಂದಿ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದೆ.
ಆರೋಪಿಗಳ ವಿಚಾರಣೆ: ಕರ್ನಾಟಕದಲ್ಲಿ ಹಣ ನೀಡಿದರೆ ನಕಲಿ ದಾಖಲೆ ಸೃಷ್ಟಿಸಿ ಕೊಡುತ್ತಿದ್ದ ಬಗ್ಗೆ ಏಜೆಂಟ್ಗಳು ಮಾಹಿತಿ ನೀಡುತ್ತಿದ್ದರು. ಏಜೆಂಟ್ಗಳ ಸಹಾಯದಿಂದ ಕೃತ್ಯ ಎಸಗಿರುವುದಾಗಿ ಆರೋಪಿಗಳು ಸಿಬಿಐ ವಿಚಾರಣೆಯಲ್ಲಿ ತಿಳಿಸಿದ್ದಾರೆ.
ತಲಾ 4 ಲಕ್ಷ ರೂ.ವಸೂಲಿ: ಅಭ್ಯರ್ಥಿಗಳಿಗೆ ಸತ್ಯಪ್ರಕಾಶ್ ಸಿಂಗ್ನ ಪರಿಚಯ ಮಾತ್ರ ಇತ್ತು. ಇತರ ಆರೋಪಿಗಳ ಬಗ್ಗೆ ಮಾಹಿತಿ ಇರಲಿಲ್ಲ. ನಕಲಿ ದಾಖಲೆ ಸೃಷ್ಟಿಸಿ ನೇಮಕಾತಿಗೆ ಸಹಕರಿಸಲು ತಲಾ ಅಭ್ಯರ್ಥಿಯಿಂದ 3 ರಿಂದ 4 ಲಕ್ಷ ರೂ. ವಸೂಲಿ ಮಾಡಿದ್ದ ಸತ್ಯಪ್ರಕಾಶ್ ಸಿಂಗ್, ಬಂದ ಹಣದಲ್ಲಿ ಇತರ ಮೂವರು ಆರೋಪಿಗಳಿಗೆ ಒಂದಷ್ಟು ಹಣ ಕೊಟ್ಟಿದ್ದ. ಸತ್ಯಪ್ರಕಾಶ್ ಸಿಂಗ್ ಹಾಗೂ ಸುರೇಂದ್ರ ಈ ಹಿಂದೆ ಶಾಲಾ ಪ್ರಾಂಶುಪಾಲರು, ನೋಟರಿ, ಮೆಡಿಕಲ್ ಸೂಪರಿಂಟೆಂಡೆಂಟ್ಗಳ ಸಹಿ ನಕಲಿ ಮಾಡಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ನೀಡುತ್ತಿದ್ದ ಸಂಗತಿ ತನಿಖೆಯಲ್ಲಿ ಬಯಲಾಗಿದೆ ಎಂದು ಸಿಬಿಐ ಹೇಳಿದೆ.
ಮುಂದೇನಾಗುತ್ತೆ?: ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿರುವುದರಿಂದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಲಿದೆ. ಚಾರ್ಜ್ಶೀಟ್ನಲ್ಲಿ ಹೆಸರು ಉಲ್ಲೇಖವಾಗಿರುವ 163 ಅಭ್ಯರ್ಥಿಗಳು ದೇಶದ ವಿವಿಧ ರಾಜ್ಯಗಳಲ್ಲಿ ಬಿಎಸ್ಎಫ್ ಪೇದೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಕ್ರಮವಾಗಿ ನೇಮಕವಾಗಿರುವುದಕ್ಕೆ ಸಿಬಿಐ ಸಾಕ್ಷ್ಯ ಒದಗಿಸಿದೆ. ಆರೋಪ ಸಾಬೀತಾದರೆ ಅವರನ್ನು ಕೆಲಸದಿಂದ ವಜಾಗೊಳಿಸುವಂತೆ ಕೋರ್ಟ್ ಆದೇಶಿಸಬಹುದು. ಜೈಲು ಶಿಕ್ಷೆಯೂ ಆಗಬಹುದು. ಈಗಾಗಲೇ ಕೋರ್ಟ್ಗೆ ಹಾಜರಾಗುವಂತೆ ಸಿಬಿಐ ನ್ಯಾಯಾಲಯ ಎಲ್ಲ ಆರೋಪಿಗಳಿಗೂ ಸಮನ್ಸ್ ಜಾರಿ ಮಾಡಿದೆ.
ವಂಚನೆ ಹೇಗೆ?
