ಭಾರಿ ಹಿಮಪಾತಕ್ಕೆ 10 ಜನ ವಿದೇಶಿಗರು ಸೇರಿ 16 ಜನ ನಾಪತ್ತೆ

ಚಂಬಾ(ಹಿಮಾಚಲ ಪ್ರದೇಶ): ಹವಾಮಾನ ವೈಪರೀತ್ಯದಿಂದಾಗಿ ಹಿಮಾಚಲ ಪ್ರದೇಶದ ಚಂಬಾ ಪ್ರದೇಶದಿಂದ 10 ಜನ ವಿದೇಶಿಗರು ಸೇರಿ 16 ಜನ ಚಾರಣಿಗಳು ಶನಿವಾರ ನಾಪತ್ತೆಯಾಗಿದ್ದಾರೆ.

ಪೊಲೀಸರ ತಂಡ, ಸ್ಥಳೀಯರು ಮತ್ತು ಪರ್ವತಾರೋಹಣ ತಜ್ಞರು ಹುಡುಕಾಟ ಕೈಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಕಳೆದ ವಾರವಷ್ಟೇ ಐಐಟಿ ವಿದ್ಯಾರ್ಥಿಗಳು, ಭಾರತ ಮೂಲದ ಅಮೆರಿಕ ಪ್ರಜೆಗಳು ಮತ್ತು ಇಬ್ಬರು ಜರ್ಮನ್‌ ಚಾರಣಿಗರು ಸೇರಿ ಕಾಣೆಯಾಗಿದ್ದ 45 ಜನರನ್ನು ಹಿಮಾಚಲ ಪ್ರದೇಶದ ಹಿಮಾವೃತ ಪ್ರದೇಶದಿಂದ ರಕ್ಷಿಸಿದ್ದರು. ಭಾರಿ ಹಿಮಪಾತದಿಂದಾಗಿ ಮನಾಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಉಂಟಾಗಿದ್ದ ಭೂಕುಸಿತ ಉಂಟಾಗಿದ್ದರಿಂದ ಲಾಹೌಲ್ ಕಣಿವೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು.

ರಾಜ್ಯದಲ್ಲಿ ಸೆಪ್ಟೆಂಬರ್‌ ಮಧ್ಯಭಾಗದಿಂದಲೂ ಭಾರಿ ಮಳೆ ಮತ್ತು ಹಿಮಪಾತವಾಗುತ್ತಿದ್ದು, ಭಾರತೀಯ ವಾಯುಸೇನೆ ಮತ್ತು ಗಡಿ ರಸ್ತೆ ಸಂಸ್ಥೆ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಆಯಕಟ್ಟಿನ ಪ್ರದೇಶಗಳಿಗೆ ಆಹಾರದ ಪೊಟ್ಟಣಗಳನ್ನು ಒದಗಿಸಲಾಗುತ್ತಿದೆ. (ಏಜೆನ್ಸೀಸ್)