ಬಿಎಸ್ಎಫ್ನಲ್ಲಿ ಆಯಾ ರಾಜ್ಯಗಳ ಕೋಟಾದಡಿ ಅಭ್ಯರ್ಥಿಗಳ ನೇಮಕಾತಿ ನಡೆಯುತ್ತದೆ. ಅದರಂತೆ 2016ರಲ್ಲಿ ಕರ್ನಾಟಕ ಕೋಟಾದಡಿ ಪೇದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ಕರ್ನಾಟಕದಿಂದ ಅರ್ಜಿ ಸಲ್ಲಿಸಿದವರ ಸಂಖ್ಯೆ ಕಡಿಮೆ ಇತ್ತು. ಪ್ರಮುಖ ಆರೋಪಿ ಚಂದ್ರಶೇಖರ್ ಹಾಗೂ ಇತರ ಆರೋಪಿಗಳು ಹೊರ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣ, ದೆಹಲಿ, ರಾಜಸ್ಥಾನದ ಅಭ್ಯರ್ಥಿಗಳಿಂದ ಹಣ ಪಡೆದು ನಕಲಿ ದಾಖಲೆ ಸೃಷ್ಟಿಸಿ ಕರ್ನಾಟಕ ಕೋಟಾದಡಿ ಕೆಲಸ ಕೊಡಿಸಿದ್ದರು. ಬಿಎಸ್ಎಫ್ನ ಎಸ್ಟಿಸಿಯಲ್ಲಿ ಪೇದೆಯಾಗಿದ್ದ ಚಂದ್ರಶೇಖರ್ ಸಂದರ್ಶನದ ಸಮಯದಲ್ಲಿ ಅಭ್ಯರ್ಥಿಗಳಿಗೆ ಬೇಕಾದ ವೈದ್ಯಕೀಯ ಪರೀಕ್ಷೆಗೆ ಪೂರಕವಾದ ನಕಲಿ ದಾಖಲೆ ಒದಗಿಸಿದ್ದ.
ಇನ್ನೊಬ್ಬ ಆರೋಪಿ ಸತ್ಯಪ್ರಕಾಶ್ ಬೆಂಗಳೂರು ಉತ್ತರ ತಾಲ್ಲೂಕಿನ ತಹಸೀಲ್ದಾರರ ಕಚೇರಿಯಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದ ಕಿರಣ್ ಹಾಗೂ ಏಜೆಂಟ್ ಸುರೇಂದ್ರ ಅವರನ್ನು ಸಂರ್ಪಸಿ ಹಣದ ಆಮಿಷವೊಡ್ಡಿ ಹೊರ ರಾಜ್ಯದ 163 ಮಂದಿಗೆ ರಾಜ್ಯದಲ್ಲೇ ವಾಸಿಸುತ್ತಿರುವಂತೆ ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್, ಶೈಕ್ಷಣಿಕ ದಾಖಲೆ, ವಾಸದ ದೃಢೀಕರಣ ಪ್ರಮಾಣಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿಕೊಟ್ಟಿದ್ದ. ತಹಸೀಲ್ದಾರರು ಹಾಗೂ ಇತರ ಅಧಿಕಾರಿಗಳ ನಕಲಿ ಸಹಿ (ಫೋರ್ಜರಿ) ಮಾಡಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ದಾಖಲೆಗಳಿಂದ ಸಿಕ್ಕಿಬಿದ್ದರು
ನಕಲಿ ದಾಖಲೆ ಸಲ್ಲಿಸಿ ಕರ್ನಾಟಕ ಕೋಟಾದಡಿ 163 ಅಭ್ಯರ್ಥಿಗಳು ಪೇದೆಗಳಾಗಿ ನೇಮಕಗೊಂಡಿದ್ದರು. ಆದರೆ, 2016ರಲ್ಲೇ ಶೈಕ್ಷಣಿಕ ದಾಖಲೆ ಮತ್ತು ವಾಸದ ದಾಖಲಾತಿ ಪರಿಶೀಲನೆ ವೇಳೆ ಬಿಎಸ್ಎಫ್ ಅಧಿಕಾರಿಗಳಿಗೆ ಅನುಮಾನ ಬಂದಿತ್ತು. ಮತ್ತೊಮ್ಮೆ ದಾಖಲೆ ಪಡೆದು ಪರಿಶೀಲನೆ ನಡೆಸಿದಾಗ ನಕಲಿ ಎಂಬುದು ತಿಳಿದಿತ್ತು. ಹೀಗಾಗಿ ತನಿಖೆ ನಡೆಸುವಂತೆ ಸಿಬಿಐಗೆ ದೂರು ನೀಡಿತ್ತು. 2016ರ ಮೇ ತಿಂಗಳಲ್ಲೇ ಪೇದೆ ಚಂದ್ರಶೇಖರ್, ಕೋಚಿಂಗ್ ಸೆಂಟರ್ ಮಾಲೀಕ ಸತ್ಯ ಪ್ರಕಾಶ್ ಸಿಂಗ್, ಬೆಂಗಳೂರು ಉತ್ತರ ವಿಭಾಗದ ತಹಸೀಲ್ದಾರ್ ಕಚೇರಿ ನೌಕರ ವಿ.ಕೆ.ಕಿರಣ್ ಕುಮಾರ್, ಏಜೆಂಟ್ ಸುರೇಂದ್ರ ಕಟೋಚ್ನನ್ನು ಬಂಧಿಸಲಾಗಿತ್ತು. ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಸರ್ಕಾರಿ ಅಧಿ ಕಾರಿಗಳ ನಕಲಿ ಸೀಲ್, ಮತ್ತಿತರ ದಾಖಲಾತಿಗಳು ಪತ್ತೆಯಾಗಿತ್ತು.
ನೇಮಕ ಪ್ರಕ್ರಿಯೆ ಹೇಗಿರುತ್ತೆ?
ಬಿಎಸ್ಎಫ್ ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಕರ್ನಾಟಕ, ತಮಿಳುನಾಡು, ಕೇರಳ, ಉತ್ತರ ಪ್ರದೇಶ ಸೇರಿ ದೇಶದ ಪ್ರತಿ ರಾಜ್ಯದ ಕೋಟಾದಡಿಯಲ್ಲಿ ನಿಗದಿತ ಹುದ್ದೆ ನೀಡಲಾಗುತ್ತದೆ. ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು, 18 ರಿಂದ 23 ವರ್ಷದ ಒಳಗಿನವರಾಗಿರಬೇಕು. ಬಿಎಸ್ಎಫ್ ಕಾನ್ಸ್ಟೇಬಲ್ ಹುದ್ದೆಗೆ ನಡೆಯುವ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಮೆಡಿಕಲ್ ಚೆಕಪ್ ಸೇರಿ ಮೂರು ಬಗೆಯ ಆಯ್ಕೆ ಪ್ರಕ್ರಿಯೆ ಇರುತ್ತದೆ. ಆಯ್ಕೆಯಾದವರನ್ನು ದೇಶದ ಯಾವ ರಾಜ್ಯಕ್ಕೆ ಬೇಕಾದರೂ ಸೇವೆಗೆ ಕಳಿಸಬಹುದು. 21,700 ರಿಂದ 69,100 ರೂ.ವರೆಗೆ ವೇತನ ನಿಗದಿಪಡಿಸಲಾಗಿದೆ. ಆಯಾ ರಾಜ್ಯಗಳ ಕೋಟಾದಡಿ ಸಿಗುವ ಹುದ್ದೆ ಪಡೆದುಕೊಳ್ಳಲು ಆ ರಾಜ್ಯದಲ್ಲಿ ವಾಸಿಸುವವರು ಮಾತ್ರ ಅರ್ಹರು ವಿನಾ ಹೊರ ರಾಜ್ಯದ ಅಭ್ಯರ್ಥಿಗಳನ್ನು ನೇಮಿಸಲು ಅವಕಾಶವಿಲ್ಲ.
ಅಕ್ರಮ ನೇಮಕಾತಿ ನಡೆದಿರುವುದು ಸಿಬಿಐ ತನಿಖೆಯಲ್ಲಿ ಸಾಬೀತಾಗಿದೆ. ಪ್ರಮುಖ ಆರೋಪಿಗಳು ಸೇರಿ ಹಲವರನ್ನು ಸಿಬಿಐ ವಿಚಾರಣೆ ನಡೆಸಿದೆ. 3 ವರ್ಷ ತನಿಖೆ ನಡೆಸಿದ ಬಳಿಕ ಚಾರ್ಜ್ಶೀಟ್ ಹಾಕಿದ್ದು, ನ್ಯಾಯಾಲಯ ಸದ್ಯದಲ್ಲೇ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
| ಶಿವಾನಂದ ಪೆರ್ಲ ಹಿರಿಯ ಸರ್ಕಾರಿ ಅಭಿಯೋಜಕ (ಸಿಬಿಐ ಕೋರ್ಟ್)
| ಅವಿನಾಶ ಮೂಡಂಬಿಕಾನ ಬೆಂಗಳೂರು